Amma you are my breath... ಉಸಿರೊಂದೇ ಅಮ್ಮಾ.... By Kumar. B Bagival.

ಉಸಿರೊಂದೇ ಅಮ್ಮಾ…… ---------------------------- ಉಸಿರೊಂದೇ ಬಸಿರ ಒಡಲಾಚೆಗಿನ ಬದುಕು ತೆರೆದಾಗ ಹೆಸರ ಕೂಗುವುದೂ ಒಂದೇ ನನ್ನುಸಿರು "ಅಮ್ಮ" ತೋಳ್ತೆಕ್ಕೆಯ ಬಿಸಿಮಡಿಲ,ಸಡಿಲಿಸದ ಅಕ್ಕರೆಯು ನಿನಗೆ ಮಗುವೇ, ಮಿಕ್ಕರಷ್ಟೇ ನನಗೊಂದಿಷ್ಟೆಂಬ ನಿಜ ನುಡಿವ ದೈವ ನೀನೇ" ಅಮ್ಮ". ಹೃದಯ ಮಾತ್ರ ನನದಾದರೂ ಬಡಿತ ನಿನದೇ ಅಮ್ಮ ಹದವಿರುವ ಮುದದ ಕಡೆ ಇರದ ಕರುಣೆ ನಿನದು ಬದುವಿರದ ಬದುಕು ನಿನದು ಬಯಸಿದಷ್ಟು ವಿಸ್ತಾರ ನೋವಿನಲು ನಲಿವು, ದುಃಖದಲು ಸುಖದ ಹಂದರ. ನನ್ನೆಜ್ಜೆಯ ಏಳುಬೀಳುಗಳ ಏರಿಳಿತದಲಿ ಏಳನ್ನೇ ಬಯಸಿದ, ಬೀಳನ್ನು ಸಹಿಸದ ಬಯಕೆ ನಿನದು ಬೆಂದರೂ ನೋವುಂಡರೂ ತಡೆದ ಜೀವ ನಿನದು ಸಂದರೆ ಅದು ನಿನಗೇ ಈ ಜಗದ ಮುಗಿಲದಗಲಕೂ. ತೇದಿಟ್ಟ ಗಂಧ ನೀನು, ಸವೆದಿದ್ದು ನೀನು ಮೆರೆದಿದ್ದು ನಾನು ಹಚ್ಚಿಟ್ಟ ಬತ್ತಿ ನೀನು, ಉರಿದಿದ್ದು ನೀನು ಬೆಳಗಿದ್ದು ನಾನು ಬಚ್ಚಿಟ್ಟ ಬೇರು ನೀನು, ಹಿಡಿದಿಟ್ಟಿದ್ದು ನೀನು ಬೆಳೆದಿದ್ದು ನಾನು ತುತ್ತಿಟ್ಟ ದೈವ ನೀನು , ಅದನುಂಡು ತೂಗಿದ ಫಸಲು ನಾನು. ಎವೆಯಿಕ್ಕದ ಕಾಯ್ವ ಕಣ್ಣು , ಕಣ್ಣಾಗಿಹೆ ದಾರಿಯುದ್ದಕೂ ಸವೆದರೂ ಸರಿ ನಾ, ನೀ ಗುರಿಮುಟ್ಟೆಂಬ ನಿನ್ನ ಬೆಂಬಲಕೂ ನಾವೆ ನೀನೆ, ನಾವಿಕನೂ ನೀನೆ ನನ್ನ ಜಯದ ಕಡಲ ಪಯಣಕೂ ದಾವೆ ಇಲ್ಲದ ಬದುಕು ನಿನದು ,ನಿನಗಾಗಿಯಲ್ಲ ಅದು ನನಗಾಗೆ ಸೃಷ್ಟಿಯಲದ್ಭುತವು ನೀನೆ, ಧೃತಿಗೆಡದ ಮತಿಯು ನೀನು...