Posts

Showing posts with the label #kannada sahithya

ಕಾಣುತಿವೆ ನಾಳೆಗಳು.... Kaanuthive naalegalu. A poem by Kumar B Bagival

 ಕಾಣುತಿವೆ ನಾಳೆಗಳು.... ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ನಾನಾಡುವಾ ಮಾತುಗಳ ಮಂದಾಳದಲಿ  ನಾ ಮಾಡುವಾ ಕೃತಿಗಳಾಗಾಸದ ಬೆಳಕಿನಲಿ ನಾ ಸೇರುವಾ ಸಂಘಗಳ ನೆರಳಿನ ತಂಪಿನಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ಎದುರಾದ ಸವಾಲುಗಳನು ನಾ ಎದುರಿಸುವ ರೀತಿಯಲಿ ಒದರಾಡುವ ಗಾಡಿಯಲು ಅಲುಗದೇ ಕುಳಿತು ದಡ ಸೇರುವಲಿ ಆಗಸಕೆ ಹಾರುತಿಹ ಬದುಕ ಗಾಳಿಪಟದ ದಾರದ ಬಿಗಿ ಹಿಡಿತದಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ತಿರುವಿರುವ ದಾರಿಯಲಿ ನಿಯಂತ್ರಣವ ಮಾಡುವಲಿ ಬರವಿರುವ ಭೂವಿಗೊಂದಿಷ್ಟು ನೀರನುಣಿಸುವಲಿ ಕರವಿಡಿದು ಮೇಲೆತ್ತುವಲಿ ಮುಳುಗುವಡಗನು ನೀರಿನಲಿ. ರಚನೆ: ಕುಮಾರ್ ಬಿ ಬಾಗೀವಾಳ್

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

ನೀನಿಲ್ಲದ ನಾಳೆಗಳು Neenillada naalegalu a poem by Kumar B Bagival

  ನೀನಿಲ್ಲದ ನಾಳೆಗಳು ಮುಡುಪಾಗಿವೆ ನೆನಪುಗಳ ಗೊಂಚಲು, ನಿನಗಾಗಿಯೇ  ಕಾಯ್ದಿರಿಸಿದ ಕ್ಷಣಗಳು. ಪಡುಪಾಡು ಹತ್ತಿ ನಿನಗಾಗಿ ಸುತ್ತಿದ ಗಳಿಗೆಗಳು, ಕಾಡದಿರದವು ನಾಳೆಗಳನು ನೀನಿಲ್ಲದೆ ದಿನವೂ. ಒಡಲ ಸೇರಿದ ಅದೆಷ್ಟು ಸಂಕಟಗಳು, ಬಡಿದಾಡುತ್ತಲಿವೆ ಹೊರಬರಲು ಒಂದೇ ಸಮನೆ ಕಡಿದಾದ ನಿರ್ಣಯವದು ನಿನಗದೇತಕೋ ಬಿಡಿ ಬಿಡಿ ಬೇಡದಿರವು ನಾಳೆಗಳನು ಜೊತೆ ಸೇರಿಕೊಳಲು. ಸಾರಿಹೇಳುತಿವೆ ಕೇಳದ  ಸೊಲ್ಲಿನಲಿ , ಬರಿ ಮೇಲಾಟಗಳ ಸೋಲುಗೆಲುವಗಳಲ್ಲ. ನಿನ್ನನರಿಯುವ ಪರಿಯಲಿ ಬರೆದ ಪತ್ರಗಳ ಸಂಖ್ಯೆಗಳ ಏಣಿಸುತಲಿ ಮಣಿಸದಿರವು ನಾಳೆಗಳನು ನಿನ್ನೊಲವಲೆ. ರಚನೆ : ಕುಮಾರ್ ಬಿ ಬಾಗೀವಾಳ್

ತುಡಿತ Thuditha a poem by Kumar B Bagival

 ತುಡಿತ.. ನೆನೆದ ಮರುಗಳಿಗೆಯಲಿ ಮರಳಿ ಬರುವೆ. ಮನದ ಅನತಿಯಲೆ ಸುಳಿದು ಮೆರೆವೆ. ತೊರೆದು ಹೇಗಿರಲಿ ನವಿರ ಸವಿ ಸಖ್ಯವ ಬೇರೆಲ್ಲವು ಈ ಜಗದಲಿ ನನಗೆ  ನಿನಗಿಂತ ಮುಖ್ಯವಾ? ಅರೆಗಳಿಗೆ ಮರೆತರೂ ಹೊರಳಡಿ ನರಳುವೆ ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ. ಮಹಾ ಕೂಗದು ನನಗೆ ನಿನ್ನ ಮನದ ಕರೆ ಮೋಹ ಯಾಕದೋ ಗೊತ್ತಿಲ್ಲ ಅದು ಖರೆ ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು. ಕನಸಿಗೂ ಅರ್ಥ ಬೇಕಿದೆ ನನಗೀಗಲೆ ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ ಜಪವು ನೆಪವಾಗಿದೆ ಸಂಧಿಸುವ ಕಾರಣಕೆ ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ. ಬರುವೆ ಭರವಸೆಯ ಹೊತ್ತು ತರುವೆ ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ‌. ರಚನೆ: ಕುಮಾರ್ ಬಿ ಬಾಗೀವಾಳ್

ಅಂತಿಮವಾಗು… ಪರರ ಪರಪಂಚದಲಿ. Anthimavagu... a poem by Kumar B Bagival

  ಅಂತಿಮವಾಗು… ಪರರ ಪರಪಂಚದಲಿ. ನಾ ನಡೆದದ್ದೇ ಹಾದಿಯಾಗಬೇಕು  ನಾ ಕಂಡಿದ್ದೇ ನಿಜವಾಗಬೇಕು ನಾ ಕೊಂಡಿದ್ದೇ ವರವಾಗಬೇಕು ನಾ ನುಡಿದಿದ್ದೇ ಅಂತಿಮವಾಗಬೇಕು. ಎಂದಾದರೆ ಅದು ನೀನೊಬ್ಬನಿರುವ ಪರಪಂಚದಲ್ಲಿ ಮಾತ್ರ. ಬೆಳಕಾಗು ಹಾದಿಯಾಗಲು, ಕನ್ನಡಿಯಾಗು ನಿಜವಾಗಲು, ದೇವರಾಗು ವರವಾಗಲು, ಅಂತರಾತ್ಮವಾಗು ಅಂತಿಮವಾಗಲು. ಅಂದಾದರೆ ಮಾತ್ರ ನೀನಿರುವೆ ಪರರ ಪರಪಂಚದಲಿ. ರಚನೆ : ಕುಮಾರ್ ಬಿ ಬಾಗೀವಾಳ್

ಹನಿಗವನಗಳು.... Short poems By Kumar B Bagival

  ಹನಿಗವನಗಳು                 ತಡೆಯಲಾರೆ… ನಿಂತಲ್ಲಿ ನಿಲ್ಲದ ನಿನ್ನ  ನಿಂದಿಸಿ ನಿಲಿಸಲಾರೆ.. ನಿಂತ ನೀರಿನ ಮಡುವಿನ ಸೆಳೆತವನು ನಾ ಬಲ್ಲೆ.. ಎಂದೇ ನಿನ್ನನು ನಾ ತಡೆಯಲೊಲ್ಲೆ. ಫಲಿತಾಂಶ… ಹರಿದುಬಿಡು ತೋಚಿದ ದಿಕ್ಕಿಗೆ ಹರಿದ ಪರಿಣಾಮಗಳೆರಡೆ ಸೋಲುವೆ ನೀ ದೂರ ಸಾಗಿ ಹೀರಿಹೋಗುವೆ ಇಲ್ಲ ನೀ ಸೇರಿಹೋಗುವೆ ಕಡಲೊಡಲ. ರಚನೆ : ಕುಮಾರ್. ಬಿ.ಬಾಗೀವಾಳ್