Posts

Showing posts with the label #Kannada poem

ಕಾಣುತಿವೆ ನಾಳೆಗಳು.... Kaanuthive naalegalu. A poem by Kumar B Bagival

 ಕಾಣುತಿವೆ ನಾಳೆಗಳು.... ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ನಾನಾಡುವಾ ಮಾತುಗಳ ಮಂದಾಳದಲಿ  ನಾ ಮಾಡುವಾ ಕೃತಿಗಳಾಗಾಸದ ಬೆಳಕಿನಲಿ ನಾ ಸೇರುವಾ ಸಂಘಗಳ ನೆರಳಿನ ತಂಪಿನಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ಎದುರಾದ ಸವಾಲುಗಳನು ನಾ ಎದುರಿಸುವ ರೀತಿಯಲಿ ಒದರಾಡುವ ಗಾಡಿಯಲು ಅಲುಗದೇ ಕುಳಿತು ದಡ ಸೇರುವಲಿ ಆಗಸಕೆ ಹಾರುತಿಹ ಬದುಕ ಗಾಳಿಪಟದ ದಾರದ ಬಿಗಿ ಹಿಡಿತದಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ತಿರುವಿರುವ ದಾರಿಯಲಿ ನಿಯಂತ್ರಣವ ಮಾಡುವಲಿ ಬರವಿರುವ ಭೂವಿಗೊಂದಿಷ್ಟು ನೀರನುಣಿಸುವಲಿ ಕರವಿಡಿದು ಮೇಲೆತ್ತುವಲಿ ಮುಳುಗುವಡಗನು ನೀರಿನಲಿ. ರಚನೆ: ಕುಮಾರ್ ಬಿ ಬಾಗೀವಾಳ್

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

ನೀನಿಲ್ಲದ ನಾಳೆಗಳು Neenillada naalegalu a poem by Kumar B Bagival

  ನೀನಿಲ್ಲದ ನಾಳೆಗಳು ಮುಡುಪಾಗಿವೆ ನೆನಪುಗಳ ಗೊಂಚಲು, ನಿನಗಾಗಿಯೇ  ಕಾಯ್ದಿರಿಸಿದ ಕ್ಷಣಗಳು. ಪಡುಪಾಡು ಹತ್ತಿ ನಿನಗಾಗಿ ಸುತ್ತಿದ ಗಳಿಗೆಗಳು, ಕಾಡದಿರದವು ನಾಳೆಗಳನು ನೀನಿಲ್ಲದೆ ದಿನವೂ. ಒಡಲ ಸೇರಿದ ಅದೆಷ್ಟು ಸಂಕಟಗಳು, ಬಡಿದಾಡುತ್ತಲಿವೆ ಹೊರಬರಲು ಒಂದೇ ಸಮನೆ ಕಡಿದಾದ ನಿರ್ಣಯವದು ನಿನಗದೇತಕೋ ಬಿಡಿ ಬಿಡಿ ಬೇಡದಿರವು ನಾಳೆಗಳನು ಜೊತೆ ಸೇರಿಕೊಳಲು. ಸಾರಿಹೇಳುತಿವೆ ಕೇಳದ  ಸೊಲ್ಲಿನಲಿ , ಬರಿ ಮೇಲಾಟಗಳ ಸೋಲುಗೆಲುವಗಳಲ್ಲ. ನಿನ್ನನರಿಯುವ ಪರಿಯಲಿ ಬರೆದ ಪತ್ರಗಳ ಸಂಖ್ಯೆಗಳ ಏಣಿಸುತಲಿ ಮಣಿಸದಿರವು ನಾಳೆಗಳನು ನಿನ್ನೊಲವಲೆ. ರಚನೆ : ಕುಮಾರ್ ಬಿ ಬಾಗೀವಾಳ್

ತುಡಿತ Thuditha a poem by Kumar B Bagival

 ತುಡಿತ.. ನೆನೆದ ಮರುಗಳಿಗೆಯಲಿ ಮರಳಿ ಬರುವೆ. ಮನದ ಅನತಿಯಲೆ ಸುಳಿದು ಮೆರೆವೆ. ತೊರೆದು ಹೇಗಿರಲಿ ನವಿರ ಸವಿ ಸಖ್ಯವ ಬೇರೆಲ್ಲವು ಈ ಜಗದಲಿ ನನಗೆ  ನಿನಗಿಂತ ಮುಖ್ಯವಾ? ಅರೆಗಳಿಗೆ ಮರೆತರೂ ಹೊರಳಡಿ ನರಳುವೆ ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ. ಮಹಾ ಕೂಗದು ನನಗೆ ನಿನ್ನ ಮನದ ಕರೆ ಮೋಹ ಯಾಕದೋ ಗೊತ್ತಿಲ್ಲ ಅದು ಖರೆ ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು. ಕನಸಿಗೂ ಅರ್ಥ ಬೇಕಿದೆ ನನಗೀಗಲೆ ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ ಜಪವು ನೆಪವಾಗಿದೆ ಸಂಧಿಸುವ ಕಾರಣಕೆ ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ. ಬರುವೆ ಭರವಸೆಯ ಹೊತ್ತು ತರುವೆ ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ‌. ರಚನೆ: ಕುಮಾರ್ ಬಿ ಬಾಗೀವಾಳ್

ದಣಿವರಿಯದ ದೈವ.... Danivariyada Daiva...poem about Sri Shivakumara swamiji by Kuar B Bagival.

Image
  ದಣಿವರಿಯದ ದೈವ… ನಡೆದ ನಡಿಗೆಯೆಲ್ಲವು ನುಡಿದ ಪದಗಳಿಗರ್ಥವು ಮುಡಿದ ಸಂಕಲ್ಪವದು ದುಡಿವ ಕೈಗಳಿಗರ್ಥವು ನೀಡಿದ ದಾನವದು ಮಾಡಿದ ದಾಸೋಹದರ್ಥವು ನುಡಿದ ನುಡಿಗಳವು ವಿಶ್ವ ಬೆಳಗುವುದರ ಅರ್ಥವು. ಹಿಡಿದ  ಜೋಳಿಗೆಯೊಂದದು ನಿತ್ಯ ಅಕ್ಷಯವಾಗಿದೆ ಕಾಡಿದ ಹಸಿವ ನೀಗಿದ ತುತ್ತದು ಅಮೃತವೆ ತಾನಾಗಿದೆ ಬಿಡದ ಛಲವದು ಗುರಿಯ ಮುಟ್ಟಿದೆ ಎತ್ತಲೂ ತಾ ಅಲುಗದೆ ಮಿಡಿದ ಹೃದಯವದು ಬಿಡದೆ ಲೋಕವನೆ ತಾ ಸಲುಹಿದೆ. ನೆಲದ ಒಲವಿಗೆ ಬಲವ ತುಂಬಿದ ನಿತ್ಯ ಕಾಯಕ ಸೆಳೆತ ಮಕ್ಕಳ ಜ್ಞಾನ ದೀವಿಗೆ ಹೊತ್ತಿಸುವ ಪ್ರಕಾಶಕ ಮೊಳೆವ ನಾಳಿನ ಬೀಜಕೆ ನೀರನೆರೆಯುವ ಕಾಯಕ ಬಾಳ ದಾರಿಯುದ್ದಕೂ ನುಡಿನಡೆಯದೋ ದ್ಯೋತಕ ಬೆಳೆದವೆಷ್ಟೋ ಕುಡಿಗಳು ಫಸಲ ನೀಡಿವೆ ದೇಶಕೆ ಕಳೆದವೆಷ್ಟೋ ಕೊಳೆಗಳು ಶುಭವ ನುಡಿದ ವಾಕ್ಯಕೆ ನಾಳೆ ಸೂಚನೆ ದೀವಿಗೆ ಬೆಳಗುತಿಹುದು ಜಗದಗಲಕೆ ವೇಳೆಯ ಪರಿವೆಯಿಲ್ಲದ ಶ್ರಮವು ಜಗದ ಹಿತಕೆ. ರಚನೆ: ಕುಮಾರ್ ಬಿ ಬಾಗೀವಾಳ್

ದಮ್ಮವದು ನಿಲುಕದು a poem by Kumar B Bagival

  ದಮ್ಮವದು ಬೊಮ್ನನ ಮೀರಿದುದು  ನೆಮ್ಮದಿಗದು ಕಮ್ಮಿಯಿಲ್ಲದುದು  ಆಸೆಗಾಸೆಯು ಬೊಗಸೆ ತುಂಬುವ ತವಕವದು ನಿನ್ನ ದುಃಖದ ಮಡಿಲು, ಬಿಡಿಗಾಸಿನ ಸುಖವಲ್ಲ ಬದುಕು. ನುಡಿಯೆಲ್ಲವು ನಡೆಯಾಗಿ ಮುಡುಪಿಲ್ಲದ ಬದುಕದು ತಡಿಯಿಲ್ಲದ ದೋಣಿ ಪಯಣದ ಅಂಬಿಗನ ಬದುಕು ಪಡಿಯಂಚು ಹೊಟ್ಟೆ ಹಸಿದವರ ಪಾಲದು ನಿನದಲ್ಲವದು ಹಿಡಿ ಋಜುಮಾರ್ಗವನೆ ನಡೆ ಗುರಿಯಂಚಿಗೆ ನಿಜ ಪಥ ಜೀವನಕದು. ಬಯಸಿದ್ದೆಲ್ಲಾ ಬದುಕಲ್ಲ, ಬದುಕ ಬಯಲು ನಿಲುಕದು ಬಯಕೆಗೆ ,ಕಷ್ಟ ಸುಖದ ದುಃಖ ದುಮ್ಮಾನವೊಂದು ಭಾಗ ಸುಖದ ಅನಾವರಣವು ವ್ಯಾಮೋಹದ ಪರದೆ ತೆರೆದಾಗ ಪರಿಧಿಯಲ್ಲಿಯೇ ಇರಲಿ ನಿನ್ನ ಸುಖದ ಯಾತ್ರೆಯು. ಶವದ ಮುಂದದೋ, ಹಿಂದದೋ ಎರಡೊಂದೇ ನಡೆಯು ಮೆರವಣಿಗೆಯಲಿ ಮುನ್ನಡೆಯ ಪರಿಗಣನೆ ಮಾತ್ರವದು ಜಗಕೆ ದೇಹ ತೇರನೇರುವ ಥರದರ್ಥದಲಿ‌ ನಿರ್ಧರಿಪು ನಿನ್ನಾ ನಿಜ ಸಹಜದಲಷ್ಟೇ ಸಾಗಿದರೆ ರಜವ ನೀಗಿ ತೇಜ ರಾರಾಜಿಸುವುದು. ರಚನೆ : ಕುಮಾರ್. ಬಿ. ಬಾಗೀವಾಳ್.