Posts

Showing posts with the label #farmers Day

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

ದುಡಿಯುವ ಕೈ ನೀ ಮಡಿಯದಿರು. A poem on farrmer... By Kumar.B.Bagival

Image
  ದುಡಿಯುವ ಕೈ ನೀ ಮಡಿಯದಿರು. ದುಡಿಯುವ ಕೈ ನೀ ಮಡಿಯದಿರು ಸುಡುವ ಕಷ್ಟಗಳೆಷ್ಟೇ ಬರಲಿ ಮಾಡುವ ಕಾಯಕದೊಳಿಷ್ಟವು ಇರಲಿ ಚಿನ್ನಕು ಮಿಗಿಲು ಅನ್ನವನು   ಈ ಜಗಕೆ ನೀನೆ  ಇತ್ತವನು. ಮಸುಕಲಿ ಎದ್ದು,ಹೊಲದಲಿ ಸದ್ದು ಮಾಡುತಲಿರುವ ನಿನ್ನನು ನೋಡಿ ನಾಚುತ ತಾ ನೇಸರ ಮೂಡಿ ತಾ ಕೆನ್ನೆಯ ಕೆಂಪನೆ ಮಾಡಿದನು. ಸುಡು ಬಿಸಿಲಿಗು ಜಗ್ಗದ ನಿನ್ನನು ಮೆಚ್ಚುವ ಗಡಿಯ ಕಾಯ್ವ ಯೋಧನು. ಮಳೆಗೆ ಕೊಡೆ ಹಿಡಿಯದ,ಚಳಿಗೂ ಚಳಿಯಿಡಿಸುವ ಧೃತಿಗೆಡದ ಮೈ ಅದು ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು ತಾ ಸೋತರೂ ಜಗವ ಗೆಲಿಸುವ ತ್ಯಾಗವು ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು? ಬೆಳೆವುದು ನೂರಾದರೆ ಪಡೆವುದು ಚೂರು ಕೊಳಗಕೂ ಮೀರಿದ ಆಸೆಯಾದರೂ ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು ಬೆನ್ನೆಲುಬು ನೀನಾದರು ಜಗಕೆ ಜಗವೇ ನಿಂತಿದೆ ನಿನ್ನಯ ಬೆನ್ನಿಗೆ. ಉರುಳಿಗೆ ಕೊರಳನೊಡ್ಡದಿರು ಬೆರಳು ಮಾಡದ ಹಾಗೆ ನಿನ್ನೆಡೆಗೆ. ವಿರಮಿಸದಿರು ಬದುಕ  ಮಾಡು  ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ. ರಚನೆ: ಕುಮಾರ್. ಬಿ.ಬಾಗೀವಾಳ್.