ಬಸವ ಮನ



                                            ಬಸವ ಮನ

                    (  ವಚನಗಳ ಸಂಗ್ರಹ)










       ಹನ್ನೆರಡನೇ ಶತಮಾನದಿಂದ ಇಲ್ಲಿಯವರೆಗೂ ಬಹುಶಃ ಜಗತ್ತಿನ ಯಾವುದೇ ಭಾಗದಲ್ಲಿಯೂ ಕಾಣದ ಸಮಾಜದ ಪ್ರತೀ ಸ್ಥರದ ಜನರನ್ನೊಳಗೊಂಡ ಕ್ರಾಂತಿಗೆ ಕಾರಣವಾಗಿದ್ದು ಕಲ್ಯಾಣದಲ್ಲಿ ಮಾತ್ರ ಎಂದರೆ ತಪ್ಪಾಗದು. ಮುಕ್ತವಾಗಿ ತಮ್ಮ ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಹಂಚಿಕೊಂಡ, ಹಂಚಿಕೊಳ್ಳಲೆಂದೇ ಅನುಭವ ಮಂಟಪ ಕಟ್ಟಿದ ಪ್ರಪಂಚದ ಮೊದಲ ಕೇಂದ್ರ ಕರ್ನಾಟಕ. ವಚನಗಳು ಬರೀ ಬರವಣಿಗೆಗಳಾಗದೇ ಬದುಕಿನ ಪರಿಗಳಾಗಿದ್ದರಿಂದಲೇ ಇಂದೂ ಅವು ಜೀವಂತವಾಗಿವೆ ಜೊತೆಗೆ ಪ್ರಸ್ತುತಕೂಡ. ಆ ಕ್ರಾಂತಿಯ ನಾಯಕ ಬಸವಣ್ಣನವರು ಲಿಂಗ, ಜಂಗಮ, ಹಾಗೂ ಕಾಯಕ ಈ ಮೂರೇ ಮೂರು ಶಬ್ದಗಳ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ಸಾರಿದ ಮಹಾನ್ ಚೇತನ. ಇಂತಹಾ ಭಕ್ತಿಬಂಡಾರಿ ಬಸವಣ್ಣನವರು ತಮ್ಮ ಮನದೊಳಗಿನ ತುಮುಲಗಳ ಬಗ್ಗೆ ಅನೇಕ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ, ಅಂತಹ ಕೆಲ ವಚನಗಳ ಸಂಗ್ರಹ ಮಾಡಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ. 



1.  ಮುಂಗೈಯ್ಯ ಕಂಕಣಕ್ಕೆ ಕನ್ನಡಿಯ ತೋರುವಂತೆ

    ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತುನೋಡಾ!

    ನಾಯಿಗೆ ನಾರಿವಾಣವಕ್ಕುವುದೆಕೂಡಲ ಸಂಗಮದೇವಾ?


2.  ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ

     ಎನ್ನೊಳಗೇನೂ ಶುದ್ಧವಿಲ್ಲ, ನೋಡಯ್ಯಾ.

     ನುಡಿಗೆ ತಕ್ಕ ನಡೆಯ ಕಂಡೊಡೆ

     ಕೂಡಲ ಸಂಗಮದೇವನೊಳಗಿರ್ಪನಯ್ಯಾ


3.  ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ;

     ವಿಚಾರಿಸಿದೊಡೇನೂ ಹುರುಳಿಲ್ಲವಯ್ಯಾ!

    ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹ ಮಾಡಿ

    ನೀವಿರಿಸಿದಿರಿ, ಕೂಡಲ ಸಂಗಮದೇವಾ.


 4.ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು;

   ನಿಂದಲ್ಲಿ ನಿಲ್ಲಲೀಯದೆನ್ನ ಮನವು

  ಹೊಂದಿದಲ್ಲಿ ಹೊಂದಲೀಯದೆನ್ನ ಮನವು!

   ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ

   ಭ್ರಮರನಾಗಿರಿಸು, ನಿಮ್ಮ ಧರ್ಮ!


5. ಮರನನೇರಿದ ಮರ್ಕಟನಂತೆ

ಹಲವು ಕೊಂಬೆಗೆ ಹಾಯುತಲಿದೆ;

ಬೆಂದ ಮನವ ನಾನೆಂತು ನಂಬುವೆನಯ್ಯಾ?

ಎಂತು ನಚ್ಚುವೆನಯ್ಯಾ?

ಎನ್ನ ತಂದೆ ಕೂಡಲ ಸಂಗಮದೇವನಲ್ಲಿಗೆ ಹೋಗಲೀಯದಯ್ಯಾ!


6. ಅಂದಣವನೇರಿದ ಸೊಣಗನಂತೆ

ಕಂಡೊಡೆ ಬಿಡದು ತನ್ನ ಮುನ್ನಿನ ಸ್ವಭಾವವನು;

ಸುಡು! ಸುಡು!! ಮನವಿದು ವಿಷಯಕ್ಕೆ ಹರಿವುದು

ಮೃಡ, ನಿಮ್ಮನನುದಿನ ನೆನೆಯಲೀಯದು

ಎನ್ನೊಡೆಯ ಕೂಡಲ ಸಂಗಮದೇವಾ,

ನಿಮ್ಮ ಚರಣವ ನೆನೆವಂತೆ ಕರುಣಿಸು

ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!

ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ!

ಸಂಸಾರಸಂಗವ ಬಿಡದು ನೋಡೆನ್ನ ಮನವು

ನಾಯಿತನವ ಮಾಣಿಸು

ಕೂಡಲ ಸಂಗಮದೇವಾ, ನಿಮ್ಮ ಧರ್ಮ!


7 . ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ

ʼಎನ್ನ ಬಿಡು, ತನ್ನ ಬಿಡು’, ಎಂಬುದು ಕಾಯವಿಕಾರ

ʼಎನ್ನ ಬಿಡು, ತನ್ನ ಬಿಡುʼ, ಎಂಬುದು ಮನೋವಿಕಾರ!

ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ

ಮನ ನಿಮ್ಮನೆಯ್ದುವುದೆ, ಕೂಡಲ ಸಂಗಮದೇವಾ?


8. ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ;

ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ, ನೋಡಾ!

ಬೆಂದ ಕರಣಾದಿಗಳು ಒಂದೇ ಪಥವನರಿಯವು;

ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ?

ಎನ್ನ ತಂದೆ, ಕೂಡಲ ಸಂಗಮದೇವಾ

ನಿಮ್ಮ ಶರಣರ ಬಳಿವಿಡಿದರೆ

ಎನ್ನ ದಂದುಗ ಹಿಂಗುವುದು.


9. ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು!

ಏನು ಮಾಡುವೆನೀ ಮನವನು? ಎಂತು ಮಾಡುವೆನೀ ಮನವನು

ಕೂಡಲ ಸಂಗಮದೇವನ ಶರಣರ

ನಚ್ಚದ, ಮೆಚ್ಚದೆ, ಬೆಂದ ಮನವನು?


10. ತನ್ನಿಚ್ಚೆಯ ನುಡಿದರೆ ನಚ್ಚುವುದೀ ಮನವು:

ಇದಿರಿಚ್ಚೆಯ ನುಡಿದರೆ ಮಚ್ಚದೀ ಮನವು

ಕೂಡಲ ಸಂಗನ ಶರಣರ

ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ!


11. ಸುಡಲೀ ಮನವೆನ್ನನುಡುಹನ ಮಾಡಿತ್ತು!

ನಡೆವಲ್ಲಿ ನುಡಿವಲ್ಲಿಯಧಿಕನೆಂದೆನಿಸಿತ್ತು

ಬೆಡಗಿನ ಕೀಲು ಕಳೆದು ಕೆಡೆದ ಬಳಿಕ

ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು;

ಒಡಲನುರಿ ಕೊಂಬುದು; ಒಡವೆಯನರಸು ಕೊಂಬ;

ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ!

ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ

ಇನ್ನು ಮಾಡಿದೊಡೊಳವೆ ಕೂಡಲ ಸಂಗಮದೇವಾ?


12. ವಚನದ ಹುಸಿ, ನುಸುಳೆಂತು ಮಾಣ್ಬುದೆನ್ನಾ?

ಮನದ ಮರ್ಕಟತನವೆಂತು ಮಾಣ್ಬುದೆನ್ನಾ?

ಹೃದಯದ ಕಲ್ಮಷವೆಂತು ಮಾಣ್ಬುದೆನ್ನಾ?

ಕಾಯವಿಕಾರಕ್ಕೆ ತರಿಸಲುವೋದೆನು

ಎನಗಿದು ವಿಧಿಯೆ, ಕೂಡಲ ಸಂಗಮದೇವಾ?


13. ಅಂಗದ ನೋಟವು ಸಿಂಗದ ಗಾತ್ರವು

ಹಿಂಗದು ಮನದಲ್ಲಿ ನಾನಾ ವಿಕಾರವು

ಬಂದಹನೆಂದರಿಯಲಿಕ್ಕಿಲ್ಲವಾಗಿ ಸಂದೇಹ ಬಿಡದು

ಮುಂದುಗಾಣದು ಲೋಕ.

ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ,

ಕೂಡಲ ಸಂಗಮದೇವಾ.


14. ವಿಕಳನಾದೆನು ಪಂಚೇಂದ್ರಿಯಧಾತುವಿನಿಂದ;

ಮತಿಗೆಟ್ಟೆನು ಮನದ ವಿಕಾರದಿಂದ;

ಧೃತಿಗೆಟ್ಟೆನು ಕಾಯವಿಕಾರದಿಂದ,

ಶರಣುವೊಕ್ಕೆನು, ಕೂಡಲ ಸಂಗಮದೇವಯ್ಯಾ.


15. ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ?

ಎಂತೋ ಶಿವಾಚಾರವೆನಗೆ ವೇದ್ಯವಪ್ಪುದಯ್ಯಾ?

ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುವಡೆದೆನು

ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ;

ಪಂಚೇಂದ್ರಿಯ, ಸಪ್ತಧಾತು

ಹಂಚುವರಿ ಮಾಡಿ ಕಾಡಿಹುವಯ್ಯಾ!

ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ

ಕೂಡಲ ಸಂಗಮದೇವಾ, ನಾನೇವೆನೇವೆನಯ್ಯಾ


16. ಕಾಯವಿಕಾರ ಕಾಡಿಹುದಯ್ಯಾ

ಮನೋವಿಕಾರ ಕೂಡಿಹುದಯ್ಯಾ.

ಇಂದ್ರಿಯವಿಕಾರ ಸುಳಿವುದಯ್ಯಾ !

ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ, ಸಿಲುಕಿಸದಿರಯ್ಯಾ

ಅನ್ಯ ಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ.

ಅನುಪಮಸುಖಸಾರಾಯ ಶರಣರಲ್ಲಿ

ಕೂಡಲ ಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ


17. ಬಂದ ಯೋನಿಯನರಿದು ಸಲಹೆನ್ನ, ತಂದೆ

ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು

ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು!

ಎನ್ನ ತಂದೆ ಕೂಡಲ ಸಂಗಮದೇವಾ;

ಇವ ಮಾಣಿಸು, ನಿಮ್ಮ ಧರ್ಮ


18. ಬೆಳೆಯ ಭೂಮಿಯಳೊಂದು ಪ್ರಳಯದ ಕಸ ಹುಟ್ಟಿ

ತಿಳಿಯಲೀಯದು, ಎಚ್ಚರಲೀಯದು!

ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ;

ಸುಳಿದೆಗೆದು ಬೆಳೆವೆನು, ಕೂಡಲ ಸಂಗಮದೇವಾ.


19. ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತ್ತಿದ್ದೇನಯ್ಯಾ.

ನೀವಲ್ಲದೆ ಮತ್ತಾರೂ ಎನ್ನನರಿವವರಿಲ್ಲ ನೋಡಯ್ಯಾ.

ಕೂಡಲ ಸಂಗಮದೇವಾ

ನೀವಲ್ಲದೊಳಕೆಂಬವರಿಲ್ಲಯ್ಯಾ.


20. ಆಸೆಯೆಂಬ ಪಾಶದಲ್ಲಿ ಭವಬಂಧನವಾಗಿರ್ದೆನಯ್ಯಾ;

ಸಕೃತು ನಿಮ್ಮ ನೆನೆಯಲೆನಗೆ ತೆರಹಿಲ್ಲವಯ್ಯಾ !

ಕರುಣಾಕರಾ, ಅಭಯಕರಾ, ವರದಾನೀ ಕರುಣಿಸಯ್ಯಾ.

ಸಂಸಾರಬಂಧನವನು ಮಾಣಿಸೆನಗೆ, ಕೃಪೆಯ ಮಾಡಿ,

ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,

ಭಕ್ತಜನಮನೋವಲ್ಲಭಾ, ಕೂಡಲ ಸಂಗಮದೇ


ಸಂಗ್ರಹ : ಕುಮಾರ್ ಬಿ ಬಾಗಿವಾಳ್

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ಸಿನಿದಿನ