Badukuva chalavanna balagolisiddu nannappa
ಬದುಕುವ ಛಲವನ್ನ ಬಲಗೊಳಿಸಿದ್ದು ನನ್ನಪ್ಪ….
ನನಗೆ ಚೆನ್ನಾಗಿ ನೆನಪಿದೆ ನಾನು ನನ್ನ ಜನನದ ನಂತರದ ಕೆಲವರ್ಷಗಳು ಒಂದೇ ಊರಿನ ನನ್ನಜ್ಜಿಯ ಮನೆಯಲ್ಲಿ… ಅರಿವು ಮೂಡಿದಾಗ ಅದು ಯಾಕೆಂಬ ಕಾರಣ ತಿಳಿದಾಗ ಆಶ್ಚರ್ಯ. ಮಕ್ಕಳನ್ನ ಮನೆಯಲ್ಲೇ ಬಿಟ್ಟು ಸೂರ್ಯನಿಗೂ ಮೊದಲೇ ನಮಗಾಗಿ ಅವರ ಕಾಯಕ ಮರದ ಮೇಲೆ, ಅದು ಹೊಂಗೆ,ಹುಣಸೆ, ಸೀಗೆ… ಹೀಗೆ. ಅದರಿಂದ ಸಂಜೆಯವರೆಗೂ ದುಡಿದರೂ ಬರುವ ಕೈಗಾಸು ಮಕ್ಕಳನ್ನು ಸಾಕಿ, ಮಿಕ್ಕ ಹಣದಲ್ಲಿ ಚಿಕ್ಕ ಚಿಕ್ಕ ಗುಂಟೆಗಳ ಲೆಕ್ಕದಲ್ಲಿ ಜಮೀನು ಖರೀದಿಸಿ ಇಂದು ಮಕ್ಕಳ ಬದುಕಿಗೆ ಸಾಕಾಗುವಷ್ಟು ಜಮೀನು ಮಾಡಿ ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆಗೆ ಪೂರಕ ನಿದರ್ಶನವಾದರು ನನ್ನಪ್ಪ. ತಾವು ಅನಕ್ಷರಸ್ಥರಾದರೂ ಜ್ಞಾನದಲ್ಲಿ , ಸಮಯಪ್ರಜ್ಞೆಯಲ್ಲಿ, ಬದುಕನ್ನು ಸಮರ್ಥವಾಗಿ ನಡೆಸುವಲ್ಲಿ, ಮುನ್ನುಗ್ಗುವುದರಲ್ಲಿ ಯಾರಿಗೂ ಕಮ್ಮಿ ಇಲ್ಲ ನನ್ನಪ್ಪ. ನಿಷ್ಕೃಷ್ಟವಾಗಿ ಕಂಡ ಜರಿವ ಜನರ ಎದುರು ಗದರಿನಿಂತ ನನ್ನಪ್ಪ ನನ್ನ ಇಂದಿನ ಸ್ಥಿತಿಗೆ ಕಾರಣ. ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೋ ಎಂಬ ಗಾದೆಮಾತಿಗೆ ಅನ್ವರ್ಥ ನನ್ನಪ್ಪ. ನನ್ನ ಓದಿಗೆ ಸಂಪೂರ್ಣ ಬೆಂಬಲಿಸಿ ನನ್ನಮ್ಮನೊಡಗೂಡಿ ಬಿಡಿಗಾಸನ್ನೂ ತಮಗಾಗಿ ವೆಚ್ಛ ಮಾಡದೇ ನನಗಾಗಿಯೇ ವ್ಯಯಿಸಿದ ನನ್ನಪ್ಪ ಒಬ್ಬ ಅಕ್ಷರ ಸಂತ. ಛಲಕ್ಕೇ ಬದುಕಿದ ನನ್ನಪ್ಪನ ಒಂದು ಮಾತು ಇನ್ನೂ ಮುಂದೂ ನನಗೆ ಸ್ಪೂರ್ತಿ ಅದು " ಮಗನೇ ಅವರು ಅವರ ಮನೆ ಮುಂದೆ ಕಾಯಿ ಹೊಡೆದರೆ ನೀನು ಕಂಠವನ್ನಾದರೂ ಮನೆಯ ಮುಂದೆ ಹೊಡಿ" ಎಂದು. ಈ ಮಾತು ನನಗೆ ಪ್ರೇರಣೆ.ಈ ಮಾತಿನಿಂದಲೇ ಬದುಕಲಿ ಸೋಲೇ ಕಂಡಿರದ ನಾನು ನನ್ನಪ್ಪನ ಈ ಮಾತಿಗೆ ಚಿರ ಋಣಿ. ನನ್ನಪ್ಪ ಇಂದು ನನ್ನೊಂದಿಗಿಲ್ಲ ಆದರೆ ಅವರ ಸ್ಪೂರ್ತಿ ನನ್ನನ್ನು ಸರಿದಾರಿಯಲ್ಲೇ ಕರೆದುಕೊಂಡು ಹೋಗುತ್ತಿದೆ .
ಧನ್ಯವಾದಗಳು ಅಪ್ಪ.
Comments
Post a Comment