ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.
ಅಕ್ಕಮಹಾದೇವಿಯವರ ಆಯ್ದ ವಚನಗಳು.
೧
ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.
ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ,
ಮನಜಂಗಮಲಿಂಗದೊಳಗಾಯಿತ್ತು.
ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗಿಯಾದೆನಯ್ಯಾ ಪ್ರಭುವೆ.
**************************************************************
೨
ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.
ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.
ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.
**************************************************************
೩
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ.
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ.
ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ.
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ.
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
**************************************************************
೪
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ.
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡದೆ.
ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು ಕಾಣಾ ಸಂಗನಬಸವಣ್ಣಾ.
**************************************************************
೫
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು.
ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು.
ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು.
ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು.
ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರಸಿದೆನು.
**************************************************************
೬
ಅಕ್ಕ ಕೇಳು ನಾನೊಂದು ಕನಸ ಕಂಡೆ.
ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
**************************************************************
೭
ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ ?
ಅಪ್ಪಾ ಬೊಪ್ಪಾ ಎಂಬ ಚೋಹವು ಅದು ಮೊಟ್ಟಮೊದಲಲ್ಲಿ ಬಂದಾಡಿತ್ತು.
ತುಪ್ಪುಳು ತೊಡೆದಂತೆ ಮೀಸೆಯ ಚೋಹವು ಅದು ನಟ್ಟನಡುವೆ ಬಂದಾಡಿತ್ತು.
ಮುಪ್ಪು ಮುಪ್ಪು ಎಂಬ ಚೋಹವು ಅದು ಕಟ್ಟಕಡೆಯಲಿ ಬಂದಾಡಿತ್ತು.
ನಿಮ್ಮ ನೋಟವು ತೀರಲೊಡನೆ ಜಗದಾಟವು ತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೮
ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ
ಅರಿವಿಲ್ಲದವರಿಗೆ ಆಚಾರವಿದ್ದಡೆ ಅರಕೆಗೆಟ್ಟು ಸುಖವೆಂದಪ್ಪುದಯ್ಯಾ
ಹೊರೆದ ಪರಿಮಳ ಸ್ಥಿರವಾಗಬಲ್ಲುದೆ ಎನ್ನದೇವ ಚೆನ್ನಮಲ್ಲಿಕಾರ್ಜುನನನರಿಯದವರಿಗೆ ಆಚಾರವಿಲ್ಲ ಕಾಣಿರಣ್ಣಾ.
**************************************************************
೯
ಅಗ್ನಿ ಸರ್ವವ್ಯಾಪಕನಾಗಿರುವಂತೆ, ಚಿದ್ವಹ್ನಿರೂಪನಾದ ಶಿವನು ಸರ್ವವ್ಯಾಪಕನಾಗಿರ್ಪನು.
ಹೃದಯಕಮಲವು ಮುಕುರದೋಪಾದಿಯಲ್ಲಿ ಪ್ರಕಾಶಿಸುತಿರ್ದಪುದು. ಆ ಕನ್ನಡಿಯೋಪಾದಿಯ ಹೃದಯಕಮಲದಲ್ಲಿ ವ್ಯಾಪಕನಾದ ಶಿವನು, ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು. ವೇದೋಪನಿಷದ್ಗಾಯತ್ರಿ ಪ್ರಸಿದ್ಧವಾದೀ ರಹಸ್ಯವ ಗುರೂಪದೇಶದಿಂ ತಿಳಿವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
**************************************************************
೧೦
ಅನುತಾಪದೊಡಲಿಂದೆ ಬಂದ ನೋವನುಂಬವರು ಒಡಲೊ, ಪ್ರಾಣವೊ, ಆರು ಹೇಳಾ ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ ಎನ್ನ ಒಡಲ ಸುಖ ದುಃಖವಾರ ತಾಗುವುದು ಹೇಳಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ನೊಂದ ನೋವು, ಬೆಂದ ಬೇಗೆ, ನಿಮ್ಮ ತಾಗದೆ ಹೋಹುದೆ ಅಯ್ಯಾ .
**************************************************************
೧೧
ಅನ್ನವ ನೀಡುವವರಿಂಗೆ ಧಾನ್ಯವೆಸೆವ ಲೋಕ.
ಅರ್ಥವ ಕೊಡುವವರಿಂಗೆ ಪಾಷಾಣವೆಸೆವ ಲೋಕ.
ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲಿ ನೋಡಿ,
ಕಿವಿಯಲಿ ಕೇಳಿ, ಕೈಯಲಿ ಮುಟ್ಟಿ, ಮಾಡುವ ಭಕ್ತಿ ಸಣ್ಣವರ ಸಮಾರಾಧನೆಯಾಯಿತ್ತು.
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
**************************************************************
೧೨
ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ
ನೆಳಲ ತಂಪಿನಲ್ಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಕರುಣದ ಕಂದನೊಡನೆ ಸೂನೆಗಾರರ ಮಾತನಾಡಿಸುವರೆ ಅಯ್ಯಾ.
**************************************************************
೧೩
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ ; ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.
**************************************************************
೧೪
ಅಯ್ಯಾ, ಚಿದಂಗ ಚಿದ್ಘನಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ,
ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ, ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ,
ಸದ್ಗುರುಕರುಣಾಮೃತರಸ ತಾನೆಂದರಿಯದೆ ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಾ.
**************************************************************
೧೫
ಅಯ್ಯಾ, ತನ್ನ ತಾನರಿಯಬೇಕಲ್ಲದೆ,
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು.
**************************************************************
೧೬
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ನೋಡಿದಡೆ ನೋಡು, ನೋಡದಡೆ ಮಾಣು ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ಮಚ್ಚಿದೆಡೆ ಮಚ್ಚು, ಮಚ್ಚದಡೆ ಮಾಣು ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ಒಲಿದಡೆ ಒಲಿ, ಒಲಿಯದಡೆ ಮಾಣು ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ.
*************************************************************
೧೭
ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, ಆಲಿಸದಿರ್ದಡೆ ಮಾಣು.
ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು.
ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು.
ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡೆ ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?
**************************************************************
೧೮
ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ, ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ, ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ, ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹಭ್ರಮೆ, ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ ನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೯
ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು. ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ. ಇಹದ ಸುಖ ಪರದ ಗತಿ ನಡೆದು ಬಂದಂತಾಯಿತ್ತು ನೋಡಾ ಎನಗೆ. ಚೆನ್ನಮಲ್ಲಿಕಾರ್ಜುನಯ್ಯಾ, ಗುರುಪಾದವ ಕಂಡು ಧನ್ಯಳಾದೆ ನೋಡಾ.
**************************************************************
೨೦
ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ, ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.
ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು.
ಶಿವನೊಲಿದಲ್ಲದೆ ಕೈಗೂಡದು. ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.
**************************************************************
೨೧
ಅರಸಿ ಮೊರೆವೊಕ್ಕಡೆ ಕಾವ ಗುರುವೆ, ಜಯ ಜಯ ಗುರುವೆ,
ಆರೂ ಅರಿಯದ ಬಯಲೊಳಗೆ ಬಯಲಾಗಿ ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರದ ಗುರುವೆ,
ಚೆನ್ನಮಲ್ಲಿಕಾರ್ಜುನ ಗುರುವೆ, ಜಯ ಜಯ ಗುರುವೆ.
**************************************************************
೨೨
ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.
ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುಕೊಂಬಂತೆ.
**************************************************************
೨೩
ಅರಿವು ಸಾಧ್ಯವಾಯಿತ್ತೆಂದು, ಗುರುಲಿಂಗಜಂಗಮವ ಬಿಡಬಹುದೆ ? ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ ? ‘ಯತ್ರ ಜೀವಃ ತತ್ರ ಶಿವಃ’ ಎಂಬ ಅಭಿನ್ನ ಜ್ಞಾನವಾಯಿತ್ತೆಂದು ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ ? ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು’ ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು. ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ ಮೀರಿನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು ?
**************************************************************
೨೪
ಅರ್ಥಸನ್ಯಾಸಿಯಾದಡೇನಯ್ಯಾ, ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿಸನ್ಯಾಸಿಯಾದಡೇನಯ್ಯಾ, ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ, ಮನ ಬತ್ತಲೆ ಇರಬೇಕು.
ಇಂತೀ ಚತುರ್ವಿಧದ ಹೊಲಬರಿಯದೆ ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೨೫
ಅಲ್ಲದವರೊಡನಾಡಿ ಎಲ್ಲಾ ಸಂಗವ ತೊರೆದೆ ನಾನು.
ನಾರಿ ಸಂಗವತೊರೆದೆ, ನೀರ ಹೊಳೆಯ ತೊರೆದೆ ನಾನು.
ಎನ್ನ ಮನದೊಡೆಯ ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಎಲ್ಲಾ ಸಂಗವ ತೊರೆದೆ ನಾನು.
**************************************************************
೨೬
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ ನೀನು ಬಹಿರಂಗವ್ಯವಹಾರದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ ನೀನು ವಾಙ್ಮನಕ್ಕತೀತನು.
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ ನೀನು ನಾದಾತೀತನು. ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ ನೀನು ಮತಿಗತೀತನು. ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
**************************************************************
೨೭
ಅಸನದಿಂದ ಕುದಿದು, ವ್ಯಸನದಿಂದ ಬೆಂದು, ಅತಿ ಆಸೆಯಿಂದ ಬಳಲಿ, ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು.
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ ನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ ?
**************************************************************
೨೮
ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು.
ಹರಿಬ್ರಹ್ಮರು ವೇದ ಪುರಾಣ ಆಗಮಂಗಳು ಅರಸಿ ಕಾಣದ ಲಿಂಗ. ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ.
ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ.
ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ.
ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ.
ಇದು ಕಾರಣ ತನ್ನ ತಾನರಿದು ತಾನಾದಡೆ ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ.
**************************************************************
೨೯
ಆತುರದ ಧ್ಯಾನದಿಂದ ಧಾವತಿಗೊಂಡೆ ; ಜ್ಯೋತಿರ್ಲಿಂಗವ ಕಾಣಿಸಬಾರದು.
ಮಾತಿನ ಮಾಲೆಗೆ ಸಿಲುಕುವನಲ್ಲ ; ಧಾತುಗೆಡಿಸಿ ಮನವ ನೋಡಿ ಕಾಡುವನು.
ಆತುಮನಂತರ ಪರವನರಿದಡೆ ಆತನೆ ಯೋಗಿ ; ಆತನ ಪಾದಕ್ಕೆ ಶರಣೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೩೦
ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು.
ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು.
ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು.
ಆ ನಾದಸ್ವರೂಪೇ ಬಸವಣ್ಣನಾದ ಕಾರಣ, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.
**************************************************************
೩೧
ಆಧಾರ ಸ್ವಾಧಿಷ್ಠಾನ ಮಣಿಪೂರಕ ವಿಶುದ್ಧಿ ಆಜ್ಞೇಯವ ನುಡಿದಡೇನು
ಆದಿ ಅನಾದಿಯ ಸುದ್ದಿಯ ಕೇಳಿದಡೇನು ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ.
ಉನ್ಮನಿಯ ರಭಸದ ಮನ ಪವನದ ಮೇಲೆ ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲರಿಯರು.
**************************************************************
೩೨
ಆನು ನೊಂದೆನಯ್ಯಾ, ಆನು ಬೆಂದೆನಯ್ಯಾ, ಆನು ಬೆಂದ ಬೇಗೆಯನರಿಯದೆ ಕೆಟ್ಟೆನಯ್ಯಾ, ಆನು ಕೆಟ್ಟ ಕೇಡನೇನೆಂದು ಹವಣಿಸುವೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನೋವ ಕಂಡು ಆನು ಬೆಂದೆನಯ್ಯಾ.
**************************************************************
೩೩
ಆಯತ ಸ್ವಾಯತ ಅನುಭಾವವ ನಾನೆತ್ತ ಬಲ್ಲೆನಯ್ಯಾ ಗುರು ಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಂ ಸಮರ್ಪಿಸಿ, ಅಹಂಕಾರವಳಿದಿಹಂತಹ ಪುರಾತನರ ಮನೆಯಲ್ಲಿ ಭೃತ್ಯರ ಭೃತ್ಯಳಾಗಿಪ್ಪೆನಯ್ಯಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಗಣಂಗಳಲ್ಲದನ್ಯವ ನಾನರಿಯೆನಯ್ಯಾ.
**************************************************************
೩೪
ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ,
ಕೂಡಿರ್ದ ಸತಿಸುತರು ತಮತಮಗೆ ಹರಿದು ಹೋಗುತ್ತೈದಾರೆ ;
ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ, ಚೆನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ, ಹೂಣಿ ಹೊಕ್ಕು ಬದುಕು ಕಂಡಾ,ಮನವೆ.
**************************************************************
೨೫
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ ಎನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು. ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
**************************************************************
೩೬
ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು.
**************************************************************
೩೭
ಆಶೆಯಾಮಿಷವಳಿದು, ಹುಸಿ ವಿಷಯಂಗಳೆಲ್ಲ ಹಿಂಗಿ, ಸಂಶಯ ಸಂಬಂಧ ವಿಸಂಬಂಧವಾಯಿತ್ತು ನೋಡಾ. ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯಾ.
**************************************************************
೩೮
ಆಹಾರವ ಕಿರಿದು ಮಾಡಿರಣ್ಣಾ, ಆಹಾರವ ಕಿರಿದು ಮಾಡಿ. ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು, ಅಜ್ಞಾನದಿಂ ಕಾಮವಿಕಾರ ಹೆಚ್ಚಿ, ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ, ಭಾವವಿಕಾರ, ವಾಯುವಿಕಾರವನುಂಟುಮಾಡಿ, ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ.
ಅತಿ ಪೋಷಣೆ ಮೃತ್ಯುವೆಂದುದು. ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಫ್ಸ್ನವೆಂದುದು. ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ, ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ. ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
**************************************************************
೨೯
ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ.
ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ.
ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ.
ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ.
ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ.
ಪರಿಣಾಮದೊಡನೆ ಕಪರ್ೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
**************************************************************
೪೦
ಇಂದ್ರಿಯವ ಬಿಟ್ಟು ಕಾಯವಿರದು ; ಕಾಯವ ಬಿಟ್ಟು ಇಂದ್ರಿಯವಿರದು. ಎಂತು ನಿಃಕಾಮಿಯೆಂಬೆ, ಎಂತು ನಿರ್ದೋಷಿಯೆಂಬೆ ನೀನೊಲಿದಡೆ ಸುಖಿಯಾಗಿಪ್ಪೆ, ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.
**************************************************************
೪೧
ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರ?
ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ. ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿಬೇರಾಗಿಹ ಹಾಗೆ, ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು ತನ್ನ ಪರಿ ಬೇರೆ.
**************************************************************
೪೨
ಉಡುವೆ ನಾನು ಲಿಂಗಕ್ಕೆಂದು, ತೊಡುವೆ ನಾನು ಲಿಂಗಕ್ಕೆಂದು, ಮಾಡುವೆ ನಾನು ಲಿಂಗಕ್ಕೆಂದು, ನೋಡುವೆ ನಾನು ಲಿಂಗಕ್ಕೆಂದು, ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ. ಮಾಡಿಯೂ ಮಾಡದಂತಿಪ್ಪೆ ನೋಡಾ. ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ?
**************************************************************
೪೩
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ, ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು ?
**************************************************************
೪೩
ಉರಕ್ಕೆ ಜವ್ವನಗಳು ಬಾರದ ಮುನ್ನ, ಮನಕ್ಕೆ ನಾಚಿಕೆಗಳು ತೋರದ ಮುನ್ನ, ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ. ಹೆಂಗೂಸೆಂಬ ಭಾವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು .
**************************************************************
೪೪
ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ, ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವಾ. ತೂರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ ಬೆರಗಾಗಿ ನಿಲಲಾರೆನವ್ವಾ. ಆರವಸ್ಥೆ ಕರ ಹಿರಿದು ಎಲೆ ತಾಯೆ. ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ.
****************************************"*********************
೪೫
ಉರಿಯೊಡ್ಡಿದಡೆ ಸೀತಳವೆನಗೆ.
ಗಿರಿಮೇಲೆ ಬಿದ್ದರೆ ಪುಷ್ಪವೆನಗೆ.
ಸಮುದ್ರಮೇಲುವಾಯಿದರೆ ಕಾಲುವೆಯೆನಗೆ.
ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆಯೆಂಬುದು ತಲೆಯೆತ್ತಿ ಬಾರದ ಭಾರವೆನಗೆ.
**************************************************************
೪೬
ಉಳ್ಳುದೊಂದು ತನು, ಉಳ್ಳುದೊಂದು ಮನ. ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ? ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ? ಅಕಟಕಟಾ, ಕೆಟ್ಟೆ ಕೆಟ್ಟೆ ? ಸಂಸಾರಕ್ಕಲ್ಲಾ, ಪರಮಾರ್ಥಕ್ಕಲ್ಲಾ ? ಎರಡಕ್ಕೆ ಬಿಟ್ಟ ಕರುವಿನಂತೆ ? ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ ಚೆನ್ನಮಲ್ಲಿಕಾರ್ಜುನಾ ?
**************************************************************
೪೭
ಊರ ಮುಂದೆ ಹಾಲತೊರೆ ಇರಲು ನೀರಡಸಿ ಬಂದೆನಲ್ಲಯ್ಯ ನಾನು. ಬರುದೊರೆವೋದವಳನೆನ್ನನಪ್ಪದಿರಯ್ಯಾ. ನೀನೊತ್ತಿದ ಕಾರಣ ಬಂದೆನಯ್ಯ. ಹೆರಿಗೆ ಕೂತವಳ ತೆಗೆದಪ್ಪುವನೆಗ್ಗ ನೋಡಾ ? ಈ ಸೂನೆಗಾರಂಗೆ ಕುರಿಯ ಮಾರುವರೆ ? ಮಾರಿದರೆಮ್ಮವರೆನ್ನ ನಿನಗೆ. ಎನ್ನತ್ತ ಮುಂದಾಗದಿರು, ಎನ್ನಮೇಲೆ ಕಾಲನಿಡದಿರು. ಚೆನ್ನಮಲ್ಲಿಕಾರ್ಜುನಂಗೆ ಸಲೆ ಮಾರುವೋದವಳಾನು.
**************************************************************
೪೮
ಎನಗೇಕಯ್ಯಾ ನಾ ಪ್ರಪಂಚಿನ ಪುತ್ಥಳಿ.
ಮಾಯಿಕದ ಮಲಭಾಂಡ, ಆತುರದ ಭವನಿಳಯ.
ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ?
ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ?
ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ.
ಎನ್ನ ತಪ್ಪನೊಪ್ಪಗೊಳ್ಳಿ, ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.
**************************************************************
೪೯
ಎನ್ನ ಕಾಯ ಮಣ್ಣು, ಜೀವ ಬಯಲು, ಆವುದ ಹಿಡಿವೆನಯ್ಯಾ. ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ? ಎನ್ನ ಮಾಯೆಯನು ಮಾಣಿಸಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೫೦
ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ, ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ. ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ. ನಿನ್ನ ಮುಂದಿರಟ್ಟಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ ಚೆನ್ನಮಲ್ಲಿಕಾರ್ಜುನಾ ?
**************************************************************
೫೧
ಎನ್ನ ಪ್ರಾಣ ಜಂಗಮ, ಎನ್ನ ಜೀವ ಜಂಗಮ, ಎನ್ನ ಪುಣ್ಯದ ಫಲವು ಜಂಗಮ ಎನ್ನ ಹ[ರು]ರುಷದ ಮೇರೆ [ಜಂಗಮ] ಚೆನ್ನಮಲ್ಲಿಕಾರ್ಜುನಾ, ಜಂಗಮ ತಿಂಥಿಣಿಯಲೋಲಾಡುವೆ.
**************************************************************
೫೨
ಎನ್ನ ಭಕ್ತಿ ಬಸವಣ್ಣನ ಧರ್ಮ, ಎನ್ನ ಜ್ಞಾನ ಪ್ರಭುವಿನ ಧರ್ಮ, ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ. ಈ ಮೂವರು ಒಂದೊಂದ ಕೊಟ್ಟೊಡೆನಗೆ ಮೂರು ಭಾವವಾಯಿತ್ತು. ಆ ಮೂರನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ ಎನಗಾವ ಜಂಜಡವಿಲ್ಲ. ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ ನಿಮ್ಮ ಕರುಣದ ಕಂದನಾಗಿದ್ದೆ ಕಾಣಾ ಸಂಗನಬಸವಣ್ಣಾ.
**************************************************************
೫೩
ಎಮ್ಮೆಗೊಂದು ಚಿಂತೆ ಸಮ್ಮಗಾರಗೊಂದು ಚಿಂತೆ. ಧರ್ಮಿಗೊಂದು ಚಿಂತೆ ಕರ್ಮಿಗೊಂದು ಚಿಂತೆ. ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ. ಒಲ್ಲೆ ಹೋಗು, ಸೆರಗ ಬಿಡು ಮರುಳೆ. ಎನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವರೊ ಒಲಿಯರೊ ಎಂಬ ಚಿಂತೆ ?
**************************************************************
೫೪
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು, ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ.
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ ಆಪತ್ತಿಗೆ ಸಖಿಯರನಾರನೂ ಕಾಣೆ.
ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ, ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
**************************************************************
೫೫
ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು, ಎಲೆ ಕಾಲಂಗೆ ಗುರಿಯಾದ ಕರ್ಮಿ.
ಉಲಿಯದಿರು, ಉಲಿಯದಿರು ಭವಭಾರಿ ನೀನು.
ಹಲವು ಕಾಲದ ಹುಲುಮನುಜಂಗೆ ಹುಲುಮನುಜ ಹೆಂಡತಿ ಇವರಿದ್ದರೆ ಅದಕ್ಕದು ಸರಿ.
ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದೊಳಗ್ಹೆಂಡಿರುಂಟಾದರೆ ಮಾಡಿಕೊ, ಎನ್ನ ಬಿಡು ಮರುಳೆ.
**************************************************************
೫೬
ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ, ಎನ್ನ ನಿನ್ನಳವೆ ? ಹದಿನಾಲ್ಕು ಲೋಕವ ನುಂಗಿದ ಕಾಮನ ಬಾಣದ ಗುಣ ಎನ್ನ ನಿನ್ನಳವೆ ? ವಾರುವ ಮುಗ್ಗಿದಡೆ, ಮಿಡಿಹಯ ಹೊಯ್ವರೆ ? ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು. ನಿನ್ನ ನೀ ಸಂವರಿಸಿ ಕೈದುವ ಕೊಳ್ಳಿರಣ್ಣಾ, ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣಾ.
**************************************************************
೫೭
ಎಲೆ ಕಾಲಂಗೆ ಸೂರೆಯಾದ ಕರ್ಮಿ, ಎಲೆ ಕಾಮಂಗೆ ಗುರಿಯಾದ ಮರುಳೆ, ಬಿಡು ಬಿಡು ಕೈಯ ನರಕವೆಂದರಿಯದೆ ತಡೆವರೆ ಮನುಜಾ ? ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ ನಾಯಕ ನರಕ ಕಾಣಾ ನಿನಗೆ.
**************************************************************
೫೮
ಎಲೆ ತಾಯಿ ನೀನಂತಿರು, ಎಲೆ ತಂದೆ ನೀನಂತಿರು, ಎಲೆ ಬಂಧುವೆ ನೀನಂತಿರು, ಎಲೆ ಕುಲವೆ ನೀನಂತಿರು, ಎಲೆ ಬಲವೆ ನೀನಂತಿರು. ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ ಹೋಗುತ್ತಿದ್ದೇನೆ. ನಿಮಗೆ ಶರಣಾರ್ಥಿ ಶರಣಾರ್ಥಿ.
**************************************************************
೫೯
ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು, ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ. ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
**************************************************************
೬೦
ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
**************************************************************
೬೧
ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ, ಹಂದೆಗೆ ಸುಖವಿಲ್ಲ ಕಾಣಿರಣ್ಣಾ. ಈವಂಗವಗುಣವಿಲ್ಲ, ಕರುಣವುಳ್ಳವಂಗೆ ಪಾಪವಿಲ್ಲ. ನಿಮ್ಮ ಮುಟ್ಟಿ ಪರಧನ ಪರಸ್ತ್ರೀಯ ತೊರೆದಾತಂಗೆ ಮುಂದೆ ಭವವಿಲ್ಲ ಚೆನ್ನಮಲ್ಲಿಕಾರ್ಜುನಾ.
**************************************************************
೬೨
ಐದು ಪರಿಯ ಬಣ್ಣವ ತಂದು ಕೊಟ್ಟಡೆ ನಾಲ್ಕು ಮೊಲೆಯ ಹಸುವಾಯಿತ್ತು.
ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು.
ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡಡೆ ಕರ ರುಚಿಯಾಯಿತ್ತು.
ಮಧುರ ತಲೆಗೇರಿ ಅರ್ಥವ ನೀಗಾಡಿ ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು ಚೆನ್ನಮಲ್ಲಿಕಾರ್ಜುನಾ.
**************************************************************
೬೩
ಒಂದರಳ ಶಿವಂಗೆಂದ ಫಲದಿಂದ ಶಿವಪದಂಗಳಾದುದ ಕೇಳಿಯರಿಯಾ ? ಒಂದರಳನೇರಿಸುವಲ್ಲಿ ಅಡ್ಡವಿಸಿದರೆ ಗೊಂದಣದ ಕುಲಕೋಟಿಗೆ ನರಕ ಕಾಣಾ. ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ.
************************"*************************************
೬೪
ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ.
ಭಾಷೆ ಪೈಸರವಿಲ್ಲ, ಓಸರಿಸೆನನ್ಯಕ್ಕೆ, ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ.
ಆರಳಿದು ಮೂರಾಗಿ, ಮೂರಳಿದು ಎರಡಾಗಿ, ಎರಡಳಿದು ಒಂದಾಗಿ ನಿಂದೆನಯ್ಯಾ.
ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ ಆ ಪ್ರಭುವಿನಿಂದ ಕೃತಕೃತ್ಯಳಾದೆನು ನಾನು.
ಮರೆಯಲಾಗದು, ನಿಮ್ಮ ಶಿಶುವೆಂದು ಎನ್ನನು, ಚೆನ್ನಮಲ್ಲಿಕಾರ್ಜುನನ ಬೆರೆಸೆಂದು ಹರಸುತ್ತಿಹುದು.
*************************************************************
೬೫
ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ, ದೃಷ್ಟಿವಾ[ರಿ] ನಿಮ್ಮನೋಡಲೊಡನೆ ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ. ದುರಿತ ಅನ್ಯಾಯವ ಪರಿಹರಿಸಬಲ್ಲಡೆ ‘ಓಂ ನಮಃ ಶಿವಾಯ’ ಶರಣೆಂಬುದೆ ಮಂತ್ರ. ಅದೆಂತೆಂದಡೆ ‘ನಮಃ ಶಿವಾಯೇತಿ ಮಂತ್ರಂ ಯಃ ಕರೋತಿ ತ್ರಿಪುಂಡ್ರಕಂ ಸಪ್ತಜನ್ಮಕೃತಂ ಪಾಪಂ ತತ್ಕ್ಷಣಾದೇವ ನಶ್ಯತ್ಬಿ’ ಇಂತೆಂದುದಾಗಿ, ಸಿಂಹದ ಮರಿಯ ಸೀಳ್ನಾಯಿ ತಿಂಬಡೆ ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ?
**************************************************************
೬೬
ಒಬ್ಬನ ಮನೆಯಲುಂಡು, ಒಬ್ಬನ ಮನೆಯಲುಟ್ಟು, ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ ? ನೀನಾರಿಗೊಲಿದಡೂ ನಮಗೇನಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು.
**************************************************************
೬೭
ಒಳಗ ಶೋದಿಸಿ ಹೊರಗ ಶುದ್ಧಯಿಸಿ ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಫಟಿಕದ ಶಲಾಕೆಯಂತೆ ತಳವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು, ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು. ಆ ಸಹಜ ಗುರುವೀಗ ಜಗದಾರಾಧ್ಯನು, ಅವನ ಶ್ರೀಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೬೮
ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು. ಪೂರೈಸಿಹೆ ಪೂರೈಸಿಹೆನೆಂದು ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು. ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನಾ.
**************************************************************
೬೯
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಹುದಯ್ಯಾ ?
ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ?
ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ?
ಕತ್ತಲೆಯ ಹೊಕ್ಕಡೆಂತಹುದಯ್ಯಾ ?
ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ?
ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ?
**************************************************************
೭೦
ಕಂಡಡೆ ಒಂದು ಸುಖ, ಮಾತಾಡಿದಡೆ ಅನಂತ ಸುಖ.
ನೆಚ್ಚಿ ಮೆಚ್ಚಿದಡೆ ಕಡೆಯಿಲ್ಲದ ಹರುಷ.
ಮಾಡಿದ ಸುಖವನಗಲಿದರೆ ಪ್ರಾಣದ ಹೋಕು ಕಂಡಯ್ಯಾ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ತೋರಿದ ಶ್ರೀಗುರುವಿನ ಪಾದವ ನೀನೆಂದು ಕಾಂಬೆನು.
**************************************************************
೭೧
ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ?
ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ ?
ತೊಟ್ಟ ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ ?
ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದಡೆ, ನಿಷ್ಠೆಯುಳ್ಳ ಶರಣರು ಮರಳಿ ಮತ್ರ್ಯಕ್ಕೆ ಬಪ್ಪರೆ ಚೆನ್ನಮಲ್ಲಿಕಾರ್ಜುನಾ ?
**************************************************************
೭೨
ಕಡೆಗೆ ಮಾಡಿದ ಭಕ್ತಿ ದೃಢವಿಲ್ಲದಾಳುತನ, ಮೃಡನೊಲಿಯ ಹೇಳಿದಡೆ ಎಂತೊಲಿವನಯ್ಯಾ ? ಮಾಡಲಾಗದು ಅಳಿಮನವ, ಮಾಡಿದಡೆ ಮನದೊಡೆಯ ಬಲ್ಲನೈಸೆ ? ವಿರಳವಿಲ್ಲದೆ ಮಣಿಯ ಪವಣಿಸಿಹೆನೆಂದಡೆ ಮರುಳಾ, ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯಾ ?
**************************************************************
೭೩
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ
**************************************************************
೭೪
ಕರುವಿನ ರೂಹು ಅರಗಿಳಿಯನೋದಿಸುವಂತೆ, ಓದಿಸುವುದಕ್ಕೆ ಜೀವವಿಲ್ಲ ಕೇಳುವುದಕ್ಕೆ ಜ್ಞಾನವಿಲ್ಲ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮನರಿಯದವನ ಭಕ್ತಿ ಕರುವಿನ ರೂಹು ಆ ಅರಗಿಳಿಯನೋದಿಸುವಂತೆ.
**************************************************************
೭೫
ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ ಆನು ಬಲ್ಲೆನೆಂಬ ನುಡಿ ಸಲ್ಲದು. ಲಿಂಗದಲ್ಲಿ ಮರೆದು ಮಚ್ಚಿರ್ದ ಮನವು ಹೊರಗೆ ಬೀಸರವೋಗದೆ ? ಉರೆ ತಾಗಿದ ಕೋಲು ಗರಿ ತೋರುವುದೆ ? ಮೊರೆದು ಬೀಸುವ ಗಾಳಿ ಪರಿಮಳವನುಂಡಂತೆ ಬೆರಸಬೇಕು ಚೆನ್ನಮಲ್ಲಿಕಾರ್ಜುನಯ್ಯನ.
**************************************************************
೭೬
ಕಾಯ ಕರ್ರನೆ ಕಂದಿದಡೇನಯ್ಯಾ ?
ಕಾಯ ಮಿರ್ರನೆ ಮಿಂಚಿದಡೇನಯ್ಯಾ ?
ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನಯ್ಯಾ ನೀನೊಲಿದ ಕಾಯವು ಹೇಗಿದ್ದಡೇನಯ್ಯಾ?
**************************************************************
೭೭
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ.
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ.
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ.
ನೆನಹಿಂಗೆ ಅರುಹಾಗಿ ಕಾಡಿತ್ತು ಮಾಯೆ.
ಅರುಹಿಂಗೆ ಮರಹಾಗಿ ಕಾಡಿತ್ತು ಮಾಯೆ.
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ. ಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು.
**************************************************************
೭೮
ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆಯಡಗಿತ್ತೆಂಬೆನು.
ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು.
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು. ಚೆನ್ನಮಲ್ಲಿಕಾರ್ಜುನಯ್ಯಾ, ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು.
**************************************************************
೭೯
ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ, ಬಾಳೆ ಬೆಳೆವುದಯ್ಯಾ ಎನಬೇಕು.
ಓರೆಗಲ್ಲ ನುಗ್ಗುಗುಟ್ಟಿ ಮೆಲಬಹುದಯ್ಯಾ ಎಂದಡೆ, ಅದು ಅತ್ಯಂತ ಮೃದು ಮೆಲಬಹುದಯ್ಯಾ ಎನಬೇಕು.
ಸಿಕ್ಕದ ಠಾವಿನಲ್ಲಿ ಉಚಿತವ ನುಡಿವುದೆ ಕಾರಣ ಚೆನ್ನಮಲ್ಲಿಕಾರ್ಜುನ-[ಯ್ಯಾ] ಮತ್ರ್ಯಕ್ಕೆ ಬಂದುದಕ್ಕಿದೆ ಗೆಲವು.
**************************************************************
೮೦
ಕೈಸಿರಿಯ ದಂಡವ ಕೊಳಬಹುದಲ್ಲದೆ, ಮೈಸಿರಿಯ ದಂಡವ ಕೊಳಲುಂಟೆ ?
ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ, ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ ? ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಯ ಹಂಗೇಕೋ ಮರುಳೆ ?
**************************************************************
೮೧
ಕೊಳಲ ದನಿಗೆ ಸರ್ಪ ತಲೆದೂಗಿದಡೇನು, ಒಳಗಣ ವಿಷದ ಬಯಕೆ ಬಿಡದನ್ನಕ್ಕ ?
ಹಾಡಿದಡೇನು, ಕೇಳಿದಡೇನು, ತನ್ನಲುಳ್ಳ ಅವಗುಣ ಬಿಡದನ್ನಕ್ಕ ? ಒಳಗನರಿದು ಹೊರಗೆ ಮರೆದವರ ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೮೨
ಕೋಲ ತುದಿಯ ಕೋಡಗದಂತೆ, ನೇಣ ತುದಿಯ ಬೊಂಬೆಯಂತೆ, ಆಡಿದೆನಯ್ಯಾ ನೀನಾಡಿಸಿದಂತೆ, ಆನು ನುಡಿದೆನಯ್ಯಾ ನೀ ನುಡಿಸಿದಂತೆ, ಆನು ಇದ್ದೆನಯ್ಯಾ ನೀನು ಇರಿಸಿದಂತೆ, ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.
**************************************************************
೮೩
ಗಂಗೆಯೊಡನಾಡಿದ ಘಟ್ಟ ಬೆಟ್ಟಂಗಳು ಕೆಟ್ಟ ಕೇಡ ನೋಡಿರಯ್ಯಾ. ಅಗ್ನಿಯೊಡನಾಡಿದ ಕಾಷ್ಠಂಗಳು ಕೆಟ್ಟ ಕೇಡ ನೋಡಿರಯ್ಯಾ. ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಿರಯ್ಯಾ. ಜ್ಞಾನಿಯೊಡನಾಡಿದ ಅಜ್ಞಾನಿ ಕೆಟ್ಟ ಕೇಡ ನೋಡಿರಯ್ಯಾ.
ಎಲೆ ಪರಶಿವಮೂರ್ತಿ ಹರನೆ, ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿ ಭವಂಗಳು ಕೆಟ್ಟ ಕೇಡ ನೋಡಾ, ಚೆನ್ನಮಲ್ಲಿಕಾರ್ಜುನಾ.
**************************************************************
೮೪
ಗಂಡ ಮನೆಗೆ ಒಡೆಯನಲ್ಲ ; ಹೆಂಡತಿ ಮನೆಗೆ ಒಡತಿಯೇ ? ಒಡತಿಯಲ್ಲ. ಗಂಡಹೆಂಡಿರ ಸಂಬಂಧವಿಲ್ಲಯ್ಯಾ. ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು.
**************************************************************
೮೫
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ, ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ ?
ನದಿಯ ಗುಂಪ ತಾವರೆ ಬಲ್ಲುದಲ್ಲದೆ, ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ ?
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ, ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
**************************************************************
೮೬
ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ?
ದೀಪಕ್ಕೆ ದೀಪ್ತಿಗೆ ಭೇದವುಂಟೆ ಅಯ್ಯಾ ?
ಅಂಗಕ್ಕೆ ಆತ್ಮಂಗೆ ಭಿನ್ನವುಂಟೆ ಅಯ್ಯಾ ?
ಎನ್ನಂಗವನು ಶ್ರೀಗುರು ಮಂತ್ರವಮಾಡಿ ತೋರಿದನಾಗಿ, ಸಾವಯಕ್ಕೂ ನಿರವಯಕ್ಕೂ ಭಿನ್ನವಿಲ್ಲವಯ್ಯಾ. ಚೆನ್ನಮಲ್ಲಿಕಾರ್ಜುನದೇವರ ಬೆರಸಿ ಮತಿಗೆಟ್ಟವಳನೇತಕ್ಕೆ ನುಡಿಸುವಿರಯ್ಯಾ ?
**************************************************************
೮೭
ಗಿರಿಯಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು ? ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ ?
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ ?
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ ? ಪೇಳಿರೆ, ಕೆಳದಿಯರಿರಾ ?
**************************************************************
೮೮
ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ ಕಾಮದ ಒಡಲು, ಕ್ರೋಧದ ಗೊತ್ತು, ಲೋಭದ ಇಕ್ಕೆ, ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಕೆ. ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ.
**************************************************************
೮೯
ಗುರು ತನ್ನ ವಿನೋದಕ್ಕೆ ಗುರುವಾದ
ಗುರು ತನ್ನ ವಿನೋದಕ್ಕೆ ಲಿಂಗವಾದ
ಗುರು ತನ್ನ ವಿನೋದಕ್ಕೆ ಜಂಗಮವಾದ
ಗುರು ತನ್ನ ವಿನೋದಕ್ಕೆ ಪಾದೋದಕವಾದ
ಗುರು ತನ್ನ ವಿನೋದಕ್ಕೆ ಪ್ರಸಾದವಾದ
ಗುರು ತನ್ನ ವಿನೋದಕ್ಕೆ ವಿಭೂತಿಯಾದ
ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ
ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.
ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.
ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.
ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ.
ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ.
**************************************************************
೯೦
ಗುರುಪಾದತೀರ್ಥವೆ ಮಂಗಳ ಮಜ್ಜನವೆನಗೆ.
ವಿಭೂತಿಯೆ ಒಳಗುಂದದರಿಷಿಣವೆನಗೆ ದಿಗಂಬರವೆ ದಿವ್ಯಾಂಬರವೆನಗೆ.
ಶಿವಭಕ್ತರ ಪಾದರೇಣುವೆ ಅನುಲೇಪನವೆನಗೆ.
ರುದ್ರಾಕ್ಷಿಯೆ ಮೈದೊಡಿಗೆಯೆನಗೆ.
ಶರಣರ ಪಾದರಕ್ಷೆಯೆ ಶಿರದಲ್ಲಿ ತೊಂಡಿಲುಬಾಸಿಗವೆನಗೆ. ಚೆನ್ನಮಲ್ಲಿಕಾರ್ಜುನನ ಮದವಳಿಗೆಗೆ ಬೇರೆ ಶೃಂಗಾರವೇಕೆ ಹೇಳಿರೆ ಅವ್ವಗಳಿರಾ ?
**************************************************************
೯೧
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ.
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ. ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ. ಚೆನ್ನಮಲ್ಲಿಕಾರ್ಜುನಯ್ಯಾ, ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.
**************************************************************
೯೨
ಗುರುವೆ ತೆತ್ತಿಗನಾದ, ಲಿಂಗವೆ ಮದುವಣಿಗನಾದ, ನಾನೆ ಮದುವಳಿಗೆಯಾದೆನು.
ಈ ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು. ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ.
ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ.
ಮಿಕ್ಕಿನ ಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ.
**************************************************************
೯೩
ಗುರುವೆಂಬ ತೆತ್ತಿಗನು ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು, ಕಾದಿದೆ ಗೆಲಿದೆ ಕಾಮನೆಂಬವನ, ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು. ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.
**************************************************************
೯೪
ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು.
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವುದು.
ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು.
ಇವರ ಮಾತೆಲ್ಲವು ಸಹಜವೆ ನರಕಸಂಸಾರದಲ್ಲಿ ಹೊದಕುಳಿಗೊಳುತ್ತ ಶಿವನಿಲ್ಲ ಮುಕ್ತಿಯಿಲ್ಲ, ಹುಸಿಯೆಂದಡೆ ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯ.
**************************************************************
೯೫
ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ ? ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ ? ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ, ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ. ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ, ನೀ ಕೊಂದಡೆಯೂ ಶರಣೆಂಬುದ ಮಾಣೆ.
**************************************************************
೯೬
ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ ?
ಮಾಣಿಕ್ಯದ ಬೆಳಗುಳ್ಳಡೆ ದೀಪದ ಹಂಗೇಕೆ ?
ಪರುಷ ಕೈಯ್ಯಲುಳ್ಳಡೆ ಸಿರಿಯ ಹಂಗೇಕೆ ?
ಕಾಮಧೇನು ಕರೆವಡೆ ಕರುವಿನ ಹಂಗೇಕೆ ?
ಎನ್ನದೇವ ಚೆನ್ನಮಲ್ಲಿಕಾರ್ಜುನಲಿಂಗವು ಕರಸ್ಥಳದೊಳಗುಳ್ಳಡೆ ಇನ್ನಾವ ಹಂಗೇಕೆ ?
**************************************************************
೯೭
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ.
ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಕೊಳನತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ.
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ. ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.
**************************************************************
೯೮
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ.
ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ?
ಅದೆಂತೆಂದಡೆ ‘ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ’ ಎಂದುದಾಗಿ, ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?
**************************************************************
೯೯
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ ಷಟ್ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು ಆಧಾರ ತೊಡಗಿ ಆಜ್ಞಾಚಕ್ರವೇ ಕಡೆಯಾಗುಳ್ಳ ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು. ಆಜ್ಞಾಚಕ್ರದತ್ತಣಿಂದೆ ಊಧ್ರ್ವ ಭಾಗವಾದ ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ ಸಹಸ್ರದಳ ಕಮಲವನು ಭಾವಿಸುವುದು. ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ ಚಂದ್ರಮಂಡಲವನು ಧ್ಯಾನಿಸುವುದು. ಆ ಚಂದ್ರಮಂಡಲದ ಮಧ್ಯದಲ್ಲಿ ವಾಲಾಗ್ರ ಮಾತ್ರದೋಪಾದಿಯಲ್ಲಿ ಪರಮ ಸೂಕ್ಷ್ಮರಂಧ್ರವನು ಉಪದೇಶದಿಂದರಿವುದು. ಆ ಸೂಕ್ಷ್ಮರಂಧ್ರವನೆ ಕೈಲಾಸಸ್ಥಾನವಾಗಿ ಅರಿದು ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
**************************************************************
೧೦೦
ಜ್ಞಾನದ ಕಾರಣಾಂಗವೆ ಭಕ್ತಿಯು.
ಭಕ್ತಿಯ ಮಹಾಕಾರಣಾಂಗವೆ ಜ್ಞಾನವು.
ಭಕ್ತಿ ಜ್ಞಾನವೆಂಬುದು ಕಾಕಾಕ್ಷಿಯಂತೆ.
ಭಕ್ತಿ ಜ್ಞಾನವೆಂಬುದು ಎನ್ನ ಮೋಹದ ಚೆನ್ನಮಲ್ಲಿಕಾರ್ಜುನಾ ನಿಮ್ಮಂತೆ.
**************************************************************
೧೦೧
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ?
**************************************************************
೧೦೨
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ.
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನದೆನ್ನ.
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿ ಎನ್ನ.
ಶ್ರೋತ್ರ ಶುದ್ಧವಾಯಿತ್ತು ಅವರ ಕೀರ್ತಿಯ ಕೇಳಿ ಎನ್ನ.
ಭಾವನೆ ಎನಗಿದು ಜೀವನ ಲಿಂಗತಂದೆ.
ನೆಟ್ಟನೆ ನಿಮ್ಮ ಮನಮುಟ್ಟಿ ಪೂಜಿಸಿ ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನಾ.
**************************************************************
೧೦೩
ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ.
ಮನವ ಬೇಡಿದಡೆ ಮನವಕೊಟ್ಟು ಶುದ್ಧವಪ್ಪೆ.
ಧನವ ಬೇಡಿದಡೆ ಧನವ ಕೊಟ್ಟು ಶುದ್ಧವಪ್ಪೆ.
ನೀನಾವುದ ಬೇಡಿದಡೂ ಓಸರಿಸಿದಡೆ, ಕೈವಾರಿಸಿದಡೆ ಹಿಡಿದು ಮೂಗ ಕೊಯಿ.
ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೧೦೪
ತನುವೆಂಬ ಸಾಗರ ತುಂಬಲು, ಮನವೆಂಬುದು ಹರುಗೋಲಾಯಿತ್ತು ಅಂಬಿಗಾ. ಎನ್ನ ಗಮ್ಮನೆ ತೆಗೆಯೋ ಅಂಬಿಗಾ. ತೊರೆದು ದಾಂಟಿಹೆನೆಂಬ ಭರವಸ ಕರಘನ, ಗಮ್ಮನೆ ತೆಗೆಯೋ ಅಂಬಿಗಾ. ಸಿರಿಶೈಲ ಚೆನ್ನಮಲ್ಲಿಕಾರ್ಜುನಾ ನಿನ್ನ ಕಾಣಲು ಬಂದಿಹೆ ಅಂಬಿಗಾ.
**************************************************************
೨೦೫
ತನುಶುದ್ಭ ಮನಶುದ್ಧ ಭಾವಶುದ್ಧ ವಾದವರನೆನಗೊಮ್ಮೆ ತೋರಾ ? ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ ; ನಿತ್ಯಶುದ್ಧರಾದವರನೆನಗೊಮ್ಮೆ ತೋರಾ ? ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ ?
**************************************************************
೧೦೬
ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ.
ತನ್ನ ವಿನೋದಕ್ಕೆ ತಾನೆ ಸುತ್ತಿದನದಕ್ಕೆ ಸಕಲ ಪ್ರಪಂಚನು.
ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ. ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು ತನ್ನ ಜಗದ್ವಿಲಾಸ ಸಾಕಾದ ಮತ್ತೆ ತಾನೆ ಪರಿವನದರ ಮಾಯಾಪಾಶವನು.
**************************************************************
೧೦೭
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ, ತನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ ? ಬೊಬ್ಬುಲಿಯನೇರಿದ ಮರ್ಕಟನಂತೆ ಹಣ್ಣ ಮೆಲ್ಲಲಿಲ್ಲ, ಕುಳ್ಳಿರೆ ಠಾವಿಲ್ಲ. ನಾನು ಸರ್ವಸಂಗಪರಿತ್ಯಾಗಮಾಡಿದವಳಲ್ಲ, ನಿಮ್ಮ ಕೂಡಿ ಕುಲವಳಿದವಳಲ್ಲ, ಚೆನ್ನಮಲ್ಲಿಕಾರ್ಜುನಾ.
**************************************************************
೧೦೮
ತುಂಬಿದುದು ತುಳುಕದು ನೋಡಾ.
ನಂಬಿದುದು ಸಂದೇಹಿಸದು ನೋಡಾ.
ಒಲಿದುದು ಓಸರಿಸದು ನೋಡಾ.
ನೆರೆಯರಿದುದು ಮರೆಯದು ನೋಡಾ.
ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ.
**************************************************************
೧೦೯
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ, ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ. ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.
**************************************************************
೧೧೦
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಲ್ಮ ಲತಾದಿಗಳಲ್ಲಿಯ ತಳಿರು ಪುಷ್ಪ ಷಡುವರ್ಣಂಗಳೆಲ್ಲ ಹಗಲಿನ ಪೂಜೆ.
ಚಂದ್ರಪ್ರಕಾಶ ನಕ್ಷತ್ರ ಅಗ್ನಿ ವಿದ್ಯುತ್ತಾದಿಗಳು ದೀಪ್ತಮಯವೆನಿಸಿಪ್ಪವೆಲ್ಲ ಇರುಳಿನ ಪೂಜೆ. ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೧೧
ದೇವಲೋಕದವರಿಗೂ ಬಸವಣ್ಣನೆ ದೇವರು. ಮತ್ರ್ಯಲೋಕದವರಿಗೂ ಬಸವಣ್ಣನೆ ದೇವರು. ನಾಗಲೋಕದವರಿಗೂ ಬಸವಣ್ಣನೆ ದೇವರು.
ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು.
**************************************************************
೧೧೨
ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.
ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು, ನೆನಹಿನ ವ್ಯಾಪ್ತಿ ಬಿಡದು.
ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು.
ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು.
ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು. ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ.
**************************************************************
೧೧೩
ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ.
ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರಬಲ್ಲಡಾತನೆ ಸಂಬಂಧಿ.
ಹಾಗಲ್ಲದೆ ಅವರಿಚ್ಚೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?
**************************************************************
೧೧೪
ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ, ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ, ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.
**************************************************************
೧೧೫
ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ, ಸಲುಗುಗೆ ಮನ ನಿಮ್ಮಲ್ಲಿ, ಸೋಲುಗೆ ಮನ ನಿಮ್ಮಲ್ಲಿ, ಅಳಲುಗೆ ಮನ ನಿಮ್ಮಲ್ಲಿ, ಬಳಲುಗೆ ಮನ ನಿಮ್ಮಲ್ಲಿ, ಕರಗುವೆ ಮನ ನಿಮ್ಮಲ್ಲಿ, ಕೊರಗುಗೆ ಮನ ನಿಮ್ಮಲ್ಲಿ. ಎನ್ನ ಪಂಚೇಂದ್ರಿಯಂಗಳು ಕಬ್ಬುನ ಉಂಡ ನೀರಿನಂತೆ ನಿಮ್ಮಲ್ಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ.
**************************************************************
೧೧೬
ನಡೆಯದ ನುಡಿಗಡಣ, ಮಾಡದ ಕಲಿತನ, ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು, ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ?
ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು, ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?
**************************************************************
೧೧೭
ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ.
ಇಂತೀ ಪಂಚ ತೀರ್ಥಂಗಳನೊಳಕೊಂಡು ಮತ್ರ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ ?
**************************************************************
೧೧೮
ನಮಗೆ ನಮ್ಮ ಲಿಂಗದ ಚಿಂತೆ,
ನಮಗೆ ನಮ್ಮ ಭಕ್ತರ ಚಿಂತೆ,
ನಮಗೆ ನಮ್ಮ ಆದ್ಯರ ಚಿಂತೆ,
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣಾ ?
**************************************************************
೧೧೯
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ. ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.
**************************************************************
೧೨೦
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ.
ನಾನು ಸೀರೆಯನುಡುವುದಕ್ಕೆ ಮುನ್ನವೆ ಜಂಗಮಕ್ಕೆ ದೇವಾಂಗವನುಡಿಸುವೆ.
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗಂಧದ್ರವ್ಯಂಗಳ ಲೇಪಿಸುವೆ.
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ ಜಂಗಮಕ್ಕೆ ಅಕ್ಷತೆಯನಿಡುವೆ.
ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ.
ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ ಜಂಗಮಕ್ಕೆ ಧೂಪವಾಸನೆಯ ಕೊಡುವೆ.
ನಾನು ದೀಪಾರತಿಯ ನೋಡುವ ಮುನ್ನವೆ ಜಂಗಮಕ್ಕೆ ಆರತಿಯ ನೋಡಿಸುವೆ.
ನಾನು ಸಕಲ ಪದಾರ್ಥಂಗಳ ಸ್ವೀಕರಿಸುವ ಮುನ್ನವೆ ಜಂಗಮಕ್ಕೆ ಮೃಷ್ಟಾನ್ನವ ನೀಡುವೆ.
ನಾನು ಪಾನಂಗಳ ಕೊಳ್ಳುವ ಮುನ್ನವೆ ಜಂಗಮಕ್ಕೆ ಅಮೃತಪಾನಂಗಳ ಕೊಡುವೆ.
ನಾನು ಕೈಯ ತೊಳೆಯುವ ಮುನ್ನವೆ ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ.
ನಾನು ವೀಳೆಯವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ತಾಂಬೂಲವ ಕೊಡುವೆ.
ನಾನು ಗದ್ದುಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೆ ಜಂಗಮಕ್ಕೆ ಉನ್ನತಾಸನವನಿಕ್ಕುವೆ.
ನಾನು ಸುನಾದಂಗಳ ಕೇಳುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗೀತ ವಾದ್ಯಂಗಳ ಕೇಳಿಸುವೆ.
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೆ ಜಂಗಮಕ್ಕೆ ಆಭರಣಂಗಳ ತೊಡಿಸುವೆ.
ನಾನು ವಾಹನಂಗಳನೇರುವುದಕ್ಕೆ ಮುನ್ನವೆ ಜಂಗಮಕ್ಕೆ ವಾಹಂಗಳನೇರಿಸುವೆ.
ನಾನು ಮನೆಯೊಳಗಿಹುದಕ್ಕೆ ಮುನ್ನವೆ ಜಂಗಮಕ್ಕೆ ಗೃಹವಕೊಡುವೆ. ಇಂತೀ ಹದಿನಾರು ತೆರದಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ ನಾನು ಪ್ರಸಾದ ಮುಂತಾಗಿ ಭೋಗಿಸುವೆನಲ್ಲದೆ ಜಂಗಮವಿಲ್ಲದೆ ಇನಿತರೊಳೊಂದು ಭೋಗವನಾದಡೂ ನಾನು ಭೋಗಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಂತೀ ಕ್ರಮದಲ್ಲಿ ನಡೆವಾತಂಗೆ ಗುರುವುಂಟು ಲಿಂಗವುಂಟು ಜಂಗಮವುಂಟು, ಪಾದೋದಕವುಂಟು ಪ್ರಸಾದವುಂಟು ಆಚಾರವುಂಟು ಭಕ್ತಿಯುಂಟು.
ಈ ಕ್ರಮದಲ್ಲಿ ನಡೆಯದಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲಾಚಾರವಿಲ್ಲ ಭಕ್ತಿಯಿಲ್ಲ. ಅವನ ಬಾಳುವೆ ಹಂದಿಯ ಬಾಳುವೆ. ಅವನ ಬಾಳುವೆ ನಾಯ ಬಾಳುವೆ. ಅವನ ಬಾಳುವೆ ಕತ್ತೆಯ ಬಾಳುವೆ. ಅವನು ಸುರೆಮಾಂಸ ಭುಂಜಕನು, ಅವನು ಸರ್ವ ಚಾಂಡಾಲನಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೨೧
ನಾಳೆ ಬರುವುದು ನಮಗಿಂದೆ ಬರಲಿ,
ಇಂದು ಬರುವುದು ನಮಗೀಗಲೆ ಬರಲಿ ;
ಆಗೀಗ ಎನ್ನದಿರೊ, ಚೆನ್ನಮಲ್ಲಿಕಾರ್ಜುನಾ.
**************************************************************
೧೨೨
ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ?
ಸುರಾಳ ನಿರಾಳಂಗೆ ಮಜ್ಜನದ ಹಂಗೇತಕ್ಕೆ ? ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ ? ಸುವಾಸನೆ ಸೂಕ್ಷ್ಮಗಂಧ ಕಪರ್ೂರಗೌರಂಗೆ ಪುಷ್ಪದ ಹಂಗೇತಕ್ಕೆ ? ಮಾಟದಲಿ ಮನ ನಂಬುಗೆಯಿಲ್ಲದ, ಅಹಂಕಾರಕ್ಕೀಡಾದ, ಭಕ್ತಿಯೆಂಬ ಪಸಾರವನಿಕ್ಕಿ ಹೊಲೆಹದಿನೆಂಟುಜನ್ಮವ ಹೊರೆವುದರಿಂದ ಅಂಗೈಯಲೊರಸಿ ಮುಕ್ತಿಯ ಮೂಲ ಶಿಖಿರಂಧ್ರದ ಕಾಮನ ಸುಟ್ಟು ಶುದ್ಭಸ್ಫಟಿಕ ಸ್ವಯಂಜ್ಯೋತಿಯನು ಸುನಾಳದಿಂದ ಹಂ ಕ್ಷಂ ಎಂಬೆರಡಕ್ಷರವ ಸ್ವಯಾನುಭಾವಭಕ್ತಿನಿರ್ವಾಣವಾದವರನೆನಗೊಮ್ಮೆ ತೋರಿದೆ. ಶ್ರೀಗಿರಿ ಚೆನ್ನ ಮಲ್ಲಿಕಾರ್ಜುನಾ.
**************************************************************
೧೨೩
ನಿಮ್ಮ ನಿಲವಿಂಗೆ ನೀವು ನಾಚಬೇಡವೆ ?
ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ?
ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೧೨೪
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
**************************************************************
೧೨೫
ನೋಡಿಹೆನೆಂದಡೆ ದೃಷ್ಟಿಮರೆಯಾಯಿತ್ತು. ಕೂಡಿಹೆನೆಂದಡೆ ಭಾವ ಮರೆಯಾಯಿತ್ತು. ಏನೆಂಬೆನೆಂತೆಂಬೆನಯ್ಯಾ ? ಅರಿದಿಹೆನೆಂದಡೆ ಮರಹು ಮರೆಯಾಯಿತ್ತು. ನಿನ್ನ ಮಾಯೆಯನತಿಗಳೆವಡೆ ಎನ್ನಳವೆ ? ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೨೬
ನೋಡುವ ಕಂಗಳಿಗೆ ರೂಪಿಂಬಾಗಿರಲು ನೀವು ಮನನಾಚದೆ ಬಂದಿರಣ್ಣಾ.
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ. ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ.
ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ.
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು ಇದಾವ ಕಾರಣವೆಂದರಿಯದೆ, ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ.
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.
**************************************************************
೧೨೭
ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ?
ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?
**************************************************************
೧೨೮
ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ?
ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?
**************************************************************
೧೨೯
ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.
**************************************************************
೧೩೦
ಪರರೊಡತಣ ಮಾತು ನಮಗೇತರದಯ್ಯ ?
ಪರರೊಡತಣ ಗೊಟ್ಟಿ ನಮಗೇಕಯ್ಯ ?
ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?
**************************************************************
೧೩೧
ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.
**************************************************************
೧೩೨
ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ
ಓಂಕಾರವೆಂಬ ಶಿಣಿಗೋಲಂ ಪಿಡಿದು
ವ್ರತ ಕ್ರಿಯವೆಂಬ ಸಾಲನೆತ್ತಿ
ನಿರಾಶೆಯೆಂಬ ಕುಂಟೆಯಂ ತುರುಗಿ
ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು
ನಾನಾ ಮೂಲದ ಬೇರಂ ಕಿತ್ತು
ಜ್ಞಾನಾಗ್ನಿಯೆಂಬ ಬೆಂಕಿಯಂ ಸುಟ್ಟು
ಈ ಹೊಲನ ಹಸನಮಾಡಿ
ಬಿತ್ತುವ ಪರ್ಯಾಯವೆಂತೆಂದೊಡೆ
ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು
ಸ್ಥೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು ಸುಷುಮ್ನನಾಳವೆಂಬ ಕೋವಿಯಂ ಜೋಡಿಸಿ
ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು
ಕುಂಡಲಿಯ ಸರ್ಪನ ಹಗ್ಗವಂ ಬಿಗಿದು
ಹಂಸನೆಂಬ ಎತ್ತಂ ಕಟ್ಟಿ
ಪ್ರಣವವೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ
ಸಂತೋಷವೆಂಬ ಬೆಳೆಯಂ ಬೆಳೆದು
ಈ ಬೆಳೆಯ ಕೊಯಿದುಂಬ ಪರ್ಯಾಯವೆಂತೆಂದೊಡೆ ಬಾಗುಚಂದನೆಂಬ ಕುಡುಗೋಲಂ ಪಿಡಿದು
ಜನನದ ನಿಲವಂ ಕೊಯಿದು,
ಮರಣದ ಸೂಡಂ ಕಟ್ಟಿ
ಆಕಾಶವೆಂಬ ಬಣಬೆಯ ಒಟ್ಟಿ
ಅಷ್ಟಾಂಗಯೋಗವೆಂಬ ಜೀವಧನದಿಂದಮೊಕ್ಕಿ
ತಾಪತ್ರಯವೆಂಬ ಮೆಟ್ಟನಂ ಮೆಟ್ಟಿಸಿ
ಪಾಪದ ಹೊಟ್ಟ ತೂರಿ
ಪುಣ್ಯದಜರ ಹಮ್ಮನುಳಿಯೆ
ನಿರ್ಮಲನೆಂಬ ಘನರಾಶಿಯಂ ಮಾಡಿ
ಚಿತ್ರಗುಪ್ತರೆಂಬ ಶಾನುಭೋಗರ ಸಂಪುಟಕ್ಕೆ ಬರಹಂ ಬರೆಸದೆ ವ್ಯವಹಾರಂ ಕದ್ದು ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಲ್ಲಿ ಭಾನುಗೆ ಒಂದೆ ಮುಖವಾದ ಒಕ್ಕಲುಮಗನ ತೋರಿಸಯ್ಯ ನಿಮ್ಮ ಧರ್ಮ ಶ್ರೀಶೈಲಚೆನ್ನಮಲ್ಲಿಕಾರ್ಜುನಪ್ರಭುವೆ.
**************************************************************
೧೩೩
ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.
**************************************************************
೧೩೪
ಬಂಜೆ ಬೇನೆಯನರಿವಳೆ ?
ಬಲದಾಯಿ ಮದ್ದ ಬಲ್ಲಳೆ ?
ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ?
**************************************************************
೧೩೫
ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. ಅಣ್ಣಾ, ನಾನು ಹೆಂಗೂಸಲ್ಲ ; ಅಣ್ಣಾ, ನಾನು ಸೂಳೆಯಲ್ಲ.
ಅಣ್ಣಾ, ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ? ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ ನೋಡಣ್ಣಾ ?
**************************************************************
೧೩೬
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು.
ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ ;
ಒಬ್ಬ ಐಮುಖವಾಗಿ ಕಾಯರೂಪಾದ ;
ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು, ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ.
**************************************************************
೧೩೭
ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು.
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು. ತರುಮರಾದಿಗಳು ಲಿಂಗವೆಂಬೆನೆ ?ತರಿದಲ್ಲಿ ಹೋಯಿತ್ತು.
ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ ಚೆನ್ನಮಲ್ಲಿಕಾರ್ಜುನಾ, ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.
**************************************************************
೧೩೮
ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ ಹರಣ ಹಾರಿಹೋದ ತೆರನಂತಾಯಿತ್ತು. ನೀ ಕಾಡಿ ಕಾಡಿ ನೋಡುವನ್ನಬರ, ಎನಗಿದು ವಿಧಿಯೇ ಹೇಳಾ ತಂದೆ ? ಮುರುವಾರುವನ್ನಬರ, ಎಮ್ಮೆ ಗಾಳಿಗೆ ಹಾರಿಹೋದ ತೆರನಂತಾಯಿತ್ತು. ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?
**************************************************************
೧೩೯
ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಸವಣಂಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ, ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.
**************************************************************
೧೪೦
ಬೆಟ್ಟಕ್ಕೆ ಸಾರವಿಲ್ಲೆಂಬರು ತರುಗಳು ಹುಟ್ಟುವಪರಿ ಇನ್ನೆಂತಯ್ಯಾ ? ಇದ್ದಲಿಗೆ ರಸವಿಲ್ಲೆಂಬರು ; ಕಬ್ಬುನ ಕರಗುವಪರಿ ಇನ್ನೆಂತಯ್ಯಾ ? ಎನಗೆ ಕಾಯವಿಲ್ಲೆಂಬರು ; ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ ?
**************************************************************
೧೪೧
ಬೆಟ್ಟದ ಮೇಲೊಂದು ಮನೆಯ ಮಾಡಿಮೃಗಗಳಿಗಂಜಿದಡೆಂತಯ್ಯಾ ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
**************************************************************
೧೪೨
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?
ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ.
ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ.
ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು.
ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ
**************************************************************
೧೪೩
ಭಾನುವಿನಂತಿಪ್ಪುದು ಜ್ಞಾನ, ಭಾನುಕಿರಣದಂತಿಪ್ಪುದು ಭಕ್ತಿ. ಭಾನುವನುಳಿದು ಕಿರಣಂಗಳಿಲ್ಲ, ಕಿರಣಂಗಳನುಳಿದು ಭಾನುವಿಲ್ಲ. ಜ್ಞಾನವಿಲ್ಲದ ಭಕ್ತಿ, ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ ?
**************************************************************
೧೪೪
ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, ಇದೇ ಕರ್ತೃಭೃತ್ಯರ ಭೇದ. ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ, ಪ್ರಸಾದವ ಕೊಳ್ಳಬೇಕು. ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೧೪೫
ಮದನಾರಿಯೆಂಬ ಮಳೆ ಹೊಯ್ಯಲು, ಶಿವಯೋಗವೆಂಬ ತೊರೆ ಬರಲು, ಕಾಮನೆ ಅಂಬಿಗನಾದ ನೋಡಾ ? ಕರ್ಮದ ಕಡಲೆನ್ನನೆಳದೊಯ್ವಾಗ ಕೈಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ.
*************************************************************
೧೪೬
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ.
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ.
ವಿಧಿಯ ಮೀರುವ ಅಮರರಿಲ್ಲ.
ಕ್ಷುಧೆ ವಿಧಿ ವ್ಯಸನಕ್ಕಂಜಿ, ನಾ ನಿಮ್ಮ ಮರೆಹೊಕ್ಕು ಬದುಕಿದೆನು ಚೆನ್ನಮಲ್ಲಿಕಾರ್ಜುನಾ.
**************************************************************
೧೪೭
ಮನ ಮುನ್ನ ಮುನ್ನವೆ ಗುರುವಿನೆಡೆಗೆಯಿದಿತ್ತು.
ತನುವಿನಲ್ಲಿ ಡಿಂಬ ನೋಡಾ ? ಮನ ಬೇರಾದವರ ತನುವನಪ್ಪುವನೆಗ್ಗ ನೋಡಾ. ಚೆನ್ನಮಲ್ಲಿಕಾರ್ಜುನನ ನೋಡಿ ಕೂಡಿ ಬಂದೆಹೆನಂತಿರುವಂತಿರು.
**************************************************************
೧೪೭
ಮನೆಯೆನ್ನದು, ತನುವೆನ್ನದು, ಧನವೆನ್ನದೆನ್ನೆನಯ್ಯಾ.
ಮನ ನಿಮ್ಮದು, ತನು ನಿಮ್ಮದು, ಧನ ನಿಮ್ಮದು ಎಂದಿಪ್ಪೆನಯ್ಯಾ. ಸತಿಯಾನು, ಪತಿಯುಂಟು, ಸುಖ ಉಂಟೆಂಬುದ ಮನ, ಭಾವದಲ್ಲಿ ಅರಿದೆನಾದಡೆ, ನಿಮ್ಮಾಣೆಯಯ್ಯಾ.
ನೀನಿರಿಸಿದ ಗೃಹದಲ್ಲಿ ನಿನ್ನಿಚ್ಫೆಯವಳಾಗಿಪ್ಪೆನಲ್ಲದೆ ಅನ್ಯವನರಿಯೆ ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೧೪೮
ಮರಮರ ಮಥನಿಸಿ ಕಿಚ್ಚು ಹುಟ್ಟಿ ಸುತ್ತಣ ತರುಮರಾದಿಗಳ ಸುಡಲಾಯಿತ್ತು.
ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು.
ಇಂತಪ್ಪ ಅನುಭಾವರ ಅನುಭಾವವ ತೋರಿ ಎನ್ನ ಒಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
**************************************************************
೧೪೯
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚೆನ್ನಮಲ್ಲಿಕಾರ್ಜುನಾ ?
**************************************************************
೧೫೦
ಮರೆದೊರಗಿ, ಕನಸ ಕಂಡು ಹೇಳುವಲ್ಲಿ ಸತ್ತ ಹೆಣ ಎದ್ದಿತ್ತು.
ತನ್ನ ಋಣ ನಿಧಾನ ಎದ್ದು ಕರೆಯಿತ್ತು.
ಹೆಪ್ಪಿಟ್ಟ ಹಾಲು ಗಟ್ಟಿತುಪ್ಪಾಗಿ ಸಿಹಿಯಾಯಿತ್ತು.
ಇದಕ್ಕೆ ತಪ್ಪ ಸಾಧಿಸಲೇಕೆ ಚೆನ್ನಮಲ್ಲಿಕಾರ್ಜುನದೇವರ ದೇವನಣ್ಣಗಳಿರಾ ?
**************************************************************
೧೫೧
ಮುತ್ತು ಒಡೆದಡೆ ಬೆಸೆಯಬಹುದೆ ?
ಮನ ಮುರಿದಡೆ ಸಂತಕ್ಕೆ ತರಬಹುದೆ ?
ಅಪ್ಪುಗೆ ಸಡಲಿದ ಸುಖವ ಮರಳಿ ಅರಸಿದರುಂಟೆ ? ಸಾಧಕನೊಯಿದ ನಿಧಾನದ ಕುಳಿಯಂತೆ ಅಲ್ಲಿ ಏನುಂಟು ?
ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ? ನೋಡದಿರು, ಕಾಡದಿರು, ಮನಬಳಸದಿರು. ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ. ಲೇಸು ಬೀಸರವೋಗದ ಮುನ್ನ ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ ?
**************************************************************
೧೫೨
ರತ್ನದ ಸಂಕೋಲೆಯಾದಡೆ ತೊಡರಲ್ಲವೆ ?
ಮುತ್ತಿನ ಬಲೆಯಾದಡೆ ಬಂಧನವಲ್ಲವೆ ?
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?
**************************************************************
೧೫೩
ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ, ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
**************************************************************
೧೫೪
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ ; ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ? ಅದೆಂತೆಂದಡೆ, ಸಾಕ್ಷಿ ‘ವೃಕ್ಷದ್ಭವತಿ ಬೀಜಂ ಹಿ ತದ್ವೃಕ್ಷೇ ಲೀಯತೇ ಪುನಃ ರುದ್ರಲೋಕಂ ಪರಿತ್ಯಕ್ತಾ ್ವ ಶಿವಲೋಕೇ ಭವಿಷ್ಯತಿ || ‘ ಎಂದುದಾಗಿ, ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು ; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೫೫
ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ ? ಧರ್ಮತ್ಯಾಗಿಗೆ ನರಕವಲ್ಲದೆ ಲಿಂಗವಿಲ್ಲ ವೈರಾಗ್ಯಸಂಪನ್ನಂಗೆ ಮುಕ್ತಿಯಲ್ಲದೆ ಲಿಂಗವಿಲ್ಲ ? ಜ್ಞಾನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ ? ಇಂತಪ್ಪ ಭ್ರಾಂತನತಿಗಳದು ತನು ತಾನಾದ ಇರವೆಂತೆಂದಡೆ ದ್ವೈತವಳಿದು ಅದ್ವೈತದಿಂದ ತನ್ನ ತಾನರಿದಡೆ ಚೆನ್ನಮಲ್ಲಿಕಾರ್ಜುನಲಿಂಗವು ತಾನೆ.
**************************************************************
೧೫೬
ವಟವೃಕ್ಷದೊಳಡಗಿದ ಸಮರಸ ಬೀಜ ಬಿನ್ನಭಾವಕ್ಕೆ ಬಪ್ಪುದೆ ? ಕಂಗಳ ನೋಟ, ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ.
ಈ ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ ?
ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.
**************************************************************
೧೫೭
ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು.
ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ?
ನವರತ್ನದ ಪೆಟ್ಟಿಗೆಯ ತೆರದು ನೋಡಿ, ಕೆಯ್ಕೊಂಡು, ವಾನರಂಗಳು ಮೆದ್ದು ನೋಡಿ, ಹಣ್ಣಲ್ಲವೆಂದು ಬಿಟ್ಟು ಕಳದವು.
ಲೋಕದೊಳಗೆ ಶರಣ ಸುಳಿದಡೆ, ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು ?
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು.
**************************************************************
೧೫೬
ವಿಷಯದ ಸುಖ ವಿಷವೆಂದರಿಯದ ಮರುಳೆ, ವಿಷಯಕ್ಕೆ ಅಂಗವಿಸದಿರಾ.
ವಿಷಯದಿಂದ ಕೆಡನೆ ರಾವಣನು
ವಿಷಯದಿಂದ ಕೆಡನೆ ದೇವೇಂದ್ರನು ?
ವಿಷಯದಿಂದಾರು ಕೆಡರು ಮರುಳೆ ?
ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ.
ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ.
**************************************************************
೧೫೭
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ.
**************************************************************
೧೫೮
ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು
ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು
ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ;
ತರ್ಕಕ್ಕೆ ಅತರ್ಕ್ಯನು ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು
ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು
ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ ವೀರಶೈವ ಮಾರ್ಗವನರುಪುವುದಕ್ಕೆ ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ, ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು, ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು, ಶರಣಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣ ಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ, ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸತಿಯ ಬೆರಸ, ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದವೆಲ್ಲವ ಸಮರ್ಪಿಸಿ, ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ, ಪಾತ್ರಪಾತ್ರವನರಿದೀವ, ಚತುರ್ವಿಧಪದವಿಯ ಹಾರ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಸಂಪನ್ನ. ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆದ ನಮ್ಮ ಬಸವಣ್ಣನು. ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ
**************************************************************
೧೫೯
ಶಿವನು ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ ತ ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ,
ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ,
ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ,
ಆ ಭಕ್ತಿಗಳಿಗೆ ಭಾವಜ್ಞಾನಮನಬುದ್ಧಿಚಿತ್ತ ಅಹಂಕಾರಗಳನೆ ಹಸ್ತಂಗಳೆಂದೆನಿಸಿ,
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಂಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ,
ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ,
ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯ ಪದಾರ್ಥಗಳೆಂದೆನಿಸಿ,
ಆ ದ್ರವ್ಯಪದಾರ್ಥಂಗಳು ಆಯಾ ಮುಖದ ಲಿಂಗಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ ಅಂಗಸ್ಥಲಂಗಳಡಗಿ, ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು, ಕಾಯಗುರು, ಪ್ರಾಣಲಿಂಗ, ಜ್ಞಾನ ಜಂಗಮ, ಗುರುವಿನಲ್ಲಿ ಶುದ್ಧ ಪ್ರಸಾದ ಲಿಂಗದಲ್ಲಿ ಸಿದ್ಧಪ್ರಸಾದ ಜಂಗಮದಲ್ಲಿ ಪ್ರಸಿದ್ಧ ಪ್ರಸಾದ ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೆ ಅಲ್ಲ, ಶೂನ್ಯನಲ್ಲ, ನಿಶ್ಶೂನ್ಯನಲ್ಲ, ದ್ವೈತಿಯಲ್ಲ, ಅದ್ವೈತಿಯಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ಇದು ಕಾರಣ, ಇದರಾಗುಹೋಗು ಸಕಲಸಂಬಂಧವ ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು.
**************************************************************
೧೬೦
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು ಪರಮಸುಖಿಯಾದೆನಯ್ಯಾ.
**************************************************************
೧೬೧
ಸಂಸಾರಸಂಗದಲ್ಲಿರ್ದೆ ನೋಡಾ ನಾನು. ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು. ಅಂಗವಿಕಾರದ ಸಂಗವ ನಿಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು, ಹಿಂದಣ ಜನ್ಮವ ತೊಡೆದು, ಮುಂದಣ ಪ ಥವ ತೋರಿದನೆನ್ನ ತಂದೆ. ಚೆನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.
**************************************************************
೧೬೨
ಸಟೆ ಹಿರಿದಾಯಿತ್ತು ಇನ್ನೇವೆನಿನ್ನೇವೆ.
ದಿಟ ಕಿರಿದಾಯಿತ್ತು ಇನ್ನೇವೆನಿನ್ನೇವೆ.
ಡಂಬಕ ಮಿಗಿಲಾಯಿತ್ತು ಇನ್ನೇವೆನಿನ್ನೇವೆ. ನಂಬುಗೆಯೆಯ್ದದಿನ್ನೇವೆನಿನ್ನೇವೆ.
ಆಮಿಷ ಘನವಾಯತ್ತಿನ್ನೇವೆನಿನ್ನೇವೆ.
ತಾಮಸ ಘನವಾಯಿತ್ತಿನ್ನೇವೆನಿನ್ನೇವೆ.
ಚೆನ್ನಮಲ್ಲಿಕಾರ್ಜುನಯ್ಯಾ ಭಕ್ತಿಯೆನ್ನಲ್ಲಿಲ್ಲ ಇನ್ನೇವೆನಿನ್ನೇವೆ.
**************************************************************
೧೬೩
ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನುಡಿವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನಡೆವನೆ ಶರಣನು ? ಗುರುಲಿಂಗಜಂಗಮದಲ್ಲಿ ಸಟೆಯ ಬಳಸಿದಡೆ ಅವನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ.
ಉಂಬುದೆಲ್ಲ ಕಿಲ್ಬಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ. ಹುಸಿಯೆಂಬುದೆ ಹೊಲೆ, ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ? ಹುಸಿಯನಾಡಿ ಲಿಂಗವ ಪೂಜಿಸಿದಡೆ ಹೊಳ್ಳ ಬಿತ್ತಿ ಫಲವನರಸುವಂತೆ.
**************************************************************
೧೬೪
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ.
ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ. ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಶದಭಿಷೇಕವ ಮಾಡಿಸಲು, ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ.
ನೆರೆದ ಶಿವಗಣಂಗಳ ಮಧ್ಯದಲ್ಲಿ ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು, ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ, ಕಾಯವೆ ಕೈಲಾಸವಾಯಿತ್ತು ; ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು.
ಇಂತು ಮುಂದ ತೋರಿ ಹಿಂದ ಬಿಡಿಸಿದ ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ.
**************************************************************
೧೬೫
ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು.
ಈ ಪಿಂಡವೆಂಬ ಪಟ್ಟಣದಲ್ಲಿ ಸೂಕ್ಷ್ಮವಾದಂಥಧಾರಾಕಾಶದಿಂದ ಮನೋಹರವಾಗಿದ್ದ ಹೃದಯಕಮಲವೆ ಅಂತಃಪುರವು.
ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ ಸಚ್ಚಿದಾನಂದವೇ ಕುರುಹಾಗುಳ್ಳ ಪರಮಶಿವನು ಜಲದಲ್ಲಿ ತೋರುತ್ತಿರ್ದ ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು.
ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ ಘಟಾಕಾಶದೋಪಾದಿಯಲ್ಲಿ [ಅ]ಖಂಡಿತನಾಗಿರ್ದ ಚಿದ್ರೂಪನಾದ ಶಿವನನು ಭಾವಿಸುವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
**************************************************************
೧೬೬
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ.
ನಾನು ಭಕ್ತಳೆಂಬ ನಾಚಿಕೆಯ ನೋಡಾ.
ನಾನು ಯುಕ್ತಳೆಂಬ ಹೇಸಿಕೆಯ ನೋಡಾ.
ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ ;
ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ
**************************************************************
೧೬೭
ಸಾವಿರ ಹೊನ್ನಿಂಗೆ ಸಾದಕೊಂಡು ಸುಣ್ಣವ ಬೆರಸಿದಂತೆ ಮಾಡಿದೆಯಯ್ಯಾ.
ಮೂರು ಲಕ್ಷದ ಬೆಲೆಗೆ ರತ್ನವ ಕೊಂಡು ಮಡುವಿನಲ್ಲಿ ಇಟ್ಟಂತೆ ಮಾಡಿದೆಯಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮುಟ್ಟಿ ಪಾವನವ ಮಾಡಿ ಕಷ್ಟಸಂಸಾರಿಗೊಪ್ಪಿಸುವಂತೆ ಮಾಡಿದೆಯಯ್ಯಾ.
**************************************************************
೧೬೮
ಸುಖದ ಸುಖಿಗಳ ಸಂಭಾಷಣೆಯಿಂದ ದುಃಖಕ್ಕೆ ವಿಶ್ರಾಮವಾಯಿತ್ತು. ಭಾವಕ್ಕೆ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶಾಮವಾಯಿತ್ತು.
ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಸಂಗದಿಂದ.
**************************************************************
೧೬೯
ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ,
ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ ಗುಟ್ಟನಾರು ಕಂಡುದಿಲ್ಲ.
ನಾನು ಆತನನರಿದು ಶರಣೆಂದು ಬದುಕಿದೆ.
ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ.
**************************************************************
೧೭೦
ಸ್ಥಾನಭೇದ ಸಂಶಯ ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಎಂಬ ಷಟ್ಚಕ್ರಂಗಳ ವರ್ತನೆಯ ನುಡಿದಡೇನು ?
ಆದಿ ಅನಾದಿಯ ಕೇಳಿದಡೇನು ?
ತನ್ನಲ್ಲಿದ್ದುದ ತಾನರಿಯದನ್ನಕ್ಕ ಉನ್ಮನಿಯ ರಭಸದ ಸಿಂಹಾಸನದ ಮೇಲೆ ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.
*************************************************************
೧೭೧
ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ
ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ ?
*****************************"********************************
೧೭೨
ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.
ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು.
ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ,
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ.
**************************************************************
೧೭೩
ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು.
ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು.
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ
**************************************************************
೧೭೪
ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ;
ಹಿಂದೆನ್ನ ಮುಂದೆನ್ನ, ನೀನಲ್ಲದೆ ಪೆರತೊಂದಹುದೆನ್ನೆ.
ಮನ ಘನವಾದುದಿಲ್ಲವಯ್ಯಾ.
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ.
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.
**************************************************************
೧೭೫
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ?
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ?
ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?
**************************************************************
೧೭೬
ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.
**************************************************************
೧೭೭
ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ, ವಿಷಯ ವಿಕಾರವೆನ್ನನಿರಿಸಿ ಹೋದವು ಕಾಣಾ ತಂದೆ.
ಅದೇ ಕಾರಣ ನೀವು ಅರಸಿಕೊಂಡು ಬಂದಿರಣ್ಣ.
ನೀವು ಅರಸುವ ಅರಕೆ – ಎನ್ನೊಳಗಾಯಿತ್ತು.
ಎನ್ನ ದೇವ ಚೆನ್ನಮಲ್ಲಿಕಾರ್ಜುನ ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು.
**************************************************************
೧೭೮
ಹಸಿವೆ ನೀನು ನಿಲ್ಲು ನಿಲ್ಲು
ತೃಷೆಯೆ ನೀನು ನಿಲ್ಲು ನಿಲ್ಲು
ನಿದ್ರೆಯೆ ನೀನು ನಿಲ್ಲು ನಿಲ್ಲು
ಕಾಮವೆ ನೀನು ನಿಲ್ಲು ನಿಲ್ಲು
ಕ್ರೋಧವೆ ನೀನು ನಿಲ್ಲು ನಿಲ್ಲು
ಮೋಹವೆ ನೀನು ನಿಲ್ಲು ನಿಲ್ಲು
ಲೋಭವೆ ನೀನು ನಿಲ್ಲು ನಿಲ್ಲು
ಮದವೆ ನೀನು ನಿಲ್ಲು ನಿಲ್ಲು
ಮಚ್ಚರವೆ ನೀನು ನಿಲ್ಲು ನಿಲ್ಲು
ಸಚರಾಚರವೆ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ
ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.
**************************************************************
೧೭೯
ಹಾಲಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.
ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ ‘ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್’ || ಎಂದುದಾಗಿ, ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ, ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.
**************************************************************
೧೮೦
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ ?
ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು ?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ,
ನೀನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದೆರೆದೆನು.
**************************************************************
೧೮೧
ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೆ ಲೇಸು ಕಂಡಯ್ಯಾ.
ಕಾಯದ ಸಂಗವ ವಿವರಿಸಬಲ್ಲಡೆ ಕಾಯದ ಸಂಗವೆ ಲೇಸು ಕಂಡಯ್ಯಾ.
ತಾಯಿ ರಕ್ಕಸಿಯಾದಂತೆ ಕಾಯವಿಕಾರವು. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದವರು ಕಾಯಗೊಂಡಿದ್ದರೆನಬೇಡ.
**************************************************************
೧೮೨
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ.
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ ಕಂದಾ, ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ, ಚೆನ್ನಮಲ್ಲಿಕಾರ್ಜುನಾ.
**************************************************************
೧೮೩
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.
ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ, ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ.
ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ.
ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ.
ಬಸವಣ್ಣ ಮೆಚ್ಚಲು ಒಗತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು.
ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ.
**************************************************************
೧೮೪
ಹೂವು ಕಂದಿದಲ್ಲಿ ಪರಿಮಳವನರಸುವರೆ ?
ಕಂದನಲ್ಲಿ ಕುಂದನರಸುವರೆ ?
ಎಲೆ ದೇವ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೆ ?
ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ?
ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?
**************************************************************
೧೮೫
ಹೆದರದಿರು ಮನವೆ, ಬೆದರದಿರು ತನುವೆ, ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದುಕೋಟಿ, ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ, ಚೆನ್ನಮಲ್ಲಿಕಾರ್ಜುನಾ.
**************************************************************
೧೮೬
ಹೊನ್ನು ಮುರಿದಡೆ ಬೆಸಸಬಹುದಲ್ಲದೆ,
ಮುತ್ತು ಒಡೆದಡೆ ಬೆಸಸಬಹುದೆ ?
ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ?
ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.
**************************************************************
ಸಂಗ್ರಹ : ಕುಮಾರ್ ಬಿ ಬಾಗೀವಾಳ್.
Comments
Post a Comment