ತುಡಿತ Thuditha a poem by Kumar B Bagival
ತುಡಿತ..
ನೆನೆದ ಮರುಗಳಿಗೆಯಲಿ ಮರಳಿ ಬರುವೆ.
ಮನದ ಅನತಿಯಲೆ ಸುಳಿದು ಮೆರೆವೆ.
ತೊರೆದು ಹೇಗಿರಲಿ ನವಿರ ಸವಿ ಸಖ್ಯವ
ಬೇರೆಲ್ಲವು ಈ ಜಗದಲಿ ನನಗೆ ನಿನಗಿಂತ ಮುಖ್ಯವಾ?
ಅರೆಗಳಿಗೆ ಮರೆತರೂ ಹೊರಳಡಿ ನರಳುವೆ
ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ
ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ
ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ.
ಮಹಾ ಕೂಗದು ನನಗೆ ನಿನ್ನ ಮನದ ಕರೆ
ಮೋಹ ಯಾಕದೋ ಗೊತ್ತಿಲ್ಲ ಅದು ಖರೆ
ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು
ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು.
ಕನಸಿಗೂ ಅರ್ಥ ಬೇಕಿದೆ ನನಗೀಗಲೆ
ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ
ಜಪವು ನೆಪವಾಗಿದೆ ಸಂಧಿಸುವ ಕಾರಣಕೆ
ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ.
ಬರುವೆ ಭರವಸೆಯ ಹೊತ್ತು ತರುವೆ
ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ
ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ
ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ.
ರಚನೆ: ಕುಮಾರ್ ಬಿ ಬಾಗೀವಾಳ್
Comments
Post a Comment