Posts

Showing posts from June, 2021

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು... Sankhyeya aatavalla ninnondigina dinagalu... A poem by Kumara B Bagival

  ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು... ಕರೆದು ಮೊರೆಯಿಟ್ಟರೂ ಓಗೊಡದ ಮನವೆ ಬರೆದು ಹರಿದು ಹಾಕಿರುವೆ ಸಾಲುಗಳ ಪುಟಗಳನೆ ಸರಿದು ದೂರದಿ ನಿಂತು ನೋಡುವೆ ಏತಕೆ ಸುಮ್ಮನೆ ಮುರಿದು ಮೌನವನೊಮ್ಮೆ ಕೂಗಿಬಿಡು ನನ್ನನೊಮ್ಮೆ. ಹರಿವ ದಿನಗಳ ಲೆಕ್ಕವು ಸಿಗವು ನಾಳೆಗಳ ಸಂತೆಯಲಿ ಸುರಿವ ಬಾಷ್ಪದ ನಳವು ನಂದಿಹೋಗುವ ಚಿಂತೆಯಲಿ ಕೊರೆವ ಮಣಭಾರದ ಮನವನೊತ್ತು ಅಲೆಯುತಲಿ ಬರುವ ದಿನಗಳ ಏಣಿಸುತ ಕಾಯ್ವೆನಾ ನಿನದೇ ಜ್ಞಾನದಲಿ. ಅಂಕೆಯ ಮೀರುವ ಸಮುಯದಲಿ ಮಿತಿ ಏರುವ  ಶಂಕೆಯಿಲ್ಲದ ಪ್ರೀತಿಯ ಅಭಿಮಾನದಿ ಸಾರುವ ಸಂಖ್ಯೆಗಳ ಆಟವಷ್ಟೇ ಆಗದಿರಲಿ ನಿನಗೋಸ್ಕರ  ಕಳೆದ ದಿನಗಳು, ಸೊನ್ನೆಯಾದರೂ ಸರಿಬೆಲೆಯಿರಲಿ ದಿನಗಳಿಗೆ. ರಚನೆ : ಕುಮಾರ್ ಬಿ ಬಾಗೀವಾಳ್.

ನೀನಿಲ್ಲದ ನಾಳೆಗಳು Neenillada naalegalu a poem by Kumar B Bagival

  ನೀನಿಲ್ಲದ ನಾಳೆಗಳು ಮುಡುಪಾಗಿವೆ ನೆನಪುಗಳ ಗೊಂಚಲು, ನಿನಗಾಗಿಯೇ  ಕಾಯ್ದಿರಿಸಿದ ಕ್ಷಣಗಳು. ಪಡುಪಾಡು ಹತ್ತಿ ನಿನಗಾಗಿ ಸುತ್ತಿದ ಗಳಿಗೆಗಳು, ಕಾಡದಿರದವು ನಾಳೆಗಳನು ನೀನಿಲ್ಲದೆ ದಿನವೂ. ಒಡಲ ಸೇರಿದ ಅದೆಷ್ಟು ಸಂಕಟಗಳು, ಬಡಿದಾಡುತ್ತಲಿವೆ ಹೊರಬರಲು ಒಂದೇ ಸಮನೆ ಕಡಿದಾದ ನಿರ್ಣಯವದು ನಿನಗದೇತಕೋ ಬಿಡಿ ಬಿಡಿ ಬೇಡದಿರವು ನಾಳೆಗಳನು ಜೊತೆ ಸೇರಿಕೊಳಲು. ಸಾರಿಹೇಳುತಿವೆ ಕೇಳದ  ಸೊಲ್ಲಿನಲಿ , ಬರಿ ಮೇಲಾಟಗಳ ಸೋಲುಗೆಲುವಗಳಲ್ಲ. ನಿನ್ನನರಿಯುವ ಪರಿಯಲಿ ಬರೆದ ಪತ್ರಗಳ ಸಂಖ್ಯೆಗಳ ಏಣಿಸುತಲಿ ಮಣಿಸದಿರವು ನಾಳೆಗಳನು ನಿನ್ನೊಲವಲೆ. ರಚನೆ : ಕುಮಾರ್ ಬಿ ಬಾಗೀವಾಳ್