ಸ್ವಗತ... Swagatha a poem on environment by Kumar B Bagival
ಸ್ವಗತ...
ನನ್ನೊಡಲ ಸೇರಿವೆ ಅದೆಷ್ಟೋ
ಆಗದ , ಮಾಗದ,ಅಗಾಧ ವಸ್ತುಗಳು
ಗರ್ಭಗುಡಿಯಲಡಗಿಸಿದ್ದು ಯಾರು?
ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು.
ಬಸಿರು ತುಂಬ ಉಸಿರಾಗದ ಕಸದ ರಾಶಿ
ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ
ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?
ಸ್ವಗತಿಸುತಿದೆ ತನ್ನಲ್ಲೇ ಧರೆ ಕೇಳದೇ ಯಾರನು.
ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು
ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು
ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?
ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು.
ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ
ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ
ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು?
ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು.
ನನಗುಣಿಸಿದ ವಿಷವದು ತನಗೇ ಎಂದು
ನನಗೆಣಿಸಿದ ಅಳಿವದು ತನಗೇ ಎಂದು
ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು
ಒಂದನೂ ಅರಿಯದ ಮೂರ್ಖನದು ಯಾರು?
ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment