ವಿಶ್ವಗುರು ಬಸವಣ್ಣ. VISHWAGURU BASAVANNA. An article by Kumar B Bagival.

 ವಿಶ್ವಗುರು ಬಸವಣ್ಣ.

                          --ಕುಮಾರ್ ಬಿ ಬಾಗೀವಾಳ್


ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಸತ್ ರಚಿಸಿದ್ದವೋ ಇಲ್ಲವೋ , ಸಂವಿಧಾನದ ಅರಿವು ಇತ್ತೋ ಇಲ್ಲವೋ, ಪ್ರಜಾಪ್ರಭುತ್ವದ ಅರಿವು ಇದ್ದಿತೋ ಇಲ್ವೋ, ಅದಾಗಲೇ ಕರ್ನಾಟಕದ ಕಲ್ಯಾಣದಲ್ಲಿ ಅದರ ಚಿಗುರು ಬಿಟ್ಟಿದ್ದಂತು ಸತ್ಯ, ಬೀಜ ಬಿತ್ತಿ , ನೀರೆರೆದು, ಪೋಷಿಸುವ ಮೂಲಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದು ಶರಣರು. ಒಂದು ಹಂತಕ್ಕೆ ರಾಜರ ಒಳ್ಳೆ ಆಳ್ವಿಕೆ ಇದ್ದಾಗ್ಯೂ ಕೆಲವರ ಕುತಂತ್ರಗಳಿಂದಾಗಿ ಒಳ್ಳೆಯ ಬೆಳವಣಿಗೆಗಳು ಸಮಾಜದಲ್ಲಿ ಚಿಗುರುವ ಮೊದಲೇ ಚಿವುಟಿ ಹಾಕುವ ಬಹಳಷ್ಟು ಮಂದಿ ಇತಿಹಾಸದಲ್ಲಿ ಅಪಾರ. ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಅಂದಿನ ದಿನಗಳಲ್ಲಿ , ಈಗಿನ ಹಾಗೆ ಬೆಳಗಾಗುವಷ್ಟರಲ್ಲಿ ಎಲ್ಲರನ್ನೂ ತಲುಪುವುದಕ್ಕಾಗಲಿ ಪ್ತತಿಕ್ರಿಯೆ ನೀಡುವುದಕ್ಕಾಗಲಿ ಸಾಧ್ಯ ಇಲ್ಲವೇ ಇರಲಿಲ್ಲ. ತಮ್ಮ ಕಾರ್ಯಸಾಧನೆಯಿಂದ ಮಾತ್ರ ಸಾಧ್ಯವಾಗುವುದಿತ್ತು. ಅಂತಹಾ ದಿನಮಾನಗಳಲ್ಲಿ ಅದೆಂತಹಾ ಶಕ್ತಿ ಇರಬೇಕು ಆ ಕ್ರಾಂತಿಕಾರಿಗೆ?

ಚಿಕ್ಕದರಿಂದಲೇ ಸೌಮ್ಯವಾಗಿ ಪ್ರಶ್ನಿಸುವ ಗುಣವುಳ್ಳವರಾಗಿ, ಮೇಲು ಕೀಳುಗಳಿಲ್ಲ ಎಲ್ಲವೂ ಮೇಲೇ, ಜಾತಿ ಜಂಜಡಗಳಿಲ್ಲ ಎಲ್ಲವೂ ಒಂದೇ, ಪುರುಷ ಸ್ತ್ರೀ ಗೆ ಬೇಧವಿಲ್ಲ ಇಬ್ಬರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು ಕಟ್ಟುಪಾಡುಗಳನ್ನು ದಿಕ್ಕರಿಸಿದ , ಸಮಾಜಕ್ಕೆ ವಕ್ಕರಿಸಿದ ಅನಿಷ್ಟ ಪದ್ದತಿಗಳ ವಿರುದ್ದ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿದ್ದ ಬಾಲಕನೊಬ್ಬ ಮುಂದೆ ಇಡೀ ವಿಶ್ವವೇ ಅನುಸರಿಸಬಹುದಾದ ದಾರಿಯೊಂದನ್ನು ಸೃಷ್ಟಿಸುವ ಲಕ್ಷಣ ಹೊಂದಿದ್ದುದು ಅವರಲ್ಲಿ ಕಾಣಸಿಗುತ್ತಿತ್ತು. ಬೆಳೆಬೆಳೆಯುತ್ತಾ ಸಮಾಜಕ್ಕಾಗಿ ತನ್ನೆಲ್ಲಾ ಅರಿವನ್ನೇ ಗುರುವಾಗಿಸಿಕೊಂಡ ಮಹಾನುಭಾವಿ ಬಸವಣ್ಣನವರು. ತಾವು ನಡೆದದ್ದೆಲ್ಲಾ ವಿಶ್ವಕೋಶದ ಪದಗಳಾದವು, ಅವರನ್ನನುಸರಿಸಿ ದೇಶದ ತುಂಬಾ ಅನುಯಾಯಿಗಳು ಹರಸಿ ಕಲ್ಯಾಣಕ್ಕೆ ಆಗಮಿಸಿ ಗುರುವಾಗಿ ಗೌರವದ ಸಮಾಗಮವೊಂದಿ ಅನುಭವಗಳನ್ನು ಅನುಭವ ಮಂಟಪದಲ್ಲಿ ಹಂಚಿಕೊಂಡಿದ್ದು ವಿಶ್ವದ ಯಾವುದೇ ಗುರು ಸಂಪ್ರದಾಯದದಲ್ಕಿ ಕಾಣ ಸಿಗುವುದಿಲ್ಲ. ವಿಶ್ವದ ಆರ್ಥಿಕತೆಗೆ ಕಾಯಕವೆಂಬ ಸೂತ್ರವನಿತ್ತ ಅರ್ಥಶಾಸ್ತ್ರಜ್ಞರು ಬಸವಣ್ಣ. ಕಲ್ಯಾಣ ಚಾಳುಕ್ಯರ ಕಳಚುರಿ ಸಾಮ್ರಾಜ್ಯದ ಪ್ರಧಾನ ಆರ್ಥಮಂತ್ರಿಯಾಗಿ ಅವರು ನಿಭಾಯಿಸಿದ ರೀತಿ ಅತ್ಯದ್ಭುತ. ಅಷ್ಟಿದ್ದರೂ ಸಮಾಜದ ಕಟ್ಟಕಡೆಯ ಪ್ರತೀ ಪ್ರಜೆಗೂ ಅವರು ನೀಡುತ್ತಿದ್ದ ಗೌರವ, ಅವರನ್ನು ಪೂಜನೀಯವಾಗಿಸಿದ್ದು ನಿಜ. ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎಂದೆನುವ ಮೂಲಕ ತನ್ನ ಕೂಡಲ ಸಂಗನ ಕಾಣುವ ಗುಣ ಅವರದು. ಜಗತ್ತಿನಲ್ಲಿ ಬದಲಾವಣೆ ಬಯಸುವುದಾದರೆ ತನ್ನಿಂದಲೇ ಮೊದಲು ಬದಲಾಗಬೇಕು ಎಂಬುದು ಒಂದು ಸೂತ್ರ. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದಡೆ ನಿಲಲುಬಾರದು.

ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,

ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ,

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ಎನ್ನುವ ಮೂಲಕ ಅವರವರ ಜವಾಬ್ದಾರಿ ಬಹಳ ಮುಖ್ಯವಾದದ್ದು ಎನ್ನುವ ಮೂಲಕ ನಾನು ಮೊದಲು ಬದಲಾದರೆ ನಾನಿರುವ ಲೋಕ ಬದಲಾಗುತ್ತದೆ ಎಂಬ ಸಂದೇಶವನಿತ್ತ ಮಹನೀಯ ಬಸವಣ್ಣನವರು. ಹೀಗೆ ಜಗದ್ಗುರುವಾದರು ಬಸವಣ್ಣನವರು. ಸಮಕಾಲೀನ ವಚನಕಾರ ಪ್ರಕಾರ ಬಸವಣ್ಣನವರು ನಿಜಗುರುಗಳು. ಬಸವಣ್ಣನವರು ಹಲವು ವಚನಕಾರರ ದೃಷ್ಟಿಯಿಂದ ಹೀಗೆ ಕಾಣುತ್ತಾರೆ.


ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು. ಬೇರೆ ಎಲ್ಲಾ ಶರಣರು ಇದ್ದರೂ ಸಹ ಬಸವಣ್ಣ ಮಾಡಲಿಕ್ಕೆ ಗುರು, ಲಿಂಗ, ಜಂಗಮ, ಪ್ರಸಾದ ಆಯಿತ್ತು ಅಂತ ಹೇಳಿ ಬೇರೆ ಯಾರಿಂದಲೋ ಲಿಂಗ ಅಯಿತ್ತು ಅನ್ನುವದನ್ನು ಅಲ್ಲಗಳೆದಂತಾಯಿತು. ಅನುಭವವಾದರೂ ಬಸವಣ್ಣನವರಿಲ್ಲದೇ ಅದು ನುಡಿಯಾಗುತ್ತಿರಲಿಲ್ಲ ಎಂಬ ಹೇಳಿಕೆಯಂತು ಗುರುವಿನ ಮಹತ್ವ ತಿಳಿಸುತ್ತದೆ. ಜಂಗಮದ ಪರಿಕಲ್ಪನೆ ಬೃಹತ್ ಬ್ರಹ್ಮಾಂಡದ ಪರಿಕಲ್ಪನೆ ಎಂಬದು ಸೋಜಿಗವೆನಿಸಿದರು ಪ್ರಪಂಚ ಸದಾ ಚಲನೆಯಲ್ಲಿರುವಂತದ್ದು ಎಂಬುದು ಶರಣ ಪರಂಪರೆಯ ಕೊಡುಗೆ ಎಂದರೆ ತಪ್ಪಾಗಲಿಕ್ಕಿಲ್ಲ ಅದರ ಮುನ್ನುಡಿ ಮತ್ತು ಈ ರೀತಿಯ ಪದಬಳಕೆ ಬಸವಣ್ಣನವರಂತಹಾ ಮಹಾ ದಾರ್ಶನಿಕರಿಂದ ಬರಲಿಕ್ಕೆ ಮಾತ್ರ ಸಾಧ್ಯ. 


ಬಸವಣ್ಣ ಮಾಡಲಿಕ್ಕೆ ಗುರು-ಲಿಂಗ-ಜಂಗಮ-ಪ್ರಸಾದ ವಾಯಿತ್ತು

ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು

ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು

ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು

ಇರೇಳು ಲೋಕವಾಯಿತ್ತು ಬಸವಣ್ಣನಿಂದ ಕಲಿದೇವಯ್ಯಾ. 


ಬಸವಣ್ಣನಿಲ್ಲದೇ ಗುರು-ಲಿಂಗ-ಜಂಗಮ-ಪ್ರಸಾದವಿಲ್ಲ

ಗುರುವಾದಡೂ ಬಸವಣ್ಣನಿಲ್ಲದೇ ಗುರುವಿಲ್ಲ

ಲಿಂಗವಾದಡೂ ಬಸವಣ್ಣನಿಲ್ಲದೇ ಲಿಂಗವಿಲ್ಲ

ಜಂಗಮವಾದಡೂ ಬಸವಣ್ಣನಿಲ್ಲದೇ ಜಂಗಮವಿಲ್ಲ

ಪ್ರಸಾದವಾದಡೂ ಬಸವಣ್ಣನಿಲ್ಲದೇ ಪ್ರಸಾದವಿಲ್ಲ

ಅನುಭವವಾದಡೂ ಬಸವಣ್ಣನಿಲ್ಲದೇ ನುಡಿಯಲಾಗದು

ಇಂತು ಸಂಗಿಸುವಲ್ಲಿ, ನಿಜ ಸಂಗಿಸುವಲ್ಲಿ

ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ

ಪ್ರಸಾದ ಸಂಗಿಸುವಲ್ಲಿ ಕಲಿದೇವಾ

ನಿಮ್ಮ ಶರಣ ಬಸವಣ್ಣನ ನಿಲುವು. 


ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,

ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,

ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,

ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,

ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,

ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ

ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,

ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ. 


ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,

ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,

ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ. 


.ಬಸಮನಾಮವೆ ಮಂತ್ರ ಎಂದು ಹೇಳುವ ಮೂಲಕ ಶೂನ್ಯ ಸಿಂಹಾಸನಾಧೀಶರಾದ ಅಲ್ಲಮರು ಗುರು ಬಸವರು ಪ್ರಥಮ ಗುರು ಎಂದು ಸಂಭೋದಿಸುತ್ತಾರೆ. ಜಗಕ್ಕೆಲ್ಲಾ ನೀವೇ ಗುರು ಎಂದು ಬಸವಣ್ಣನವರನ್ನು ಜಗದ್ಗುರುಗಳಾಗಿ ಕಾಣುವ ಅಲ್ಲಮರ ದೃಷ್ಟಿಯಲ್ಲಿ ಸರ್ವಶ್ರೇಷ್ಠ ಮಹಾಗುರು ಬಸವಣ್ಣನವರು. ಬಸವಣ್ಣನವರಂತಹಾ ಸದ್ಗುರುಗಳ ಶಿಷ್ಯರಿಗೆ ಅಸಾಧ್ಯವಾದ ಯಾವೊಂದು ವಿಷಯವಿರುವುದಿಲ್ಲ, ಅಭೇದ್ಯವೆಂಬದಿಲ್ಲ ಎಂಬುದು ಅಲ್ಲಮರ ನಿಲುವಾಗಿರುತ್ತದೆ.ಗುರು , ಲಿಂಗ , ಜಂಗಮ, ಪ್ರಸಾದ, ಆಚಾರ ಬಲ್ಲಾತನೇ ಗುರು ಅದು ಬಸವಣ್ಣನಲ್ಲಿ ಕಾಣಲು ಸಾದ್ಯ ಎಂದು ಉಲ್ಲೇಖಿಸುತ್ತಾರೆ ಪ್ರಭುಗಳು. ಈ ಪಂಚವಿಧಗಳೇ ಪಂಚಬ್ರಹ್ಮವೆಂದರಿತ ಬಸವಣ್ಣನವರೇ ಜಗಕೆ ಗುರುಗಳು ಎಂದಾಡುತ್ತಾರೆ ಶೂನ್ಯ ಪೀಠಾಧೀಶ. ಗುರುವಿನ ಗುರು ಮಹಾಗುರು ಬಸವಣ್ಣ ಎಂಬ ಪ್ರಭಗಳ ಇಂಗಿತ ಬಸವಣ್ಣನವರಿಗೆ ಅನ್ವರ್ಥವಾಗಿದೆ.


'ಬಸವ' ನಾಮ ಮಂತ್ರವಾಯಿತು

'ಬ' ಎಂಬಲ್ಲಿ ಎನ್ನ ಭವವು ಹರಿಯತ್ತು

'ಸ' ಎಂಬಲ್ಲಿ ಸರ್ವಜ್ಞಾನಿಯಾದೆನು

'ವ' ಎಂದು ವಚಿಸುವರೆ ವಸ್ತು ಚೈತನ್ಯಾತ್ಮಕನಾದೆನು

ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ

ತೊಳಗಿ ಬೆಳುಗುವುದ ಕಂಡು

ಆನು ನೀನು ಬಸವಾ ಬಸವಾ ಬಸವಾ

ಎನುತಿರ್ದೆವಯ್ಯಾ ಗುಹೇಶ್ವರ.

ಜಗವೆಲ್ಲಕ್ಕೆಯೂ ಬಸವಣ್ಣನೇ ಗುರು

ಶಿವ ಗುರುವೆಂದು ಬಲ್ಲಾತನೆ ಗುರು.

ಶಿವ ಲಿಂಗವೆಂದು ಬಲ್ಲಾತನೆ ಗುರು.

ಶಿವ ಜಂಗಮವೆಂದು ಬಲ್ಲಾತನೆ ಗುರು.

ಶಿವ ಪ್ರಸಾದವೆಂದು ಬಲ್ಲಾತನೆ ಗುರು.

ಶಿವ ಆಚಾರವೆಂದು ಬಲ್ಲಾತನೆ ಗುರು.

ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾಮಹಿಮ ಸಂಗನ ಬಸವಣ್ಣನು,

ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರ


ಗುರು ಬಸವಣ್ಣನೇ ಪ್ರಥಮಗುರು (ಪ್ರಥಮಾಚಾರ್ಯ)

ಆಯತದಲ್ಲಿ ಪೂರ್ವಾಚಾರಿಯ ಕಂಡೆ.

ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.

ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.

ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,

ಶ್ರೀಪಾದಕ್ಕೆ ನಮೋ ನಮೋ ಎಂಬೆನು. 


ಗುರುವಿನ ಗುರು ಪರಮಗುರು ಬಸವಣ್ಣ

ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ

ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.

ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.

ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.

ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ !

ಗುಹೇಶ್ವರ ಸಾಕ್ಷಿಯಾಗಿ,


ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ.

ಬಸವಣ್ಣನೆ ಗುರುವೆಂದು ಅನುಮಿಷನರಿದ.

ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ.

ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು.

ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು.

ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ,

ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ

ಅನಾಚಾರಿಗಳ ಎನಗೆ ತೋರದಿರಯ್ಯ,

ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ

ಬಸವಪ್ರಿಯ ಕೂಡಲಸಂಗಮದೇವಾ. - ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ



ಶಿವಯೋಗಿ ಸಿದ್ದರಾಮೇಶ್ವರರು ವಿಶ್ವಗುರು ಪದಪ್ರಯೋಗ ಮಾಡಿದ್ದಾರೆ, ತನಗೆ ಮಾತ್ರ ಗುರುವಲ್ಲದೆ ಜಗಕೆ ಗುರುನೀವು ಎಂದೆನುವ ಸಿದ್ದರಾಮರು ಬಸವಣ್ಣನವರ ಕುರಿತು ನಿಮ್ಮ ಭಕ್ತಿಯ ಪಥವೇ ಒಂದು ಧರ್ಮ ಎಂಬ ಮಹತ್ತರವಾದ ಅಂಶವನ್ನು ತಮ್ಮ ವಚನದ ಮೂಲಕ ವ್ಯಕ್ತಪಡಿಸುತ್ತಾರೆ. ಆ ಧರ್ಮವು ಪ್ರಪಂಚದ ಎಲ್ಲರ ಧರ್ಮವಾಗಬೇಕು ಎಂಭ ಆಶಯ ಶಿವಶರಣರದ್ದಾಗಿದ್ದರೆ ಅದು ನಿಜಕಗಕೂ ಅನುಕರಣೀಯ.

ವಿಶ್ವಗುರು ಬಸವಣ್ಣನೇ ನನ್ನ ತಾಯಿ, ತಂದೆ ಪರಮ ಬಂಧುವು

ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ,

ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,

ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.

ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ

ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ

ಇನ್ನೆನಗತಿಶಯವೇನೂ ಇಲ್ಲ.


ಎಲ್ಲರಿಗೂ ಬಸವಣ್ಣನ ಧರ್ಮ

ಕರುಣಿಸು ಬಸವಾ ಕಾಲಹರ ಬಸವಾ ಕರ್ಮಹರ ಬಸವಾ

ನಿರ್ಮಳ ಬಸವಾ, ಶಿವಜ಼ಾನಿ ಬಸವಾ

ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು

ಕರುಣಿಸಿ ಕಪಿಲಸಿದ್ದಮಲ್ಲಿನಥಯ್ಯಾ

ನಿಮಗು ಎನಗು ಬಸವಣ್ಣನ ಧರ್ಮವಯ್ಯಾ.


ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ

ಬಸವಣ್ಣನೇ ಪರಮ ಬಂಧುವೆನಗೆ

ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ

ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ. 


ಇನ್ನು ಚೆನ್ನಬಸವಣ್ಣನವರಿಗಂತೂ ಬಸವಣ್ಣನವರು ಓಂಕಾರದಿಂದತ್ತತ್ತ, ಆಚಾರ್ಯರೇ ಬಸವಣ್ಣನವರು. ಆದಿ ಬಸವ, ಅನಾದಿ ಲಿಂಗವೆಂಬುದು ಸುಳ್ಳು , ಅನಾದಿಯೇ ಬಸವ, ಆದಿ ಲಿಂಗ ಎನ್ನುವ ಚೆನ್ನಬಸವಣ್ಣನವರಿಗೆ ಗುರು ಲಿಂಗ ಜಂಗಮ ಎಲ್ಲವೂ ಬಸವಣ್ಣನವರೇ.


ಬಸವಣ್ಣಾ ಓಂಕಾರದಿಂದತ್ತತ್ತ ನೀನೆ;

ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,

ಬಸವಣ್ಣಾ ಪ್ರಥಮಾಚಾರ್ಯ ನೀನೆ,

ಬಸವಣ್ಣಾ ಲಿಂಗಾಚಾರ್ಯ ನೀನೆ,

ಬಸವಣ್ಣಾ ಜಂಗಮಾಚಾರ್ಯ ನೀನೆ,

ಬಸವಣ್ಣಾ ಪ್ರಸಾದಾಚಾರ್ಯ ನೀನೆ,

ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ,

ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ

ಕೂಡಲಚೆನ್ನಸಂಗಮದೇವಾ

ಆವ ವರ್ಣವಿಲ್ಲದಂದು 'ಓಂ ನಮಃ ಶಿವಾಯ' ಎನುತಿರ್ದೆನು. 


ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,

ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,

ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ. 


 




ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು.

ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ.

ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು.

ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ.

ಎನ್ನ ಕಂಗಳೊಳಗಿಂಬಾದ ಬಸವ,

ಎನ್ನ ಮನ ಭಾವಂಗಳೊಳಗಾದ ಬಸವ,

ಎನ್ನಂತರಂಗ ತುಂಬಿ ನಿಂದಾತ ಬಸವ.

ಹೊರಗೆ ಗುರುಬಸವನ ಕೀರುತಿ.

ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ.

ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ

ಬಸವಾ ಬಸವಾ ಜಯತು

ಗುರು ಸಂಗನಬಸವಾ ಜಯತು.




ಗುರುವಿನ ಗುರು ಪರಮಗುರು ಬಸವಣ್ಣ

ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ

ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.

ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.

ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.

ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ !

ಗುಹೇಶ್ವರ ಸಾಕ್ಷಿಯಾಗಿ,

ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !


ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ

ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ.

ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.

ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು

ಚೆನ್ನಬಸವಣ್ಣನೊಬ್ಬನೆ ಪ್ರಸಾದಿ ಮತ್ತಾರನು ಕಾಣೆನಯ್ಯಾ.

ವಿಶ್ವೆ : ಕುಮಾರ್ ಬಿ ಬಾಗೀವಾಳ್.

Comments

  1. ಉತ್ತಮ ಲೇಖನ .... ಸಮಯೋಚಿತ ವಚನಗಳ ಆಯ್ಕೆ

    ReplyDelete

Post a Comment

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES