Poem: Yugada aadi , By : Kumar B Bagival ,
ಯುಗದ ಆದಿ...
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಜಗ ಜಗಕೆಲ್ಲ ಹಸಿರು
ಹಸಿರ ಚಿಗುರ ಹಾದಿ.
ಬೇವಿಗೂ,ಬೆಲ್ಲಕೂ ಸರಿ
ಸರಿದೂಗಿಸೋ ಯಾದಿ
ಯುಗಾದಿ ಇದು ಯುಗಾದಿ.
ತೊಟ್ಟು ಕಳಚುವ ಮುನ್ನ
ಉದುರುವೆಲೆ ಜೀವವನಲ್ಲೇ ಬಿಟ್ಟು
ಚಿಗುರೆಲೆಗೆ ತುಂಬೋ ಇಂಬಿದು
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಮಾವಿನ ಚಿಗುರ ಹೊಗರ
ತಿಂದರೂ ಸವಿನುಲಿವ,
ನಲಿವನೊತ್ತು ಧರೆಗೆ ತರುವ
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಹಳೆದಾದ ನೆಲದ ಮನದಲೊಂದಿನಿತು
ಹೊಸ ಬೆಳೆ ಬೆಳೆವ ನಿಲುವುಗಳನು ಬಿತ್ತಿ
ಹೊತ್ತಿ ಉರಿಯುವ ಬೆಳಕು
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಭಾವ ಬಾನಲಿ ಮಿನುಗೋ
ಚುಕ್ಕಿ ಚಂದ್ರಮರ ಮುಂದಾಳುತನ
ಮಿಕ್ಕಿದಷ್ಟು ಎಕ್ಕಿ ತೆಗೆದ ಸಂತಸ
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಕಳೆದಿದ್ದೆಷ್ಟೋ ಕಳಂಕಗಳ ಕೊಳವೇ
ಭಾಗ್ಯೋದಯ ಇಲ್ಲಿ ಕೊಳಗದಷ್ಟು.
ವೃತ್ತವಿದು ಆವೃತ್ತಿಯು, ಬಿತ್ತಿದ್ದು ಬೆಳೆದು
ಬೀಜವೊಡೆದು ಮತ್ತೆ ಸಿಧ್ಧ ಮೊಳೆಕೆಗೆ.
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ನೆಲಕುರುಳಿದ ಮಳೆಯುದುರ
ಆವಿ ತೆರನೆ ಮೆರೆದು ಮೇಲೇರಿ
ತಂಪಿನಿತು ಸುರಿದ ತೆರದೀ
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ಯುಗ ಜಗಕೂ ತಿಳಿಯ
ಕೆಳಗಿಳಿದ ತಿರುಗೋ ಚಕ್ರವೊಂದು
ಮೇಲೆ ಬರುವ ಸೂಚಿ ಕಾಲವಿದು
ಪಕ್ವವಿದೆ ಮುನ್ನಡೆಗೆ ಮುನ್ನುಡಿ.
ಯುಗಾದಿ ಇದು ಯುಗಾದಿ
ಇದು ಜಗದ ಯುಗದ ಆದಿ.
ರಚನೆ: ಕುಮಾರ್. ಬಿ. ಬಾಗೀವಾಳ್
Comments
Post a Comment