ಆಸೆ - ಅವಕಾಶ Aase--avakaasha poem by KumarB Bagival
ಆಸೆ - ಅವಕಾಶ
ನೀ ನಡೆವ ದಾರಿಯುದ್ದಕೂ ನೆರಳಾಗುವಾಸೆ
ಸುಡುವ ಮೈ ತಣಿಸುವ ಕೊಂಚ ಅವಕಾಶ ನನಗೆ
ನಾಳೆಗಳ ನಾವೆಗೆ ನಾನೇ ನಾವಿಕನಾಗುವಾಸೆ
ಬಿರುಗಾಳಿಗೆ ಹೊಯ್ದಾಡಿದರೂ ಹಿಡಿದು ನಿಲ್ಲುವ ಅವಕಾಶ ನನಗೆ.
ಶೃಂಗಾರ ಮಾಡಿರುವ ನಿನ್ನ ಕಣ್ಣಿನ ರೆಪ್ಪೆಯಾಗುವಾಸೆ
ದಾರಿ ದೂಳೊಕ್ಕದಂತೆ ತಡೆದು ಸೊಂಪಾಗಿಡುವವಕಾಶ ನನಗೆ
ಕರಣಗಳ ಮೇಲ್ಮೆರೆವ ಕಿವಿಯೋಲೆಯಾಗುವಾಸೆ
ಕರಣಕ್ಕಡಚ್ಚಿಕ್ಕುವ ಕರ್ಕಶವ ತಡೆದು ಇಂಪಾಗಿಸುವವಕಾಶ ನನಗೆ.
ಬೆರಳ್ತುದಿಗೊಂದಂದದ ಉಂಗುರವಾಗುವಾಸೆ
ಬೆರಳಿಡಿದು ನಡೆಸಿ ದಿಶೆಯಾಗುವ ಅವಕಾಶ ನನಗೆ.
ಕೊರಳೊಳಗೆ ಮೆರೆವ ಸರವಾಗುವಾಸೆ,
ಬರಿಯಕೊರಳಿಗೆ ಚಲುವ ಕೊಡುವ ಅವಕಾಶ ನನಗೆ.
ಜೇನ್ಗೆನ್ನೆಯ ಮೇಲೆ ಬಳಿವ ಅರಿಶಿನವಾಗುವಾಸೆ
ಹದ ಮುದದ ಕೆನ್ನೆಯ ಕೋಮಲವಾಗುವವಕಾಶ ನನಗೆ.
ನೆತ್ತಿಯಲಾಡುವ ಮಲ್ಲೆಯ ಹೂಮಾಲೆಯಾಗುವಾಸೆ
ಮಧುರ ಸಿಹಿಯ ಸಹಿಯಾಗುವವಕಾಶ ನನಗೆ.
ಬರಿಗಾಲ ಪಾದದಂಚಿನ ರಂಗಾಗುವಾಸೆ
ಸುರಿದು ದಾರಿಯುದ್ದಕೂ ಪಾದವನೆ ಕಾಪಾಡುವವಕಾಶ ನನಗೆ
ಪಯಣದುದ್ದಕೂ ಪ್ರಣಯದಲಿ ಜೊತೆಯಾಗುವಾಸೆ
ಕಣಕಣಕೂ ಕೂಗಿ ನಾ ನಿನ್ನವನೆಂದು ಹೇಳುವವಕಾಶ ನನಗೆ.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment