Posts

Showing posts from December, 2020

ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. Get lost I Want to welcome new days.... poem by KUMAR B BAGIVAL

Image
  ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. ಬರಿದೇ ಸಂಖ್ಯೆಯ ನೆಪವಾಗಿ ಬಂದೆ ನೀ ಸರಿಯುವ ಕಾಲ ಬಂದಾಯಿತು ಸರಿ ನೀ ನವ ನಾಳೆಗಳ ಸ್ವಾಗತಿಸುವೆವು ನಾವು ಮರೆತು ವರುಷದುದ್ದಕೂ ಆದ ನೋವು. ದೂಷಿಸಲೂ ಆಗುತಿಲ್ಲ ನಿನ್ನ ನಾವು ಎಲ್ಲೋ ದೂರದಲ್ಲಿದ್ದವರ ಒಗ್ಗೂಡಿಸಿದೆ ಮೆರೆದು ಓಡಾಡಿದವರ ಬಗ್ಗು ಬಡಿದೆ ಸಮಯವೇ ಇಲ್ಲವೆಂದವರಿಗೆ ಸಮಯವ ನೀಡಿದೆ. ಊರ ಮರೆತು ಹೋದವರಿಗೆ ತನ್ನೂರನ್ನೆ ವರವಾಗಿಸಿದೆ ಯಾರೂ ಯಾವುದೂ ನಿನ್ನದಲ್ಲ ನೀ ಒಂಟಿ ಎಂದು ಸಾರಿದೆ ಜೀವನಕ್ಕಿಂತ ಜೀವ ಮುಖ್ಯವೆಂದರುಹಿ ಹೇಳಿದೆ ಆದರೂ ಆರಕ್ಕೇರದ ಮೂರಕ್ಕಿಳಿಯದ ಬದುಕ ನೀಡಿದೆ ಮರೆಯದೇ ನೀ ಕಲಿಸಿದ ಪಾಠವ ಹೆಜ್ಜೆ ಇಡುವೆವು ಹೊಸತೊಂದು ವರುಷಕೆ ಹರುಷದಲಿ ಶುಭವನರಸುವೆವು ನಿನ್ನೊಂದಿಗಾದ ತಪ್ಪುಗಳ ತಿದ್ದಿ ಸರಿಪಡಿಸಿ ನಡೆಯುವೆವು ಉದಯವಾಗಿಸಿ ಹೊಸ ಹೊಂಗಿರಣಗಳ gಬೆಳಕ ಹರಿಸುವವು ಹೊಸ ವರ್ಷದ ಶುಭಾಶಯಗಳೊಂದಿಗೆ   ಅನಕುಮಾರ್, ನಿಗಮಾಂತ್ ಬಾಗೀವಾಳ್, ರುದ್ವೇದ ಬಾಗೀವಾಳ್   ರಚನೆ : ಕುಮಾರ್ ಬಿ ಬಾಗೀವಾಳ್.

ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ..Can I identify my footprints? poem by Kumar B Bagival

Image
  ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ... ಹೆಜ್ಜೆಗುರುತುಗಳು ಕಾಣದಾಗಿವೆ ಬಂದ ದಾರಿಯುದ್ದಕೂ ಅಷ್ಟು ದೂರ ಪಯಣಿಸಿದೆನಾ ಅಥವಾ  ಪಯಣದ ದಾರಿಯನ್ನೇ ಮರೆತೆನಾ. ಅಥವಾ ಯಾರಾದರೂ ….? ಇಲ್ಲ ನನ್ನ ಹೆಜ್ಜೆಯನ್ನೇ ಮರೆವಷ್ಟು ಬೆಳೆದುಬಿಟ್ಟನಾ?    ಹುಟ್ಟಿದಾಗ ಅಮ್ಮನ ಆಲಿಂಗನ ತೊಡೆಯನೇರಿದೆ ಹುಟ್ಟಿದೊಂದಷ್ಟು ದಿನ ಅಮ್ಮನೆಜ್ಜೆ ಗುರುತುಗಳೇ ನನ್ನವು ಹೆಜ್ಜೆ ಬರುವರೆಗೂ ಮೂಡಿಸಲಾಗಲಿಲ್ಲ  ಸಾಯುವಾಗಲೂ ಯಾರೋ ನಾಲ್ಕು ಜನರ  ಹೆಜ್ಜೆ ಗುರುತುಗಳೇ ನನ್ನವಾಗವುವು ಅಲ್ಲೂ ನನ್ನವೇನಿಲ್ಲ       ಈ ನಡುವಿನವಷ್ಟೇ ನನ್ನವು ಅವೂ ಕೆಲವು ಅಸ್ಪಷ್ಟ ಸ್ಪಷ್ಟವಾಗಿ ಇಟ್ಟ ಹೆಜ್ಜೆಗಳೂ ಮಾಸಿ ಹೋದಂತಿವೆ ಅವಿದ್ದರೆ ಬೆರಳೆಣಿಕೆಯಷ್ಟು ಮಾತ್ರ  ಅವುಗಳೂ ಬೇರೆಯವರ ಹಿಂಬಾಲಿಸಿ ಅವರದೇ ಗುರುತಂತಿವೆ.  ಸ್ವಂತಿಕೆಯೇ ಇಲ್ಲದ ಮೇಲೆ ಗುರುತಿಸುವುದಾದರೂ ಹೇಗೆ ನಾನವನ? ಹೋ ,  ತಡಿ ತುಡಿತವೇ ಹೃದ್ಬಡಿತ ನಿಲ್ಲುವುದರೊಳಗಾಗಿ ಅಡಿಯನಿಡು ನನ್ನದೇ ಮನ ಗುರುತಿಸುವ ಹಾಗೆ  ಲೋಕ ಗುರುತಿಸುವ ಮುನ್ನ ನನ್ನ ನಾ ಗುರುತಿಸ ಬೇಕಿದೆ ಹೆಜ್ಜೆಗೆ ಗೆಜ್ಜೆ ಕಟ್ಟುವೆ ಎಚ್ಚರದಿ ನಡೆಯಲೆಂದು  ಮರೆತರೂ ಮೊರೆತು ಹೇಳಲಿ ಅದು ನನ್ನ ಇರುವಿಕೆಯನು. ರಚನೆ ,: ಕುಮಾರ್ ಬಿ ಬಾಗೀವಾಳ್

ದುಡಿಯುವ ಕೈ ನೀ ಮಡಿಯದಿರು. A poem on farrmer... By Kumar.B.Bagival

Image
  ದುಡಿಯುವ ಕೈ ನೀ ಮಡಿಯದಿರು. ದುಡಿಯುವ ಕೈ ನೀ ಮಡಿಯದಿರು ಸುಡುವ ಕಷ್ಟಗಳೆಷ್ಟೇ ಬರಲಿ ಮಾಡುವ ಕಾಯಕದೊಳಿಷ್ಟವು ಇರಲಿ ಚಿನ್ನಕು ಮಿಗಿಲು ಅನ್ನವನು   ಈ ಜಗಕೆ ನೀನೆ  ಇತ್ತವನು. ಮಸುಕಲಿ ಎದ್ದು,ಹೊಲದಲಿ ಸದ್ದು ಮಾಡುತಲಿರುವ ನಿನ್ನನು ನೋಡಿ ನಾಚುತ ತಾ ನೇಸರ ಮೂಡಿ ತಾ ಕೆನ್ನೆಯ ಕೆಂಪನೆ ಮಾಡಿದನು. ಸುಡು ಬಿಸಿಲಿಗು ಜಗ್ಗದ ನಿನ್ನನು ಮೆಚ್ಚುವ ಗಡಿಯ ಕಾಯ್ವ ಯೋಧನು. ಮಳೆಗೆ ಕೊಡೆ ಹಿಡಿಯದ,ಚಳಿಗೂ ಚಳಿಯಿಡಿಸುವ ಧೃತಿಗೆಡದ ಮೈ ಅದು ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು ತಾ ಸೋತರೂ ಜಗವ ಗೆಲಿಸುವ ತ್ಯಾಗವು ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು? ಬೆಳೆವುದು ನೂರಾದರೆ ಪಡೆವುದು ಚೂರು ಕೊಳಗಕೂ ಮೀರಿದ ಆಸೆಯಾದರೂ ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು ಬೆನ್ನೆಲುಬು ನೀನಾದರು ಜಗಕೆ ಜಗವೇ ನಿಂತಿದೆ ನಿನ್ನಯ ಬೆನ್ನಿಗೆ. ಉರುಳಿಗೆ ಕೊರಳನೊಡ್ಡದಿರು ಬೆರಳು ಮಾಡದ ಹಾಗೆ ನಿನ್ನೆಡೆಗೆ. ವಿರಮಿಸದಿರು ಬದುಕ  ಮಾಡು  ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ. ರಚನೆ: ಕುಮಾರ್. ಬಿ.ಬಾಗೀವಾಳ್.

ರಾಷ್ಟ್ರೀಯ ಗಣಿತ ದಿನ

  ರಾಷ್ಟ್ರೀಯ ಗಣಿತ ದಿನ ಡಿ ಸೆಂಬರ್22, 1887,  ಭಾರತದ ಮಟ್ಟಿಗೆ ಅವಿಸ್ಮರಣೀಯ ದಿನ‌ ಅಂದು ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನ. ರಾಮಾನುಜನ್ ಅವರು ಹುಟ್ಟಿದ  125 ನೇ ಜನ್ಮದಿನದ ನೆನಪಿಗಾಗಿ ಡಿಸೆಂಬರ್ 22,ನ್ನು ರಾಷ್ಟ್ರೀಯ ಗಣಿತ ದಿನವೆಂದು 2012 ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಘೋಷಿಸಿದರು. ಮತ್ತು ಅದೇ ವರ್ಷ 2012 ನ್ನು ರಾಷ್ಟ್ರೀಯ ಗಣಿತ ವರ್ಷ ಎಂದು ಘೋಷಿಸಿದರು. ಅದೇ ವರ್ಷ ರಾಮಾನುಜನ್ ಅವರ ನೆನಪಿಗೆ ಅಂಚೆ ಚೀಟಿಯನ್ನೂ ಹೊರತರಲಾಯಿತು. ಅಂತೆಯೇ  2017ರಲ್ಲಿ ಆಂದ್ರಪ್ರದೇಶದ, ಚಿತ್ತೂರು ಜಿಲ್ಲೆಯ ಕುಪ್ಪಂ ನಲ್ಲಿ ರಾಮಾನುಜನ್ ಗಣಿತ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ನಭೋ ವಿಸ್ಮಯ… ಗುರು- ಶನಿಯರ ಸಂಯೋಗ

Image
         ನಭೋ ವಿಸ್ಮಯ… ಗುರು- ಶನಿಯರ ಸಂಯೋಗ ನಭೋ ವೈಚಿತ್ರ್ಯಗಳು ಅನೇಕ. ಅಷ್ಟಕ್ಕೂ ಅದು ಕುತೂಹಲದ ಕುಡಿಕೆ, ನಾವು ಚಿಕ್ಕವರಿದ್ದಾಗಿನ ಒಗಟಂತೆ ಅವ್ವನ ಸೀರೆ,ಅಪ್ಪನ ದುಡ್ಡು. ನೋಡಿದಷ್ಟೂ ನೋಡಿಸಿಕೊಳ್ಳುವ, ಕಣ್ಣಾಡಿಸಿದಷ್ಟೂ ಖುಷಿಕೊಡುವ ಮಾಯಾಲೋಕ.  ಮೇಲ್ನೋಟಕ್ಕೆ ಬರೀ ಕತ್ತಲೆಯ ಹಾಸಿನ ಮೇಲಿನ ಚಿತ್ತಾರದ ಚುಕ್ಕಿಗಳಂತೆ ಕಂಡರೂ…. ಹಾಗೇ…. ಕಣ್ತೆರೆದು ಶುಭ್ರಾಗಸಕ್ಕೆ ಎದೆಯೊಡ್ಡಿ ನೋಡುತ್ತಾ ಮಲಗಿದರೆ ಮೊಗೆದಷ್ಟೂ ಕುತೂಹಲ ತಣಿಸುವ ಅನೇಕ ಕಥಾಹಂದರವೇ ತೆರೆದುಕೊಳ್ಳುತ್ತದೆ. ಕಲ್ಪಿಸಿಕೊಂಡಷ್ಟೂ ಕಲ್ಪನಾ ಲಹರಿ ಬಿಚ್ಚಿಡುತ್ತದೆ. ನೋಡಬೇಕಷ್ಟೆ, ನೋಡುತ್ತಾ ಅನುಭವಿಸಬೇಕಷ್ಟೇ. ಟಅಂತಹಾ ಅನೇಕ ಅಧ್ಬುತಗಳಲ್ಲಿ ವಿಸ್ಮಯಗಳಲ್ಲಿ , ಖಗೋಳ ಘಟನೆಗಳಲ್ಲಿ ಒಂದು ಬಲಾಢ್ಯ ಅನಿಲ ಧೈತ್ಯಗ್ರಹಗಳಾದ ಗುರು,ಶನಿಗಳ ಸಂಗಮ. ನಭದಲ್ಲಿ ನಡೆವ ಪ್ರತೀ ವಿದ್ಯಮಾನಗಳೂ ಸೌರಮಂಡಲದ ಸದಸ್ಯರಾದ ನಮಗೂ ಸಂಬದಿಸಿದ್ದೇ ಆಗಿರುವುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಖಗೋಳ ವಿಜ್ಞಾನಿಗಳು ಹಾಗೂ ಅಘೋಷಿತ ವಿಜ್ಞಾನಿಗಳಾದ ಜ್ಯೋತಿಷಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಖಗೋಳ ವಿದ್ಯಮಾನಗಳಲ್ಲಿ ಒಂದಾದ ಗುರು,ಶನಿಯರ ಸಂಗಮ ನಾಳೆ ಅಂದರೆ 21/12/2020 ರ ಸಂಜೆಯ ವೇಳೆಗೆ ನೋಡಬಹುದಾಗಿದೆ. ಅವೆರಡರ ಕೋನೀಯ ಅಂತರ ಅತ್ಯಂತ ಕಡಿಮೆ ಅಂದರೆ 0.1ಡಿಗ್ರಿಗಳಷ್ಟಾಗಲಿದೆ ಅ ಅವೆರಡೂ ಅತ್ಯಂತ ಸಮೀಪದ ಸಂಗಮಕೊಳಪಡಲಿವೆ. ಬಹುತೇಕ ಇಷ್ಟೇ ಸಮೀಪದ ಸಂಗಮವನ್ನು ...

ಸಾಕಷ್ಟಿವೆ ಸಾಲುಗಳು...

  ಸಾಕಷ್ಟಿವೆ ಸಾಲುಗಳು... ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ ಎಲ್ಲವೂ ಪ್ರಶ್ನಾರ್ಥಕವಲ್ಲ, ಉತ್ತರದಾಯಿ ಆಶ್ಚರ್ಯಕರವಾದವೂ ಅಲ್ಲ,ಕೆಲವು ಸಾಲು ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ, ವೇಗ ಅತಿಯಾದಾಗ ಹಾಗಾಗ್ಗೆ ಅಲ್ಪವಿರಾಮ ಬದುಕು ರಸವತ್ತಾದಾಗ ತೋರಿಸಲು ಉಧ್ಧರಣ ಅಲ್ಲಲ್ಲಿ  ಅಡಗಿ ಕುಳಿತ ಒಳಾರ್ಥಕ ನುಡಿಗಳು ನಿನಗೆ ಸಮಾನವಂದೇಳಲು ಆವರಣವಲ್ಲಲ್ಲಿ ಅಸಾಧ್ಯವನು ಸಾಧ್ಯವಾಗಿಸಿದಾಗ ಆಶ್ಚರ್ಯ ಹೇಳಿದ್ದಾಯಿತು ಸಾಕೆನಿಸಿದಾಗ ಪೂರ್ಣವಿರಾಮ. ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ ಎಲ್ಲವೂ ಸಾಮಾನ್ಯವಲ್ಲ, ಸಂಯುಕ್ತವೂ ಸಂಯೋಜಿತವೂ ಅಲ್ಲ, ಕೆಲವು ಸಾಲು ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ ಸೊಗಸಿಗಲಂಕಾರ, ಪ್ರಾಸಗಳ ಸಾಲುಗಳು ಚೆಂದಕಾಗಿಯೇ ಛಂದಸ್ಸು ಹೆಚ್ಚಿಸವೆ ಮೆರಗನಲ್ಲಲ್ಲಿ ಸೊಗಡಿಗಾಗಿ ಸೊಗಸಾದ ಗ್ರಾಮ್ಯ ನುಡಿಗಳ ನುಡಿಮುತ್ತು ಬೆಡಗಾಗಿಸಿವೆ ಬೇರೆ ಭಾಷೆಯಿಂದೆರವಲು ಪಡೆದ ಅನ್ಯದೇಶಿಯ ಪದಪುಂಜವದು ನಮ್ಮದೇ ಸ್ವಂತವೆಂಬತೆ. ಕಥೆಯ ಬನಿಯನೆಚ್ಚಿಸಿವೆ… ಸದಾ ಸಾಂಗವಾಗಿವೆ. ರಚನೆ : ಕುಮಾರ್ ಬಿ ಬಾಗೀವಾಳ್