ಸಾಕಷ್ಟಿವೆ ಸಾಲುಗಳು...
ಸಾಕಷ್ಟಿವೆ ಸಾಲುಗಳು...
ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ
ಎಲ್ಲವೂ ಪ್ರಶ್ನಾರ್ಥಕವಲ್ಲ, ಉತ್ತರದಾಯಿ
ಆಶ್ಚರ್ಯಕರವಾದವೂ ಅಲ್ಲ,ಕೆಲವು ಸಾಲು
ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ,
ವೇಗ ಅತಿಯಾದಾಗ ಹಾಗಾಗ್ಗೆ ಅಲ್ಪವಿರಾಮ
ಬದುಕು ರಸವತ್ತಾದಾಗ ತೋರಿಸಲು ಉಧ್ಧರಣ
ಅಲ್ಲಲ್ಲಿ ಅಡಗಿ ಕುಳಿತ ಒಳಾರ್ಥಕ ನುಡಿಗಳು
ನಿನಗೆ ಸಮಾನವಂದೇಳಲು ಆವರಣವಲ್ಲಲ್ಲಿ
ಅಸಾಧ್ಯವನು ಸಾಧ್ಯವಾಗಿಸಿದಾಗ ಆಶ್ಚರ್ಯ
ಹೇಳಿದ್ದಾಯಿತು ಸಾಕೆನಿಸಿದಾಗ ಪೂರ್ಣವಿರಾಮ.
ಸಾಕಷ್ಟಿವೆ ಸಾಲುಗಳು ಕಥಾಹಂದರದಲಿ
ಎಲ್ಲವೂ ಸಾಮಾನ್ಯವಲ್ಲ, ಸಂಯುಕ್ತವೂ
ಸಂಯೋಜಿತವೂ ಅಲ್ಲ, ಕೆಲವು ಸಾಲು
ಮಾತ್ರ ಒರೆಗಚ್ಚುವ ಕಲ್ಲಿನಂತೆ ಮೊನಚಿಗಾಗಿ
ಸೊಗಸಿಗಲಂಕಾರ, ಪ್ರಾಸಗಳ ಸಾಲುಗಳು
ಚೆಂದಕಾಗಿಯೇ ಛಂದಸ್ಸು ಹೆಚ್ಚಿಸವೆ ಮೆರಗನಲ್ಲಲ್ಲಿ
ಸೊಗಡಿಗಾಗಿ ಸೊಗಸಾದ ಗ್ರಾಮ್ಯ ನುಡಿಗಳ ನುಡಿಮುತ್ತು
ಬೆಡಗಾಗಿಸಿವೆ ಬೇರೆ ಭಾಷೆಯಿಂದೆರವಲು ಪಡೆದ
ಅನ್ಯದೇಶಿಯ ಪದಪುಂಜವದು ನಮ್ಮದೇ ಸ್ವಂತವೆಂಬತೆ.
ಕಥೆಯ ಬನಿಯನೆಚ್ಚಿಸಿವೆ… ಸದಾ ಸಾಂಗವಾಗಿವೆ.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment