ಹುಸಿಯದೆ ನುಡಿದು ಬಿಡು ಒಮ್ಮೆ.. HUSIYADE NUDIDU BIDU OMME A poem by Kumar B Bagival
ಹುಸಿಯದೆ ನುಡಿದು ಬಿಡು ಒಮ್ಮೆ..
ಸಲಿಗೆ ಸುಖವಲ್ಲದೆ ಸುಲಿಗೆ ಯಾಕಾಯ್ತು
ನವಿರು ನುಡಿಯೆಲ್ಲವು ತಿಮಿರು ಯಾಕಾಯ್ತು
ಬೆರೆತಾ ಉಸಿರೇ.. ಹುಸಿಯದೆ ನುಡಿದುಬಿಡು..ಒಮ್ಮೆ
ಅರಳಿದ ಮೊಗ್ಗದು ಸೂಜಿಯ ಮೊನೆಯು ಯಾಕಾಯ್ತು
ಮುದ ಕೊಡುವ ಕೈ ಹಿಡಿಕೆ ಬಂಧನ ಯಾಕಾಯ್ತು
ಸಹ್ಯ ಸನಿಹವು ಸಹಿಸದ ವಿಮುಖವು ಯಾಕಾಯ್ತು
ಧಮನಿ ಬಡಿತವೇ .. ಹುಸಿಯದೆ ನುಡಿದುಬಿಡು..ಒಮ್ಮೆ
ಬಯಸಿ ಕುಡಿದ ಅಮೃತವದು ನಂಜು ಯಾಕಾಯ್ತು..
ಜೊತೆಯ ನಡಿಗೆಯು ಹಿತವಾಗದೆ ಅಹಿತವು ಯಾಕಾಯ್ತು
ಕಳೆದ ಸುಖದ ಕ್ಷಣಗಳೆಲ್ಲವು ಕೊಳೆತ ಸ್ಥಿತಿಯು ಯಾಕಾಯ್ತು
ಮಾಯಾ ಮೋಹವೆ.. ಹುಸಿಯದೆ ನುಡಿದು ಬಿಡು..ಒಮ್ಮೆ
ಮೊಳೆತ ಮೊಗ್ಗದು ಅರಳೊ ಮುನ್ನವೆ ಮಣ್ಣ ಪಾಲು ಯಾಕಾಯ್ತು.
ಒಂದು ಅರೆಕ್ಷಣವು ಬಿಟ್ಟಿರದ ಮನಕೆ ಈ ಮುನಿಸು ಯಾಕಾಯ್ತು
ತುಡಿತವಿರುವ ಹೃದಯವದುವೆ ಬಂಡೆಗಲ್ಲಿನಂತೆ ಯಾಕಾಯ್ತು
ಮಿಡಿದ ಕಣ್ಣೇ.. ನೀ ಹುಸಿಯದೆ ಹೇಳಿಬಿಡು.. ಒಮ್ಮೆ
ಬೀಸಿದ ಸುಳಿಗಾಳಿಯೇ… ಬಿರುಗಾಳಿಯೇ ಯಾಕಾಯ್ತು..
ರಚನೆ: ಕುಮಾರ್ ಬಿ ಬಾಗೀವಾಳ್.
Super
ReplyDeleteSuper... chenagide
ReplyDelete