ತೋರು ನೀ ಮುಖವನ್ನ ನನ್ನ ಕಂದಾ...Thoru nee mukhavanna nanna kanda... Lori writing by Kumar B Bagival

 ತೋರು ನೀ ಮುಖವನ್ನ ನನ್ನ ಕಂದಾ...

ರಚನೆ : ಕುಮಾರ್ ಬಿ ಬಾಗೀವಾಳ್



ತಾರೆಗಳ ಗೊಂಚಲು ತೇರೇರಿ ಬಂದಿವೆ

ತೋರು ನೀ ಮುಖವನ್ನ ನನ್ನ ಕಂದಾ,

ತಾರೆಗಳನು ನೋಡುವೆನು ನಿನ್ನ ಕಂಗಳಲಿ

ನನ್ನ ಮಗುವೆ, ಚಂದಿರನ ಮುಂದಿಟ್ಟು ತೋರುವೆ ನಿನ್ನನವಕೆ.


ಹಕ್ಕಿಗಳ ಹಿಂಡೊಂದು ಹಾರುತಾ ಬಂದಿವೆ

ತೋರು ನೀ ಮುಖವನ್ನ ನನ್ನ ಕಂದಾ

ಚಿಲಿಪಿಲಿಯ ಕೇಳುವೆನು ನಿನ್ನ ಮಾತಲಿ

ನನ್ನ ಮಗುವೆ, ಚಟಪಟ ಮಾತುಗಳ ಕೇಳಿಸುವೆನು ಅವಕೆ.


ಸುಯ್ಯನೆ ಸುಳಿಯುತ್ತ ತಣ್ಣನೆಯ ತಂಗಾಳಿ ಬಂದಿವೆ

ತೋರು ನೀ ಮುಖವನ್ನ ನನ್ನ ಕಂದಾ

ಮುಂಗುರುಳ ಮುದದಾಟ ನಿನ್ನ ಮೊಗದ ಮೇಲೇರಿ 

ನನ್ನ ಮಗುವೆ, ಮುಂಗುರುಳಾಟವನು ತೋರುವೆನವಕೆ.


ಎಳೆ ಜೋಳದಾ ತೆನೆಗಳು ಹರಿಯಾಗಿ ಬಂದಿವೆ

ತೋರು ನೀ ಮುಖವನ್ನ ನನ್ನ ಕಂದಾ

ಹಾಲು ಹಲ್ಲುಗಳ ತೆನೆಯ ನೋಡುವೆನು ನೀ ನಗುವಾಗ

ನನ್ನ ಮಗುವೆ, ಸಾಲು ಹಾಲು ಹಲ್ಗಳ ಪಂಕ್ತಿಯನು ತೋರುವೆನವಕೆ.


ಸುಕಾಲ ಸಾಲುಗಳು ಸಾಲಾಗಿ ನಿಂದಿವೆ

ತೋರು ನೀ ಮುಖವನ್ನು ನನ್ನ ಕಂದಾ

ಸಾಧನೆಯ ಹಾದಿಯ ಆದಿಯನು ಕಾಣುವೆನು

ನನ್ನ ಮಗುವೆ, ಸೋಲಿರದ ಹಾದಿಯ ಗೆಲುವನ್ನು ತೋರುವೆನವಕೆ.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES