ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

 ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಮಕರ ಸಂಕ್ರಾಂತಿ ಕುರಿತ ವೈಜ್ಞಾನಿಕ ಲೇಖನ: ಕುಮಾರ್.ಬಿ.ಬಾಗೀವಾಳ್



ಸಂಕ್ರಾಂತಿ ಅಸಲಿಗೆ ಸಂಕ್ರಮಣ. ಅರ್ಥಾತ್ ಹೇಮಂತ ಋತು,ಶಿಶಿರ ಋತುಗಳ ಸಂಧಿಕಾಲ. ಭಾರತದ ಬಹುತೇಕ ರಾಜ್ಯಗಳು ಈ ದಿನವನ್ನು ಮಕರಸಂಕ್ರಾಂತಿ ಎಂದು ಆಚರಿಸುವ  ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ. ಪುಣ್ಯಸ್ನಾನ,ಎಣ್ಣೆಮಜ್ಜನ,ಎಳ್ಳುಬೆಲ್ಲ ಪರಸ್ಪರವಾಗಿ ಹಂಚುವಿಕೆ, ಅವರೆಕಾಯಿ, ಕಡಲೆಕಾಯಿ, ಸಿಹಿಗೆಣಸು ಬೇಯಿಸಿ ತಿನ್ನುವ, ರಾಸು ಪೂಜೆ,ಕಿಚ್ಚು ಹಾಯಿಸುವುದು ಗಾಳಿಪಟ ಹಾರಿಸುವುದು ಹೀಗೆ ಆಚರಿಸುವ ಪದ್ದತಿಗಳು ಬೆಳೆಯುತ್ತಾ ಹೋಗುತ್ತವೆ. ಅದಿರಲಿ ಇದರ ಹಿಂದಿನ ಅಸಲಿ ವಿಜ್ಞಾನದ ಅಂಶಗಳನ್ನು, ಹಾಗು ಜ್ಯೋತಿಷ್ಯದ ಅಂಶಗಳನ್ನೂ, ಸಂಪ್ರದಾಯವನ್ನು ಒಗ್ಗೂಡಿಸಿದ ದೃಷ್ಟಿಯಿಂದ ಈ ಲೇಖನ ಬರೆಯುತ್ತಿದ್ದೇನೆ.

ಅಂದಹಾಗೆ ಮಕರ ಸಂಕ್ರಾಂತಿಯ ವೈಜ್ಞಾನಿಕ ಸ್ವರೂಪದ ಅಂಶವನ್ನು ಗಮನಿಸುವುದಾದರೆ ಉತ್ತರಾಯಣ ಕಾಲದಲ್ಲಿನ ಪ್ರಥಮ ಸಂಕ್ರಮಣ ಮಕರ ರಾಶಿಯಲ್ಲಿ ಎಂಬುದು. ಸ್ವಲ್ಪಮಟ್ಟಿಗೆ ವಿವರವಾಗಿ ನೋಡೋದಾದರೆ ಖಗೋಳ ದಲ್ಲಿನ ನಕ್ಷತ್ರಗಳ ಗುಂಪುಗಳನ್ನು ಬೇರೆ ಬೇರೆ ಕಲ್ಪಿತ ಆಕೃತಗಳಾಗಿ ನೋಡುತ್ತಾ ಅವುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹನ್ನೆರಡು ನಕ್ಷತ್ರ ಪುಂಜಗಳು ವೃತ್ತಾಕಾರದ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಈ ಹನ್ನೆರಡು ನಕ್ಷತ್ರ ಪುಂಜಗಳನ್ನು ನಕ್ಷತ್ರ ರಾಶಿಗಳು ಎನ್ನುತ್ತೇವೆ. ಮೇಷ,ವೃಷಭ....ಹೀಗೆ ಇದರಲ್ಲಿ ಮಕರ ರಾಶಿ ಕೂಡ ಒಂದು ರಾಶಿ.ಭಾರತದಲ್ಲಿ ಎರಡು ರೀತಿಯ ಹಿಂದು ಪಂಚಾಂಗ ವರ್ಷಗಳನ್ನು ಅನುಸರಿಸುವ ಪದ್ದತಿ ಇದೆ ಒಂದು ಚಂದ್ರನ ಚಲನೆಗೆ ಅನುಗುಣವಾದ  ಚಂದ್ರಮಾನ ವರ್ಷ, ಮತ್ತೊಂದು ಸೂರ್ಯನಿಗೆ ಆಧಾರವಗಿ ಭೂಮಿಯ ಚಲನೆಗೆ ಅನುಗುಣವಾದ ಸೌರಮಾನ ವರ್ಷ. ಬಹುತೇಕ ಪ್ರಮಾಣದಲ್ಲಿ ಚಂದ್ರಮಾನ ಪಂಚಾಗ ಅನುಸರಿಸುವುದನ್ನು ಕಾಣುತ್ತೇವೆ. ಆದರೆ ಈ ಮಕರ ಸಂಕ್ರಾಂತಿ ಸೌರಮಾನಕ್ಕೆ ಸಂಬಂಧಿಸಿದ್ದು. ಅಂದರೆ ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಆಧಾರಿತವಾದದ್ದು. ಆದರೆ ನಮಗೆ ಖಗೋಳೀಯವಾಗಿ ಸೂರ್ಯನೇ ಚಲಿಸಿದಂತೆ ಭಾಸವಾಗುತ್ತದೆ. ಹಾಗಾಗಿ ಇಲ್ಲಿ ಸೂರ್ಯನ ಚಲನೆ ಎಂದರೂ ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಉತ್ತಮ ಎಂಬುದು ನನ್ನ ಅಭಿಪ್ರಾಯ. ಸೂರ್ಯನು ಹನ್ನೆರಡು ರಾಶಿಗಳಲ್ಲಿ ಪ್ರತೀ ರಾಶಿ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಎಂದೇ ಕರೆಯಲಾಗುತ್ತದೆ. ಆದರೆ ಅದರಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನ. ಏಕೆಂದರೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸಿ ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುವುದು ಗೊತ್ತಿರುವ ವಿಷಯವೆ, ಆದರೆ ಅದು ಸಂಭವಿಸುವುದು ವರ್ಷದಲ್ಲಿ ಎರಡೇ ಎರಡು ದಿನಗಳು ಎಂಬುದು ಇಲ್ಲಿ ವಿಶೇಷ. ಅದು ಮಾರ್ಚ್21 ಹಾಗು ಸೆಪ್ಟೆಂಬರ್22. ಆ ದಿನಗಳು ಬಿಟ್ಟರೆ ಉಳಿದಂತೆ ಉತ್ತರಕ್ಕೆ ವಾಲಿದಂತೆ ಇಲ್ಲವೆ ದಕ್ಷಿಣಕ್ಕೆ ವಾಲಿದಂತೆ ಉದಯವಾಗುವುದನ್ನು ಗಮನಿಸಬೇಕಿದೆ.ಹೀಗೆ ವರ್ಷ ದಲ್ಲಿ ಆರು ತಿಂಗಳುಗಳ ಕಾಲ ಉತ್ತರದಿಕ್ಕಿನತ್ತ, ಮತ್ತೆ ಆರು ತಿಂಗಳುಗಳ ಕಾಲ ದಕ್ಷಿಣ ದಿಕ್ಕಿನತ್ತ ಸೂರ್ಯನ ಚಲನೆ ಇರುತ್ತದೆ. ಅಂದರೆ ಸೂರ್ಯನ ಸುತ್ತ ಭೂಮಿ ಧೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುತ್ತದೆ.ಈ ಧೀರ್ಘ ವೃತ್ತಾಕಾರದ ಕಕ್ಷೆ ಹಾಗು ಭೂಮಿಯ ಸಮಭಾಜಕ ವೃತ್ತ ಇವುಗಳು ಸಂಧಿಸುವ ಬಿಂದುಗಳನ್ನು ವಿಷವದ್ ಬಿಂದುಗಳು ಎನ್ನುತ್ತೇವೆ. ಈ ಬಿಂದುಗಳಲ್ಲಿ ಸೂರ್ಯನಿದ್ದಾಗ ಮಾತ್ರ ಭೂಮಿ ಸಮ ಹಗಲು ಮತ್ತು ಸಮ ರಾತ್ರಿಗಳನ್ನು ಪಡೆಯಲು ಸಾಧ್ಯ. ಅಂದರೆ ಆ ದಿನಗಳಲ್ಲಿ ಮಾತ್ರ ಸೂರ್ಯ ಸರಿಯಾಗಿ ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತವಾಗುವುದು. ಉಳಿದಂತೆ ಸೂರ್ಯ ತನ್ನ ಚಲನೆಯನ್ನು ದಕ್ಷಿಣ ದಿಕ್ಕಿಗೆ ಸಾಗುತ್ತ ಸಾಗುತ್ತಾ ಡಿಸೆಂಬರ್ 22ರಂದು ದಕ್ಷಿಣದ ತುತ್ತತುದಿ ತಲುಪಿ ನಿಷ್ಚಲವಾದಂತೆ ಭಾಸವಾಗುತ್ತದೆ.ಅಂದು ಭೂಮಿಯ ಮೇಲೆ ಅತೀ ಚಿಕ್ಕ ಹಗಲು,ಅತೀ ದೊಡ್ಡ ರಾತ್ರಿ.ಆ ದಿನ ರಾತ್ರಿ12ಗಂಟೆ 57 ನಿಮಿಷಕ್ಕೆ ದಕ್ಷಿಣ ದಿಂದ ಸೂರ್ಯನ ಚಲನೆ ಉತ್ತರ ದಿಕ್ಕಿಗೆ ಪ್ರಾರಂಭವಾಗುತ್ತದೆ ಈ ಉತ್ತರಾಯಣದ ಪ್ರಾರಂಭ ಮಕರ ರಾಶಿಗೆ ಸೂರ್ಯನ ಪ್ರವೇಶದಿಂದಾಗುತ್ತದೆ.ಹಾಗಾಗಿ ಈ ಮಕರಸಂಕ್ರಾಂತಿ ಯನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತೇವೆ. ಅಂದರೆ ನಿಜವಾದ ಅರ್ಥದಲ್ಲಿ ಮಕರ ಸಂಕ್ರಾಂತಿ ನಡೆಯುವುದು ಡಿಸೆಂಬರ್22 ರಂದು. ಆದರೆ ನಾವು ಭಾರತೀಯ ಜ್ಯೋತಿಷ್ಯ ಪರಿಪಾಠದಂತೆ ಜನವರಿ ತಿಂಗಳ 14/15ರಂದು ಆಚರಿಸುತ್ತಾ ಬಂದಿದ್ದೇವೆ. ಭಾರತೀಯ ಪುರಾಣಗಳಲ್ಲಿ ಉತ್ತರಾಯಣ ಪುಣ್ಯಕಾಲಕ್ಕೆ ಅತ್ಯಂತ ಮಹತ್ವ ನೀಡಲಾಗಿದೆ ಮಹಾಭಾರತದಲ್ಲಿ ಸುಮಾರು ದಿನಗಳವರೆಗೂ ಶರಶಯ್ಯೆಯ ಮೇಲೆ ದೇಹತ್ಯಾಗ ಮಾಡದೆ ಉತ್ತರಾಯಣ ಪುಣ್ಯಕಾಲದಂದು ಭೀಷ್ಮರು ದೇಹತ್ಯಜಿಸಿದರೆಂದು ಉಲ್ಲೇಕವಿದೆ.ಹಾಗಾಗಿ ಈ ಪುಣ್ಯಕಾಲದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಈ ಗಳಿಗೆಯಂದೇ ಸತ್ತರೆ ಸ್ವರ್ಗಕ್ಕೆ ಹೋಗಬಹುದೆಂಬ ನಂಬಿಕೆ ಇದೆ ಎಂಬುದನ್ನು ಕಾಣಬಹುದು.

ಅಂತೆಯೇ ದಕ್ಷಿಣಾಯನವೂ ಕೂಡ ಸೂರ್ಯ ತನ್ನ ಉತ್ತರಾಯಣ ವನ್ನು ಮುಗಿಸಿ ದಕ್ಷಿಣ ದಿಕ್ಕಿಗೆ ತನ್ನ ಚಲನೆಯನ್ನು ಪ್ರಾರಂಭಿಸುವ ದಿನ. ಆ ದಿನದಂದು ಸೂರ್ಯ ಕರ್ನಾಟಕ ರಾಶಿಗೆ ಪ್ರವೇಶಿಸುತ್ತಾನೆ. ಅದು ಪ್ರತೀ ವರ್ಷ ಜೂನ್ 21ರಂದು ಆ ದಿನವನ್ನು ದಕ್ಷಿಣಾಯನ ಪುಣ್ಯಕಾಲ ಎಂದು, ಕರ್ನಾಟಕ ಸಂಕ್ರಾಂತಿ ಎಂದು ಕರೆಯುತ್ತೇವೆ. ಒಟ್ಟಿನಲ್ಲಿ ಎಲ್ಲಾ ಮಾಸದ ಸಂಕ್ರಾಂತಿಗಳಿಗಿಂತಲೂ ಮಕರ ಸಂಕ್ರಾಂತಿ ಅಥವಾ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಭಾರತೀಯ ಪುರಾಣ ತಿಳಿಸುತ್ತದೆ. ನಮ್ಮಂತೆಯೇ ಜಪಾನ್ ದೇಶದಲ್ಲಿ ಮೇಷ ಸಂಕ್ರಾಂತಿ ಆಚರಿಸಲಾಗುತ್ತದೆ. ಅದನ್ನು ರಾಷ್ಟ್ರೀಯ ಹಬ್ಬವಾಗಿ ಘೋಸಿಸಲಾಗಿದೆ. 

ಭಾರತೀಯ ಜ್ಯೋತಿಷ್ಯ ಶಾಸ್ತ್ರ ಕೂಡ ಈ ಪುಣ್ಯ ಕಾಲದ ನಿರ್ದಿಷ್ಟ ದಿನದ ಲೆಕ್ಕಾಚಾರವನ್ನು ಮಾಡಿ ತಿಳಿಸಿರುವುದು ಭಾರತೀಯ ಜ್ಯೋತಿಷ್ಯ ಶಾಸ್ತ್ರ ದ ಶಿಸ್ತು ಬದ್ಧ ಯೋಜನೆಯನ್ನು  ತಿಳಿಸುತ್ತದೆ.

ಹಾಗೆಯೇ ಮಕರ ಸಂಕ್ರಾಂತಿ ದಿನದಂದು ಆಚರಿಸುವ ರೀತಿಯಲ್ಲಿ ಕೂಡ ವೈಜ್ಞಾನಿಕ ಅಂಶಗಳಿರುವುದು ವಿಜ್ಞಾನದ ಕಠಿಣಾಂಶಗಳನ್ನು ಪ್ರತೀ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.


ಎಳ್ಳು ಬೆಲ್ಲ ಹಂಚುವುದರ ರಹಸ್ಯ

ವೈಜ್ಞಾನಿಕವಾಗಿ ತಿಳಿ ಹೇಳುವ ಕಾಲ ಯೋಚಿಸುವ ಕಾಲ ಪ್ರತಿ ಸೇವನೆಯಲ್ಲೂ ಪೋಷಕಾಂಶಗಳ ಪ್ರಮಾಣ ತಿಳಿಯುವ ಜಾಯಮಾನ ಈ ಕಾಲದ್ದು. ಆದರೆ ಅನಕ್ಷರತೆ ತಾಂಡವ ಆಡುತ್ತಿದ್ದ ಆ ಕಾಲದಲ್ಲಿ ಜನರಿಗೆ ವಿಜ್ಞಾನ ತಲುಪಿಸುವ ಏಕೈಕ ಮಾರ್ಗ ಹಬ್ಬಗಳು ಮಾತ್ರ. ಅದು ಸಂಕ್ರಾಂತಿ ಇರಲಿ ಗಣೇಶೋತ್ಸವ ಇರಲಿ.ಯುಗಾದಿ ಇರಲಿ ಭಾರತದಲ್ಲಿ ಆಚರಿಸುವ ನೂರಕ್ಕೆ ನೂರರಷ್ಟು ಹಬ್ಬಗಳು ವೈಜ್ಞಾನಿಕತೆಯ ಉದ್ದೇಶ ಹೊಂದಿವೆ ಎಂಬುದರಲ್ಲಿ ಸಂಶಯವೇ ಇಲ್ಲ. ಮಕರ ಸಂಕ್ರಾಂತಿ ಹಬ್ಬ ಬರುವುದು ಕೇಳಿ ಚಳಿಗಾಲದ ಉನ್ನತದಲ್ಲಿ. ಹಾಗಾಗಿ ಚಳಿಯ ಹೊಡೆತಕ್ಕೆ ನಲುಗಿಹೋಗಿರುತ್ತೇವೆ ನಾವೆಲ್ಲರೂ. ನಮ್ಮ ದೇಹ ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳಲು ತನ್ನೊಳಗಿನ ಕೊಬ್ಬನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾರಂಭಿಸುತ್ತದೆ. ಹೀಗಾದಾಗ ದೇಹದಲ್ಲಿ ತೈಲಾಂಶ ಕಡಿಮೆಯಾಗಿ ಚರ್ಮ ಒಣಗಿದಂತಾಗುತ್ತದೆ,ಅಷ್ಟೇ ಅಲ್ಲದೆ ಬಿರುಸಾದ ಬಿಗಿಯಾದಂತಾಗುತ್ತದೆ ಸ್ಪಷ್ಟ ಪೋಷಣೆ ಸಿಗದಿದ್ದರೆ ಚರ್ಮದ ಕಾಯಿಲೆಗಳು ಪ್ರಾರಂಭವಾಗುತ್ತವೆ. ಚರ್ಮ ಒಡೆಯಲಾರಂಭಿಸುತ್ತದೆ. ಶಿಶಿರದಲ್ಲಿ ಮತ್ತಷ್ಟು ಚಳಿ ತೀವ್ರವಾಗುವುದರಿಂದ ಸಾಕಷ್ಟು ತೈಲಾಂಶ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ ಆದ್ದರಿಂದಲೇ ಎಳ್ಳು, ಕೊಬ್ಬರಿ,ಕಡಲೆಕಾಯಿ ಬೀಜ ಹಂಚಲಾಗುತ್ತದೆ ಅದರೊಂದಿಗೆ ಬೆಲ್ಲವನ್ನು ತೈಲ ನಿಯಂತ್ರಕವಾಗಿ ಬೆರೆಸಲಾಗಿರುತ್ತದೆ ಎಂತಹಾ ಅದ್ಭುತ ಸಂಯೋಗ ಇದು ಹಾಗಾಗಿಯೇ ಭಾರತೀಯ ಸಂಪ್ರದಾಯದಗಳು ವೈಜ್ಞಾನಿಕ ತಿಳುವಳಿಕೆಯಿಂದಲೇ ಆಚರಿಸಲ್ಪಡುತ್ತವೆ ಎಂಬುದು ಸ್ಪಷ್ಟ.



ರಾಸುಗಳನ್ನು ಕಿಚ್ಚಾಯಿಸುವುದು ಏಕೆ?

ರಾಸುಗಳು ರೈತರ ಬಂಧುಗಳು. ವರ್ಷವಿಡೀ ರೈತನ ಕೆಲಸಗಳಿಗೆ ಹೆಗಲಾಗಿರುತ್ತವೆ ಹಾಗಾಗಿ ಅವುಗಳ ಆರೈಕೆ ರೈತರ ಜವಾಬ್ದಾರಿ ಕೂಡ.ಹಬ್ಬದ ದಿನದಂದು ಅವುಗಳ ಮೈ ತೊಳೆದು ಕೊಂಬುಗಳಿಗೆ, ಮೈಗೆ  ಬಣ್ಣ ಬಳಿದು ಸಿಂಗರಿಸಿ ಪೂಜೆ ಸಲ್ಲಿಸಿ ಸಂಜೆಯವೇಳೆಗೆಬಮೈದಾನದಲ್ಲಿ ಬೆಂಕಿ ಹಚ್ಚಿ ರಾಸುಗಳನ್ನು ಬೆಂಕಿಯ ಜ್ವಾಲೆಯಲಗಲ್ಲಿ ಹಾಯಿಸಲಾಗುತ್ತದೆ ಇದರ ಹಿಂದೆ ಚಳಿಗಾಲದ ಚಳಿಗೆ ನಲುಗಿದ್ದ ರಾಸುಗಳಿಗೆ ಮುಂಬರುವ ದಿನಗಳ ಸೂಚಕ ಹಾಗೂ ಅವುಗಳ ಚರ್ಮಕ್ಕೆ ಅಂಟಿರುವ ಕ್ರಿಮಿ ಕೀಟಗಳು ಬಂಕೀಯ ಕಾವಿಗೆ ಬಿದ್ದು ಹೋಗಲಿ ಎಂಬ ಉದ್ದೇಶವಿದೆ. ನೈಸರ್ಗಿಕ ಕೀಟನಾಶಕವಾಗಿ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. 


ಹಾಗೆಯೇ ಎಣ್ಣೆ ಮಜ್ಜನ, ಕಡಲೆಕಾಯಿ, ಸಿಹಿಗೆಣಸು ಅವರೆಕಾಯಿ ಬೇಯಿಸಿತಿನ್ನುವುದು ಭಾರತೀಯರ ಆಹಾರ ಪದ್ದತಿಯ ವಿಶ್ಲೇಷಣೆಯ ಪ್ರಾಮುಖ್ಯತೆ ತಿಳಿಸುತ್ತದೆ. ಹಬ್ಬಗಳು ಬರಿ ಹಬ್ಬಗಳ ಆಚರಣೆಯಲ್ಲ ಜೀವನದ ಸಮೃದ್ಧ ಭಾಗ ಎಂಬುದನ್ನು ಮನಗಾಣಬೇಕಿದೆ.


ಕೆಲವೆಡೆ ಗಾಳಿಪಟ ಹಾರಿಸುವ ಪದ್ದತಿಯನ್ನು ರೂಢಿಸಿಕೊಳ್ಳಲಾಗಿದೆ ಇದು ರೈತರು ಹಾಗು ಗ್ರಾಮೀಣ ಭಾಗದ ಜನರು ಈ ಕಾಲದೊತ್ತಿಗೆ ತಮ್ಮ ಬಹುತೇಕ ಫಸಲನ್ನು ಪಡೆದು ವಿಶ್ರಾಂತಿ ತೆಗೆದುಕೊಳ್ಳುವ ಸಮಯ ಹಾಗಾಗಿ ಎಲ್ಲರ ಸಹಯೋಗದ ಮಹತ್ವಕ್ಕಾಗಿ  ಈ ಪದ್ಧತಿ ರೂಡಿಯಲ್ಲಿದೆ. ಇಂದು ಈ ಎಲ್ಲಾ ಚಟುವಟಿಕೆಗಳು ಗ್ರಾಮೀಣ ಮಟ್ಟದಲ್ಲಲ್ಲದೆ ನಗರ ಪ್ರದೇಶಗಳಲ್ಲೂ ಆಚರಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಅದರಲ್ಲೂ ಬೆಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಬಹಳ ವಿಶೇಷ ಹಬ್ಬವಾಗಿದೆ. ತಮಿಳುನಾಡಿನಲ್ಲಿ ಈ ಹಬ್ಬದ ವಿಶೇಷ ಪೊಂಗಲ್ ತಯಾರಿಕೆ ಅದು ಅಲ್ಲಿಮಾತ್ರವಲ್ಲದೆ ದೇಶದ ಮೂಲೆಮೂಲೆಗೂ ಹರಡಿದೆ. 


ಮಕರ ಸಂಕ್ರಾಂತಿ ಶುಭಾಶಯಗಳೊಂದಿಗೆ 


ಲೇಖಕರು:


ಕುಮಾರ್ ಬಿ ಬಾಗೀವಾಳ್


Comments

Post a Comment

Popular posts from this blog

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES