ಕವಿಶೈಲಕ್ಕೊಂದು ಪ್ರವಾಸ , A journey towards Kavishaila , A travel guide by Kumar B Bagival
ಕವಿಶೈಲಕ್ಕೊಂದು ಪ್ರವಾಸ ಯೋಜನೆ.
ಕನ್ನಡ ನಾಡಲ್ಲಿ ಸುತ್ತಾಡಿದವನು ಹಲವು ದೇಶಗಳನ್ನು ಸುತ್ತಿದ್ದಕ್ಕೆ ಸಮ ಹಾಗಾಗೆಯೇ ಹೇಳೋದು… ಕರ್ನಾಟಕ " ಒಂದು ರಾಜ್ಯ, ಹಲವು ಪ್ರಪಂಚ " ಅನ್ನೋದು. ಸಮೃಧ್ದವಾದ ನಾಡು ಭೂಮಿಮೇಲೆ ಇದ್ದಿದ್ದೇ ಆದರೆ ಅದು ಕನ್ನಡ ನಾಡು ಮಾತ್ರ ಅನ್ನೋದು ಇಲ್ಲಿರುವವರು ಮಾತ್ರ ಹೇಳೋ ಮಾತಲ್ಲ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಕನ್ನಡ ನೆಲದ ಮೇಲೆ ಸುತ್ತಾಡಿದ ಪ್ರತೀ ಪ್ರವಾಸಿಗನೂ ಹೇಳೋ ಮಾತು. ಅದರಲ್ಲೂ ಪಶ್ಚಿಮ ಘಟ್ಟದ ಮೇಲೊಂದು ಮೆಲು ಪ್ರವಾಸ ಕೈಗೊಳ್ಳದಿದ್ದರೆ ಅಲ್ಲಿನ ಪ್ರವಾಸ ತಾಣ, ಪ್ರಕೃತಿ ಸೊಬಗನ್ನ ಸವಿಯದಿದ್ದರೆ ಇಲ್ಲಿನ ಕಾವ್ಯ ,ಕವಿಯ ಬಗ್ಗೆ ಅವರ ಹಿಂದಿರುವ ನೈಸರ್ಗಿಕ ಸೊಬಗಿನ ಶಕ್ತಿಯನ್ನು ಅರಿಯಲು ಸಾದ್ಯವೇ ಇಲ್ಲ. ರಸ ಋಷಿಗಳ ತಾಣ ನಿಜವಾಗಿಯೂ ಸೆಳೆಯದಿರದು ಕಣ್ಮನ.
ಅಂದ ಹಾಗೆ "ಪ್ರವಾಸಾನುಭವ" ದಲ್ಲಿ ನಿಮ್ಮನ್ನ ನೇರ ಕವಿಮನೆ ಕವಿಶೈಲಕ್ಕೆ ಕರೆದ್ಕೊಂಡು ಹೋಗ್ತೀನಿ ಬನ್ನಿ…
ಚಿತ್ರ: ಕವಿಮನೆ ಕೃಪೆ: ಇಂಟರ್ನೆಟ್
ಕವಿಮನೆ ಇರೋದು ಕರ್ನಾಟಕದ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸುಂದರ ವನಸಿರಿಯ ಮಧ್ಯೆ. ಕರ್ನಾಟಕದ ಸಾಹಿತ್ಯ ಶ್ರೀಮಂತಗೊಳಿಸಿದ , ಕವಿ ಎಂದರೆ ತಟ್ ಅಂತ ನೆನಪಾಗೋದು ಒಬ್ಬರೇ ಅದು… ಹಾ… ಹೌದು ಕುವೆಂಪು… ಅರ್ಥಾತ್ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಹುಟ್ಟೂರು ಕುಪ್ಪಳಿಯಲ್ಲಿ.
ಕವಿಶೈಲ
ಕರ್ನಾಟಕದ ಪ್ರವಾಸಿ ಸ್ಥಳಗಳಲ್ಲಿ ನೋಡಲೇಬೇಕಾದ ಸ್ಥಳ. ಸುಂದರ ಹಸಿರು ಮರಗಿಡಗಳ ನಡುವೆ ಕವಿ ಕುವೆಂಪು ಅವರ ಮನೆ ಪಕ್ಕದ ಹಾಸು ಕಲ್ಲುಗಳನ್ನು ಏರುತ್ತಾ ಸಾಗಿದರೆ… ಗಿಡಗಳು ಮೈಸೋಕಿಸಿ ಮುದ ನೀಡುತ್ತವೆ. ಬೆಳಿಗ್ಗೆ ತಂಪಾದ ವಾತಾವರಣದಲ್ಲಿ , ಅದರಲ್ಲೂ ಚುಮು ಚುಮು ಚಳಿ ಹಾಸಿದ ಮಂಜು… ಆಹ್ಲಾದಕರವಾದ ವಾತಾವರಣವನ್ನು ಸೃಷ್ಟಿಸುವ ಮಲೆನಾಡ ಮಲೆಗಳು… ಹಾಗೆ ನಡೆದು ಸಾಗಿದರೆ… ಶಿಲೆಗಳು ಸ್ವಾಗತಿಸಿ ಬರಮಾಡಿಕೊಳ್ಳುತ್ತವೆ. ಬೃಹತ್ ಆಯತಾಕಾರದ ಕಲ್ಲಿನ ಕಮಾನುಗಳು ಕವಿ ಕುವೆಂಪುರವರು ಇಹಲೋಕವನ್ನು ತ್ಯಜಿಸಿದ ನಂತರದ ವಿರಮಿಸುತ್ತಿರುವ ಮಂಟಪದೆಡೆಗೆ ನಮ್ಮನ್ನ ಕರೆಯುತ್ತವೆ… ವೃತ್ತಾಕಾರದಲ್ಲಿ ಜೋಡಿಸಿರುವ ಆಯತಾಕಾರದ ಬೃಹತ್ ಬಂಡೆಗಳ ಮಧ್ಯೆ ಮಂಟಪವಿದೆ… ನೋಡಿದ ನಮಗೆ ಧನ್ಯತೆ, ಒಂದು ಕ್ಷಣ ಮೌನಿಯಾಗಿ ನಾವೂ ಕುವೆಂಪುರವರ ಸಾಹಿತ್ಯದ ಲೋಕದೊಳಗೆ ಲೀನವಾಗದೆ ಇರಲಾಗದು…ಕವಿಮನಕ್ಕೆ ನಮಿಸದೇ ಬರಲಾಗದು.
ಚಿತ್ರ : ಕವಿ ಶೈಲ ಕಮಾನು ಕಲ್ಲುಗಳು ಕೃಪೆ : ಇಂಟರ್ನೆಟ್
ಪಕ್ಕದಲ್ಲಿ ಸಾಹಿತ್ಯ ದಿಗ್ಗಜ ಸಮಾಗಮಕ್ಕೆ ಸಾಕ್ಷಿ ಎಂಬಂತೆ ಕುವೆಂಪು, ಬಿ.ಎಮ್.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ರವರ ಹಸ್ತಾಕ್ಷರವಿರುವ ಚಿಕ್ಕ ಬಂಡೆಯನ್ನೂ ಕಾಣಬಹುದು.
ಹಾಗೆಯೇ ಕವಿ ರಚಿತ ಸಾಹಿತ್ಯದ ಸಾಲುಗಳನ್ನುಳ್ಳ ಗ್ರಾನೈಟ್ ಶಿಲೆಗಳನ್ನು ನೋಡಬಹುದಾಗಿದೆ. ಹಾಗೆ ಬಂಡೆಗಲ್ಲುಗಳ ಮೇಲೆ ಸುತ್ತಾಡುತ್ತಾ ಸಹ್ಯಾದ್ರಿಯ ಸೊಬಗನ್ನು ಸವಿಯಬಹುದು. ಬಂಡೆಗಲ್ಲಿನ ಮೇಲೆರಿ ಕುಳಿತು ಸಹ್ಯಾದ್ರಿಯ ಜೀವಂತಿಕೆಯನ್ನು ನೋಡುತ್ತಾ ಕುಳಿತರೆ ಅರಸಿಕನೂ ರಸಿಕನಾಗಬಲ್ಲ . ಋಷಿ ರಸ ಋಷಿಯಾಗಬಲ್ಲ. ಕವಿಯಾಗದ ಮನವಿಲ್ಲದಿಲ್ಲ
ಚಿತ್ರ : ಕವಿ ಲೀನರಾದ ಸ್ಥಳ ಕೃಪೆ : ಇಂಟರ್ನೆಟ್
ಕವಿಮನೆ
ಚಿತ್ರ : ಕವಿಮನೆ ಕೃಪೆ: ಇಂಟರ್ನೆಟ್
ಕವಿ ಕುವೆಂಪು ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದ ಅವರ ಪೂರ್ವಜರು ವಾಸಿಸುತ್ತಿದ್ದ ಮನೆ ಈ ಕವಿಮನೆ. ಈ ಮನೆ ಕರ್ನಾಟಕದ ಮನೆ ಕಟ್ಟುವ ಒಂದು ಶೈಲಿ ತೊಟ್ಟಿಮನೆ. ಆಯತಾಕಾರದ ಮನೆಯ ಮಧ್ಯ ಭಾಗದಲ್ಲಿ ತೊಟ್ಟಿ ಇದ್ದು ಆಕಾಶಕ್ಕೆ ಈ ಭಾಗ ತೆರೆದುಕೊಂಡಿರುತ್ತದೆ. ಮೂರು ಮಹಡಿಗಳುಳ್ಳ ಈ ಮನೆಯನ್ನು ನವೀಕರಣಗೊಳಿಸಿ ಮ್ಯೂಸಿಯಂ ಮಾಡಲಾಗಿದೆ. ಕವಿ ಮನೆಯಲ್ಲಿ ಕವಿ ಬಳಸಿದ್ದ ವಸ್ತುಗಳಿವೆ, ಅವರು ಓದಿದ, ಬರೆದ ಸಾಹಿತ್ಯಗಳಿವೆ. ಅವರ ಪೂರ್ವಜರು ಕೃಷಿಗಾಗಿ ಬಳಸಿದ ಪರಿಕರಗಳಿವೆ. ಹಾಗೂ ಮಲೆನಾಡಿನ ಜನ ಜೀವನ ಶೈಲಿ ಅನಾವರಣಗೊಳ್ಳುತ್ತದೆ. ಪ್ರಶಾಂತತೆ ಇದೆ, ಸಾಹಿತ್ಯದ ಘಮವಿದೆ,ಸಾರ್ಥಕತೆಯ ಭಾವ ತುಂಬಿಕೊಳ್ಳುತ್ತದೆ. ಮುಂದಿನ ಜನ್ಮವೊಂದಿದ್ದರೆ ಅದು ಕನ್ನಡ ನಾಡಲ್ಲೇ ಆಗಲೆಂಬ ಹರಕೆ ಹೊತ್ತು ಬರದೇ ಇರಲಾಗದು.
ಸಂದ ಪುರಸ್ಕಾರಗಳ ಆಗರವೇ ಇದೆ. ಕವಿಮನೆ ಪ್ರವೇಶ ಬೆಳಿಗ್ಗೆ 9.30ರಿಂದ ಸಂಜೆ 6ರ ವರೆಗೆ ಮುಕ್ತವಾಗಿದ್ದು ಪ್ರವೇಶ ಶುಲ್ಕ ನಿಗದಿಪಡಿಸಿದೆ.
ತಲುಪುವ ಮಾರ್ಗ:
ಕುಪ್ಪಳಿ ತಾಲ್ಲೂಕು ಕೇಂದ್ರ ತೀರ್ಥಹಳ್ಳಿಯಿಂದ 18 km, ಹಾಗು ಜಿಲ್ಲಾಕೇಂದ್ರ ಶಿವಮೊಗ್ಗದಿಂದ 80 km ದೂರವಿದೆ. ಬೆಂಗಳೂರಿನಿಂದ ಬಸ್ ಸಂಚರಿಸುತ್ತವೆ. ಬೆಂಗಳೂರು-ತುಮಕೂರು-ಅರಸೀಕೆರೆ-ಶಿವಮೊಗ್ಗ-ತೀರ್ಥಹಳ್ಳಿ -ಕುಪ್ಪಳಿ ತಲುಪಬಹುದು.
ಪ್ರಸಿದ್ಧ ಪ್ರಾವಾಸಿ ತಾಣ ಶೃಂಗೇರಿಯ ಪ್ರವಾಸ ಮಾಡಿದವರು ಕೂಡ ಅದರ ಸಮೀಪವಿರುವ ಕವಿಶೈಲಕ್ಕೆ ತಪ್ಪದೇ ಹೋಗಬೇಕು. ಇದರ ಸುತ್ತಮುತ್ತ ವಿಶ್ವ ಪ್ರಸಿದ್ಧ ಜೋಗ್ಫಾಲ್ಸ್ ನಂತಹ ಅದ್ಭುತ ಪ್ರವಾಸೀ ತಾಣಗಳಿವೆ. ಬೆಂಗಳೂರು, ಮೈಸೂರು ಗಳಿಂದ ರೈಲು ವ್ಯವಸ್ಥೆ ಕೂಡ ಇದ್ದು ಮೈಸೂರಿನಿಂದ-ಹಾಸನ-ಅರಸೀಕೆರೆ-ಕಡೂರು ಮಾರ್ಗವಾಗಿ ಅಲ್ಲಿಂದ ಬಸ್ ಮಾರ್ಗವಾಗಿ ತೀರ್ಥಹಳ್ಳಿ, ಕವಿಶೈಲ ತಲುಪಬಹುದು. ಬೆಂಗಳೂರಿನಿಂದ ಕೂಡ ರೈಲುಮಾರ್ಗವಿದೆ.
ಬನ್ನಿ ಈ ತಕ್ಷಣವೇ ಒಂದು ಪ್ರವಾಸ ಯೋಜಿಸೋಣ ಕವಿಶೈಲಕ್ಕೆ .ಸುಂದರವಾದ ತಾಣವನ್ನು ಕಣ್ಮನ ತುಂಬಿಕೊಳ್ಳೋಣ
This comment has been removed by the author.
ReplyDelete