ಕಣ್ಣ ಹನಿ ಬರೆದಿದೆ ಕವನ. Kanna hani baredide kavana.... a poem by Kumar B Bagival
ಕಣ್ಣ ಹನಿಯೊಂದು ಕವನ
ಬರೆದಂತಿದೆ ಕೆನ್ನೆಯ ಮೇಲೆ.
ಹರಿದಿದೆ ಗಲ್ಲದುದ್ದಕೂ ವಾಚಿಸಿ.
ಬಣ್ಣ ಮಾಸುತಿದೆ ಹನಿಗೆ
ಕಾಣದ ಹೊದುಪಿನೊಳಗಿನ
ತೊಗಲು ಕಾಣುತಿದೆ ನೆಮ್ಮದಿಯನು ಯಾಚಿಸಿ.
ಮುಚ್ಚಿಟ್ಟ ಸತ್ಯದ ಹರಿವು
ಬಚ್ಚಿಡಲಾಗದ ಹೊರಹರಿವು
ಕೊಚ್ಚಿಹೋದಂತಿದೆ ಪದರ ಕಿಚ್ಚಾಯಿಸಿ.
ರೆಪ್ಪೆಯ ಮಧ್ಯದಲೆಷ್ಟೋ
ಕಪ್ಪೆ ಚಿಪ್ಪೊಳಗಿದ್ದ ಮುತ್ತುಗಳು
ಹರಡಿ ನಿಂತಿವೆ ತಡೆದು ಒಡೆಯದೆ ವಿವೇಚಿಸಿ.
ಮಂಜಾಗಿಸಿದ ಮುತ್ತುಗಳ
ರಾಶಿಯ ಮೇಲೆ ಕವನದ ಸಾಲುಗಳೇ
ಸಾಲಾಗಿ ಸಾರುತಿವೆ ಸರಧಿಗಾಗಿ ಯೋಚಿಸಿ.
ಜಾರಿದ ಕಂಬನಿ ಸೇರಿದೆ ಮರಳೊಳಗೆ
ಸುರಿದ ಹನಿಯದು ಬೆರೆತಿದೆ ಮಳೆಯೊಳಗೆ
ಕುರುಹು ಇಲ್ಲದ ಹಾಗಾಗಿದೆ ಸಮಯದ ಹಂಗನು ಯಾಚಿಸಿ.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment