ನಿನ್ನೊಂದಿಗೆ ನಾ ಕವಿಯೇ ಗೆಳತಿ? Am I poet with you my dear?
ನಿನ್ನೊಂದಿಗೆ ನಾ ಕವಿಯೇ ಗೆಳತಿ?
ನಿನ್ನೊಂದಿಗಿನ ಮಾತ ಸರಣಿ
ಯುಗದ ಮೌನ ಮುರಿದ ಅನುಭವ.
ಕವಿಯೋ ನಾ ನಿಘಂಟೋ ನಿನ್ನ ಸನಿಹದಲಿ
ಮಾತುಗಳ ಮಂಟಪವೇ ಕಟ್ಟಿಯಾಗಿದೆ ನಿನ್ನೆದುರಿಗೆ.
ಭುವಿಯೊಂದು ಹಸಿರುಟ್ಟಂತೆ ನೀನೊಟ್ಟಿಗಿದ್ದರೆ
ಬಿಲ್ಲೊಂದು ಬಣ್ಣ ಬಳಿದಂತೆ ನೀನೊಟ್ಟಿಗಿದ್ದರೆ.
ತಡೆಯಿಲ್ಲದ ಕಡಲಬ್ಬರ ಹೃದಯದಲಿ
ಬಿಡುವಿಲ್ಲದ ಆ ನೇಸರ ನಿನ್ನೊಂದಿಗಿನ ಸಮಯದಲಿ
ಹುಣ್ಣಿಮೆಯು ಹಾಲ ಚೆಲ್ಲಿದಂತೆ ನೀನೊಟ್ಟಿಗಿದ್ದರೆ
ಮಾತು ಬೆಳೆದ ಬರದಲಲ್ಲಲ್ಲಿ ನೆನಪ ತುಂತುರು ನೀನಿದ್ದರೆ
ಅಂದದ ಪ್ರಶ್ನೆಯಲ್ಲ ಅದು ಹೃದಯದಾಳದ ಪ್ರಶ್ನೆ.
ನಗುವಿನ ಪ್ರಶ್ನೆಯಲ್ಲ ಅದು ಭಾವನೆಯ ಹರಿವ ಪ್ರಶ್ನೆ.
ದೇಹದ ಪ್ರಶ್ನೆಯಲ್ಲ ಅದು ಮನಸಿನ ಪ್ರಶ್ನೆ.
ಮಾತಿಲ್ಲದ ಜಾಗದಲಿ ನಯನದಲಿ ತುಂಬಿದ ಮಾತು
ನೋಟವಿಲ್ಲದ ಜಾಗದಲಿ ಉಸಿರಿನಲಿ ತುಂಬಿದ ಮಾತು
ಇಷ್ಟಾದರು ನನಗೇ ಅರಿವಿಲ್ಲ ಮಾತದು ಹೇಗೆ
ಕಾಯ್ದುಕೊಂಡಿದೆ ನಿರಂತರತೆ ನಿನ್ನೊಂದಿಗೆ?
ಉತ್ತರ ನೀನೆ ಇರಬಹುದು ನೀ ಕೇಳು
ನಿನ್ನ ನಯನಕೆ ಅಣತಿ ದೂರದಲಿನ ಹೃದಯವನು
ಸನ್ನೆ ಮಾಡುತಿದೆ ನಾ ಹೇಳುವೆ ನೀ ಕೇಳೇ ಎಂದು.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment