ಕೆಳಗಿಳಿದ ಯುದ್ದ ನಳಿಗೆ !
ಕೆಳಗಿಳಿದ ಯುದ್ದ ನಳಿಗೆ !
ಯಾರ ಹೇರಿಕೆಯೋ ನೆರೆ ಹೊರಟಿದೆ
ಶೂರ ಸೈನಿಕರ ದಂಡು,
ಮೆರೆದಿವೆ ದೊರೆಯಾದೇಶದ ಗುಂಡುಗಳು
ವೈರಿದೇಶದ ಧರೆಯ ರಕ್ತವನುಂಡು,
ಕರಗಿವೆ ಬಹುಮಹಡಿಗಳು,ಕೊರಗಿವೆ ಬಾನಾಡಿಗಳು
ಸರಿದಿವೆ ಹಿಂದೆ ಬಲತುಂಬುವ ನೆಲಗಳು ,
ಬರೆದಿವೆ ರಕ್ತಸಿಕ್ತ ಪುಟಗಳು, ಕಮರಿವೆ ಕನಸುಗಳು,
ಸೊರಗಿವೆ ಜೀವಗಳು ತಮ್ಮವರ ಕಳೆದುಕೊಂಡು,
ಭಕ್ಷಕರೆದುರಿಗೆ ನಿಲ್ಲಲಣಿಯಾಗಿವೆ ದೇಶರಕ್ಷಕರ ದಂಡು
ಅಬಲೆ ನಾನಲ್ಲ ಸಬಲೆ ನಾ
ಪ್ರಶ್ನಿಸುವೆ ದಾಳಿಯನು ಎನ್ನುತ್ತಾ,
ಎದುರು ನಿಂತ ಸೈನಿಕನ ಬಂದೂಕಿನನಳಿಗೆಗೆ ,
ಎದುರು ನಿಂತ ಬಾಲಕಿ ಎದುರು
ಬಂದೂಕಿಗೂ ಗೊಂದಲ ತನ್ನ ಕೆಲಸದ ಬಗ್ಗೆ
ಕೊಲ್ಲುವುದು ನನ್ನ ಕೆಲಸವಾದರೂ ಕೊಲ್ಲಲಾಗುತಿಲ್ಲ
ನಿಲ್ಲಲಾರೆ ಬಾಲಕಿ ಎದುರು ನನ್ನದೇಕೆ ನಿರುತ್ತರ ಎಂದು.
ಸೈನಿಕನ ಕೈ ಸೋತಿವೆ
ಮಾನವೀಯತೆಯೆದುರು,
ಬಂದೂಕಿನ ನಳಿಗೆಯ ಬಾಯಿ ಮುಚ್ಚಿದೆ
ಬಾಲಕಿಯ ದಿಟ್ಟತನದೆದುರು.
ಕೊಳವೆಯೊಳಡಗಿದ ಗುಂಡಿನ
ಸದ್ದಡಗಿದೆ ಮುದ್ದಾದ ಭವಿತದೆದುರು.
ಬಾಲಕಿಯ ಮೌನಕೆ ಭೋರ್ಗರೆವ
ಕ್ಷಿಪಣಿ, ಯುದ್ದದ ಹಕ್ಕಿಗಳ ಹಾರಾಟವೂ
ಸಹಕರಿಸುವ ಸಂದೇಶವೊಂದು
ಸದ್ದಿಲ್ಲದೆ ಸಾರಿದೆ ಆಗಸದಿಂದ ಸಾಗರದಂಚಿಗೂ.
ಕಲ್ಲೆದೆಯ ಸೈನಿಕನೆದೆಯಲ್ಲಿ
ಹೂ ಹರಳಿದಂತಾ ಅನುಭವ
ರುಂಡ ಚಂಡಾಡುವ ಹಠವಿಲ್ಲಿ
ಕಂಡೂ ಕಾಣದಂತೆ ಮಟಮಾಯ,
ಬದುಕು ಕಟ್ಟಿಕೊಳಲು ಬಂದ ನಾನು
ಬದುಕ ಕಳಚಲು ಗುಂಡು ಸಿಡಿಸಬೇಕೆ?
ಸಿಡಿದಿವೆ ನೂರಾರು ಗುಂಡುಗಳು
ಸೈನಿಕನೆದೆಯೊಳಗೆ ಒಂದೇ ಸಮನೆ !
ರಣಾಂಗಣವಾಗಿದೆ ಹಣೆಬರಹದ ಮುನ್ನೋಟ
ಹಣಾಹಣಿ ಇಲ್ಲಿ ಒಳಿತು ಕೆಡುಕುಗಳಿಗೆ
ಕೊನೆಗೂ ಸೈನಿಕನ ಆಯ್ಕೆ ಶಸ್ತ್ರ ಒಪ್ಪಿಸುವ
ಶಸ್ತ್ರ ರಹಿತವಾದ ಹಿತ ನೆಲಕೆ.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment