ಜಂಗಮನ ಪರದೆಯ ಮೇಲೆ... Jangamna paradeya mele a poem by KUMAR B BAGIVAL
ಜಂಗಮನ ಪರದೆಯ ಮೇಲೆ...
ಬರೆದ ಅದೆಷ್ಟೋ ಹಾಳೆಗಳ ರಾಶಿ
ಹರಿದ ಸ್ಥಿತಿಯಲ್ಲಿವೆ,
ಹರಿಯದೇ ನಿಂತ ನೀರಿನ ಹಾಗೆ
ನೊರೆ ಭರಿತ ಕೊಳೆತು ನಾರಿ.
ಬರೆದಾಗಲೇ ಸರಿಪಡಿಸಿ
ಪ್ರಕಟಿಸಿದ್ದರೆ ಸಂಕಲನವೋ, ಗ್ರಂಥವೋ
ಆಗುತ್ತಿದ್ದವೇನೋ !
ಹರಡಿ ಹಳದಿಗಟ್ಟಿವೆ
ಉಸಿರಾಡಲೂ ಅವಕಾಶವಿಲ್ಲದೆ!
ಇಂಗಿಹೋಗಿವೆ ಅಕ್ಷರಗಳು
ಬರದ ನಾಡಿನ ರೈತನ ಕಂಗಳಂತೆ!
ಬರ ಬಂದು ಬಿರುಕುಬಿಟ್ಟ
ಕೆರೆಯೊಡಲಂತೆ ಬಾಯ್ಬಿಟ್ಟಿವೆ ಅಲ್ಲಲ್ಲಿ.!
ಸಾಕ್ಷಿಯಾಗಿವೆ ಸೊಳ್ಳೆ, ನೊಣ, ಜಿರಳೆಗಳ
ಸಂತಾನೋತ್ಪತ್ತಿಗೆ, ಹೆರಿಗೆ ಆಸ್ಪತ್ರೆಯ ಮುಂದಿನ
ಗರ್ಭಿಣಿಯಂತೆ ಸಾಲಾಗಿವೆ ಜಿರಳೆಗಳು
ಅಲ್ಲಲ್ಲಿ ಜಿರಳೆ ಮೊಟ್ಟೆಗಳ ಸಾಲು !
ಬರೆವ ಹುಚ್ಚಿಗೆ ಬರೆದರೆ ಹೀಗೇ ಆಗುವುದೇನೋ?
ಓದಿಸಿಕೊಳ್ಳುವ ಗಟ್ಟಿತನವಿಲ್ಲದಿದ್ದರೆ,
ಸಿದ್ದವಿಲ್ಲದಿದ್ದರೆ ಓದುವ ಮನಗಳು.
ಜಂಗಮನ ಪರದೆಯೊಂದು ಸಿಕ್ಕಿದೆ
ಹಾಳೆಯ ಬದಲು.
ಬರೆದಿರಿವೆ ಹಾಳೆಗಳ ಅಕ್ಷರಗಳನು
ಪರದೆಯ ಮೇಲೆ .
ಒಂದಷ್ಟು ಸಮಾದಾನವಿದೆ
ಓದುವವರಿರುವರಿಲ್ಲಿ ಚೂರುಪಾರು.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment