Kshamisi bidu omme.... Adu Naane. A beautiful article about Environmental Day. By : Kumar B Bagival
ನೀ ಕೊಟ್ಟ ವರವೇ ಅಂತಹದ್ದು ಮಾತು ಮಾತಿಗೂ ನಾ ಉಳಿಸುವೆ ನಿನ್ನ ಎನ್ನೋ ಎಷ್ಟೋ ಮಾತುಗಳು ನಿನ್ನಲ್ಲೇ ಮುಚ್ಚಿ ಹೋಗಿರಬೇಕು. ನಿನ್ನಷ್ಟೂ ಶಕ್ತಿಯನ್ನೂ ಇಂಚಿಂಚೂ ಬಳಸಿರುವ ನಾ ಉಳಿಸಿರುವುದೇನೂ ಇಲ್ಲ. ಇದ್ದಷ್ಟೂ ದಿನ ಬಳಸಿ ದಿನದೂದಡುವ ಜಯಮಾನದವನೇ ಆಗಿಬಿಟ್ಟಿದ್ದು ನನ್ನ ದುರುಳ ನಡೆ. ನಿನ್ನಿಂದಲೇ ಪಡೆದ ಎಲ್ಲವುಗಳ ಪ್ರಭಾರಿ ನಾನಾದರೂ , ನನ್ನವೇ ಇದೆಲ್ಲಾ ಎಂದು ಬಿಂಬಿಸಿಕೊಂಡು ಇಲ್ಲದ ಅಧಿಕಾರ ಚಲಾಯಿಸಿರುವೆ. ಅಷ್ಟು ತಾಳ್ಮೆಯಿಂದಿದ್ದ ನಿನ್ನನ್ನು ಉದ್ರೇಕಿಸಿದ್ದು ನಾನೇ. ನಿನ್ನಂತರಾಳದೆದೆಯ ಜೀವ ಹಿಂಡಿದವನೂ ನಾನೆ.
ನೀನೇನೇ ನನ್ನ ಮಗನಲ್ಲವೇ ಕುಡಿಯಲಿಬಿಡು ಅವನಿಲ್ಲದೆ ಮತ್ಯಾರಿಗೆಂದು ನೀಡಿದ ಎದೆಯಾಲನ್ನಷ್ಟೇ ಹೀರಲಿಲ್ಲ ನಾನು ರಕ್ತ ಸಮೇತನಾಗಿ ಹೀರಿ ನಿನ್ನಡಲ ಬರಿದಾಗಿಸಿದ್ದೂ ನಾನೇ. ನೀ ನೀಡಿದ ಹಾಸಿಗೆಯಿದ್ದಷ್ಟಕೇ ಕಾಲುಚಾಚಾದೆ ಕಾಲನೀಜಿ ಬದುಕ ಸಾಗಿಸೊ ಬರದಿ ಬಿದ್ದಿದೆ ಹಾಸಿಗೆಯಾಚೆ ಕಾಲು… ನೆತ್ತಿಯನೆಲ್ಲಾ ಬರಿದುಮಾಡಿದವ ನಾನೇ. ಕೋಟಿ ಕನಸುಗಳನ್ನೊತ್ತು ನನ್ನ ಮಿತಿಯನರಿಯದೇ ನಿನ್ನೊಡಲ ಹಸಿರ ಬಸಿರ ಕಡಿದು, ಉಸಿರಿಗೂ ಕಾಸಿಟ್ಟು ಪಡೆವ ಸ್ಥಿತಿಯನ್ನು ತಂದುಕೊಂಡಿದ್ದೂ ನಾನೇ. ನಗರೀಕರಣದ ಹೆಸರಿನಲ್ಲಿ ಅನಾಗರೀಕನಾಗಿ ವರ್ತಿಸುತ್ತಿರುವವ ಮೆರೆದೆತಾಪ್ನನು ನಿನ್ನ ಹಾಗೆ ಬಿಡದೆ ನಿನ್ನನೇ ಆಳುವೆನೆಂದೊರಟು ಮಣ್ಣು ಮುಕ್ಕಿದ್ದೂ,ಮಣ್ಣ ಕೆಳಗೆ ಸಿಕ್ಕಿದ್ದೂ,ಕೊಚ್ಚಿ ಹೋಗಿದ್ದೂಹೋಗಿದ್ದೂ, ಕೊಳೆತು ಹೋಗಿದ್ದೂ ನಾನೆ. ನನಗೆ ನೆನಪಿದೆ ನೀ ಮುನಿದರೆ ಅದರ ತಾಪ ಎಷ್ಟಿರುತ್ತೆಂದು, ಆದರೂ ಕೆಣಕಿ ಕೆಣಕಿ ನಿನ್ನೊಡನೆ ಆಟ ಆಡುತ್ತಿರುವವನೂ ನಾನೇ.. ಸುಂದರವಾಗಿದ್ದ ನನ್ನ ಸುತ್ತಲಿನ ನಿನ್ನ ಕುರೂಪಿ ಮಾಡಹೊರಟಿದ್ದೂ ನಾನೆ. ನಿನ್ನಂಗಳಕೆ ಕರಗದ ಪ್ಲಾಸ್ಟಿಕ್ ಸುರಿದದ್ದು ನಾನೆ, ಬೇಗ ಬೆಳೆ ಬೆಳೆವೆನಂಬ ಹುಂಬತನದಿಂದ ರಾಸಾಯನಿಕಗಳನ್ನ ತುಂಬಿದ್ದು ನಾನೆ, ಆಧುನಿಕತೆಯ ಹೆಸರಿನಲ್ಲಿ, ಕೈಗಾರಿಕೆಗಳು ಬೆಳೆದರೆ ನಾನೇ ಬೆಳೆವೆ ದೇಶ ಬೆಳೆದೀತು ಎಂಬ ಬರದಿ ದೇಶ ದೇಶಗಳೊಂದಿಗೆ ಜಿದ್ದಿಗೆ ಬಿದ್ದ ಬರದಲ್ಲಿ ಸುರಕ್ಷತೆ ಮರೆತು ತ್ಯಾಜ್ಯ ಬಿಟ್ಟು, ಹೊಗೆಯುಗುಳಿ, ವಿಷಾನಿಲ ಕಕ್ಕಿದ್ದು ನಾನೆ, ವೇಗದ ಹೆಸರಲ್ಲಿ ವಾಹನಗಳನ್ನೇರಿದೆ, ಏರಿದ್ದೇನೋ ಸರಿ ಮಿತಿಮೀರಿ ಮೆರೆದಿದ್ದು ನಾನೆ, ನಗರಗಳ ಹೆಸರಲ್ಲಿ ವನಸಿರಿಗಳಿಗೆ ಕೊಡಲಿ ಹಾಕಿದ್ದು ನಾನೆ, ಪ್ರವಾಸದ ಹೆಸರಲ್ಲಿ ಮೋಜಿಗಿಳಿದು ಕಾಡೊಳಗೆ ನುಗ್ಗಿ ಇಲ್ಲ ಸಲ್ಲದ್ದನ್ನೆಲ್ಲಾ ಅಲ್ಲೇ ಎಸೆದು ಬಿಟ್ಟಿದ್ದು ನಾನೆ, ಕಾಡು ಪ್ರಾಣಿಗಳನ್ನು ಬೇಟೆಯಾಡುವಾಗ ಅವುಗಳೂ ನನ್ನಷ್ಟೇ ಹಕ್ಕುಳ್ಳವು ಎಂಬುದನ್ನ ಮರೆತದ್ದೂ ನಾನೆ, ನಾ ಉಪಯೋಗಿಸುವ ನೆಲ ಜಲ ವಾಯು ಇತರೆಲ್ಲಾ ಜೀವಿಗಳಿಗೂ ಸೇರಿದೆ ಎಂಬದನ್ನು ಅರಿಯದಷ್ಟು ಮೂರ್ಖನೂ ನಾನೆ, ನನ್ನ ಮನೆ, ಮಡದಿ, ಮಕ್ಕಳು ಇವಷ್ಟು ಮಾತ್ರ ನನ್ನದು ಇಷ್ಟು ಶುಚಿಯಾಗಿದ್ದರೆ ಸಾಕು ಎಂದು ನನ್ನ ಮನೆಯ ಕಸವನ್ನು ಖಾಲಿ ಸೈಟಿಗೆ ಸುರಿದದ್ದೂ ನಾನೆ, ಜಾಗತಿಕ ತಾಪಮಾನ ಏರಿಕೆಗೆ ಕಾರಣ ನಾನೆ. ಹಿಮಪರ್ವತದ ಕರಗುವಿಕೆಗೆ ಕಾರಣ ನಾನೆ. ಅಕಾಲಿಕ, ಅನಾಮದೇಯ, ಅಸಾಮಾನ್ಯ, ಅನಪೇಕ್ಷಿತ, ಅಪ್ರಕಟಿತ, ವಾತಾವರಣ ಬದಲಾವಣೆಗೆ ಹೊಣೆ ನಾನೆ. ಗರ್ಬಿಣಿ ಹೆಣ್ಣಾನೆಗೆ ಹಣ್ಣೊಳಗೆ ಮದ್ದಿಟ್ಟು ಮಜಾ ನೋಡಿದ ಪಾಪಿಯೂ ನಾನೆ. ಕಡಲ ತಡಿವರೆಗೂ ಅಡಿಯನಿಟ್ಟು ಕೊರತಕ್ಕೆ ಹೆದರಿ ರಕ್ಷಿಸಿ ಎಂದು ಮೊರೆ ಇಡುತ್ತಿರುವವನೂ ನಾನೆ. ಮರಗಳನ್ನ ಕಡಿದು ಮನೆಗಳನ್ನು ಮಾಡಿದ್ದೂ ನಾನೆ, ಮಳೆಗೆ ಮನೆ ಕೊಚ್ಚಿಕೊಂಡೋಯ್ತು ಎಂದು ಅಳುತ್ತಿರುವವನೂ ನಾನೆ. ಹೊಗೆ ಬಿಟ್ಟವನೂ, ಬಿಟ್ಟ ಹೊಗೆಯಿಂದ ಎಲ್ಲವೂ ಕೆಟ್ಟೋಯ್ತು ಎಂದು ಬೊಬ್ಬೆ ಹೊಡೆಯುತ್ತಿರುವವನೂ ನಾನೆ. ಅಡವಿಯೊಳಗೆ ಆಡಿಕೊಂಡಿರುವ ಜೀವಿಗಳನ್ನು ಅನಾವಶ್ಯಕ, ಅನಗತ್ಯ ಬೇಟೆ ಆಡಿದವನು, ಜಲಮಲಿನ ಮಾಡಿ, ಕೆರೆ ತೊರೆ ಮುಚ್ಚಿ ಜಲಚರಗಳನ್ನು ಕೊಂದು, ನೀರಿಗಾಗಿ ಹಾತೊರೆಯುತ್ತಿರುವವ ನಾನೆ. ಇಳೆಯ ತಂಪನ್ನು ಉಳಿಸದೆ ಬಿಸಿಲ, ಸೆಖೆಗೆ ಹೆದರಿ ಶೀತಕ್ಕೆ ಶೀತಕ ತಂದು, ಓಜೋನ್ ತೂತಿಸಿ ಮತ್ತೆ ಬಿಸಿಲ ಜಳ, ಭೂಮಿ ಅವಗೆಂಪು ಕೊಳ, ನೇರಳಾತೀತ ನಳ ಎಂದು ಹೇಳಿಕೊಂಡು ತಿರುಗುತ್ತಿರುವವ ನಾನೆ. ಅಂತರ್ಜಾಲಕ್ಕೆಂದು ಸೂಕ್ಷ್ಮತೆಯ ಅರಿಯದೆ ಸೂಕ್ಷ್ಮ ತರಂಗದ ಎತೇಚ್ಛ ಬಳಕೆ ಮಾಡಿ ಹಕ್ಕಿಗಳಿಗೆ ಜೀವಕ್ಕೆ ಕುತ್ತು ತಂದ ಜೀವಾಂತಕನೂ ನಾನೆ. ಹರ್ಷದ ಹೆಸರಲ್ಲಿ, ದೀಪಾವಳಿಯ ಹೆಸರಲ್ಲಿ ಸಿಡಿಮದ್ದುಗಳ ಸಿಡಿಸಿ ಪ್ರಾಣಿ ಪಕ್ಷಿಗಳು ತಡಬಡಾಯಿಸುವಂತೆ ಮಾಡಿದ್ದೂ, ಪ್ರಾಣವಾಯುವನ್ನ ಪ್ರಧೂಷಣೆ ಮಾಡಿದ್ದೂ ನಾನೆ. ಇಷ್ಟೆಲ್ಲಕ್ಕೂ ಕಾರಣನಾದ ನನ್ನನ್ನು ಕ್ಷಮಿಸಿಬಿಡೊಮ್ಮೆ . ಇನ್ನೆಂದೂ ನಾ ಅಡವಿಯ ಉಡುಗೆಗೆ ಕೈ ಹಾಕಲಾರೆ. ಜಲ ಮೂಲಕ್ಕೆ ಕಂಟಕವಾಗಲಾರೆ. ಕಾಡ ಕಡಿದು ನಾಡ ಮಾಡಲಾರೆ. ನಗರೀಕರಣದೆಸರಲ್ಲಿ ಅನಾಗರೀಕನಾಗಲಾರೆ. ಮೋಜು ಮಜಕ್ಕಾಗಿ ಜೀವ ವೈವಿಧ್ಯತೆಗೆ ದಕ್ಕೆ ತರಲಾರೆ. ಬೆಟ್ಟ ಕಡಿದು ಅಟ್ಟ ಮಾಡಲಾರೆ. ಕೈಗಾರಿಕೆ ಹೆಸರಲ್ಲಿ ,ವಿಶ್ವದಲಿ ಮುಂದೋಡುವ ಬರದಲ್ಲಿ ಪರಿಸರ ಪ್ರಜ್ಞೆ ಮರೆಯಲಾರೆ. ನನ್ನ ಮನೆ ಮಾತ್ರ ನನ್ನದಲ್ಲ ವಿಶ್ವವೇ ನನ್ನದು ಎಂಬುದನ್ನೂ ಮರೆಯಲಾರೆ. ನನ್ನಂತಯೇ ಇತರ ಜೀವಿಗಳು, ಅವುಗಳಿಗೂ ನನ್ನಂತೆಯೇ ಬದುಕುವ ಹಕ್ಕಿದೆ, ಸಮತೋಲಿತ ಪರಿಸರ ಪ್ರಜ್ಞೆಯಿಂದಲೇ ಬದುಕುವೆ. ನಡೆದು ಸಾಗುವಷ್ಟು ದೂರಕೆ ನಡೆದೇ ಸಾಗುವೆ, ದೂರ ದಾರಿಗೆ ಸಾಮೂಹಿಕ ಸಾರಿಗೆಯನೆ ನೆಚ್ಚುವೆ. ನೆಲ ಜಲಕ್ಕೆ ಬೆಲೆ ಕೊಡುವೆ. ನೀರಿರಲಿ ನಾರಿರಲಿ, ಖನಿಜ ಬಣ್ಣದ್ದೋ ಕಪ್ಪಿನದೋ ಮಿತಿಯಲೇ ಬಳಸುವೆ. ಅಗತ್ಯ ಬಿದ್ದಷ್ಟು ಮಾತ್ರ ನೀರ ಬಳಸಿ ಹನಿ ಹನಿಗೂ ದ್ವನಿಯಾಗುವೆ. ಅಂದು ಕಡಿದೊಂದು ಮರದ ಬದಲಿ ಹತ್ತು ಗಿಡವ ನೆಟ್ಟು ಬೆಳೆಸುವೆ. ಅಂದು ತೆಗೆದಂತರಗಂಗೆಯ ಬದಲಿಗೆ ಜಲಪೂರಣ ಮಾಡುವೆ. ಜೀವಿಗಳೊದೆಗೈದ ನಾ ಇಂದು ಜೈವವೈವಿದ್ಯತೆಯ ಸಂಭ್ರಮಿಸುವೆ. ಇದು ಶಪತವು ನಾ ಕೊಟ್ಟ ಭಾಷೆ ನಿನಗೆ. ಕ್ಷಮಿಸು ಬಿಡು ಒಮ್ಮೆ ಅದು ನಾನೆ.
ರಚನೆ : ಕುಮಾರ್ ಬಿ ಬಾಗೀವಾಳ್.
Comments
Post a Comment