ಹಾಗೆ ಒಂದರಗಳಿಗೆ ನಿಮ್ಮೊಂದಿಗೆ... ಜೀವನದ ಅತ್ಯುತ್ತಮ ಗಳಿಗೆ ಯಾವುದು? An article about which is our best monent in our life? By Kumar B Bagival.
ಹಾಗೆ ಒಂದರಗಳಿಗೆ ನಿಮ್ಮೊಂದಿಗೆ...
ಜೀವನದ ಅತ್ಯುತ್ತಮ ಗಳಿಗೆ ಯಾವುದು?
ಜೀವನದ ಅತ್ಯುತ್ತಮ ಗಳಿಗೆ ಯಾವುದೆಂದು ಯಾರಾದರೊಬ್ಬರನ್ನು ಕೇಳಿದರೆ ವೈವಿದ್ಯಮಯ ಉತ್ತರಗಳು ದೊರೆಯಬಹುದು. ಗಳಿಗೆಯೊಂದು ಉತ್ತಮ ಅತ್ಯುತ್ತಮವಾಗಲು ಹಲವರಿಗೆ ಹಲವು ಕಾರಣಗಳಿರುತ್ತವೆ. ಆ ಗಳಿಗೆಗಳು ಸಿಹಿಗಳಿಗೆಗಳೇ ಆಗಿರುತ್ತವೆ ಎಂಬುದು ಮಾತ್ರ ಸರ್ವಸಮ್ಮತ. ಯರೊಟ್ಟಿಗಿದ್ದರೆ ಹಿತ, ಅತ್ಯುತ್ತಮ ಎಂಬದು ಕೂಡ ಹಾಗೆಯೆ. ಅಂದ ಹಾಗೆ ಆ ಅತ್ಯುತ್ತಮ ಗಳಿಗೆ ಅಂದರೆ ಏನು ಎಂದೇನಾದರೂ ಪ್ರಶ್ನೆ ಬಂದರೆ ಎಲ್ಲರ ಉತ್ತರ ಒಂದೆ ಅದು ಸಿದ್ಧ ಉತ್ತರ ಸಿಹಿಗಳಿಗೆಯೇ ಆಗಿರಬೇಕು ಎಂಬುದು. ಆ ಗಳಿಗೆ ಹಿತಕರವಾಗಿರಬೇಕು, ಖುಷಿಯಾಗಿರಬೇಕು , ಅಥವಾ ಬದುಕಿಗೆ ಮುನ್ನುಡಿಯಂತಿರಬೇಕು,ಅಥವಾ ಬದುಕಿನ ಒಂದು ಉತ್ತಮ ತಿರುವಾಗಿರಬೇಕು ಹೀಗೆ… ಒಟ್ಟಾರೆ ಮಹತ್ವದ್ದೇ ಆಗಿರಬೇಕು. ಯೋಧನೊಬ್ಬನಿಗೆ ನಿನ್ನ ಜೀವನದ ಅತ್ಯುತ್ತಮ ಗಳಿಗೆ ಯಾವುದೆಂದು ಕೇಳಿದರೆ ಅವನಿಂದ ಬರಬಹುದಾದ ಉತ್ತರ ನಿರೀಕ್ಷಿತವೇ ಆಗಿರುತ್ತದೆ. ಅದು ಆತ ತನ್ನ ತಾಯ್ನೆಲದ ಪಹರೆಗೆ ನಿಂತಾಗ, ತಾಯ್ನೆಲಕ್ಕೆ ವೈರಿಗಳಿಂದ ಅಪಾಯ ಬಂದಾಗ ಅಪಾಯ ತಂದೊಡ್ಡಿದ ವೈರಯ ರುಂಡ ಚಂಡಾಡಿದ ಗಳಿಗೆಯೇ ಅತ್ಯುತ್ತಮ ಗಳಿಗೆ ಎಂದು.
ಮಗುವಿಗೆ ಕೇಳಿದರೆ ಅದರ ಉತ್ತರವೂ ನಿರೀಕ್ಷಿತವೇ ಪೋಷಕರು ತನಗೆ ತನು ಅಪೇಕ್ಷಿಸಿದ್ದನ್ನು ಕೊಡಿಸಿದಾಗ ಎಂಬುದಾಗಿರುತ್ತದೆ.
ಒಬ್ಬ ಕ್ರೀಡಾಪಟುವಿಗೆ ಕೇಳಿದರೆ ಜೀವಮಾನ ಪೂರ್ತಿ ತಾಯ್ನಾಡಿಗೆ ಕೀರ್ತಿ ತರಲೋಸುಗ ಬೆವರಿಳಿಸಿದ ಮೇಲೆ ವಿಶ್ವ ಕ್ರೀಡಾ ರಂಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿ, ತಾಯ್ನಾಡ ಬಾವುಟನ್ನು ಎಲ್ಲ ದೇಶಗಳಿಗೂ ಮೇಲೇರುವುದನ್ನು ಕಣ್ತುಂಬಿಕೊಂಡ ಗಳಿಗೆ ಎಂಬುದನ್ನ ಒಪ್ಪಲೇಬೇಕು. ರೈತನೊಬ್ಬನಿಗೆ ಕೇಳಿದರೆ ತಾನು ನಂಬಿದ ಭೂತಾಯಿ ವರವ ಕೊಡುವ ಗಳಿಗೆ, ಬೆವರ ಸುರಿಸಿ ಭೂತಾಯಿಯನ್ನ ಹದಗೊಳಿಸಿ, ಸಿಂಗರಿಸಿ,ಉತ್ತು ಬಿತ್ತಿದ ಬೀಜವೊಂದು ಸಾವಿರವಾಗಿ, ಹೊಲದ ತುಂಬಾ ಫಸಲಾಗಿ, ಫಸಲು ಕೈಗೆ ಬಂದು, ಬೆಳೆಗೊಂದು ಒಳ್ಳೆ ಬೆಲೆ ಸಿಕ್ಕಿ,ಆ ಬೆಳೆಯ ಬೆಲೆ ತಾನು ಬೆಳೆಯಲು ಮಾಡಿದ ಸಾಲ ಮಾಡಿದ ಸಾಲವನ್ನ ತೀರಿಸಿ ತನಗೊಂದಿಷ್ಟು ಇಟ್ಟುಕೊಳ್ಳುವ ಗಳಿಗೆಯೇ ಅತ್ಯುತ್ತಮ ಗಳಿಗೆ ಎಂಬ ಉತ್ತರ ಸಿಗುತ್ತದೆ. ವೈದ್ಯರಿಗೆ ತನ್ನನ್ನೇ ನಂಬಿ ಬಂದ ರೋಗಿಯೊಬ್ಬನನ್ನು ಉಳಿಸಿದ ಗಳಿಗೆಯಾದರೆ, ಶಿಕ್ಷಕನಿಗೆ ವರ್ಷವಿಡೀ ಬೋಧಿಸಿ ವರ್ಷದ ಕೊನೆಯಲ್ಲಿ ನಡೆದ ಪರೀಕ್ಷೆಯಲ್ಲಿ ತನ್ನ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾದ ಫಲಿತಾಂಶ ಪಡೆದ ಗಳಿಗೆ, ವಿದ್ಯಾರ್ಥಿಗೆ ಬರೆದ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದ ಗಳಿಗೆ. ಹೆಣ್ಣಿಗೆ ನವಮಾಸ ಹೊತ್ತು ನೋವಿನ ಬೇನೆಯಲ್ಲೂ ಹೆತ್ತು ಅಮ್ಮನಾದ ಗಳಿಗೆಯಾದರೆ ಗಂಡಿಗೆ ಅಪ್ಪನಾಗಿದ್ದಲ್ಲದೆ ಅಪ್ಪನ ಜವಾಬ್ದಾರಿಯನ್ನು ನಿಭಾಯಿಸಿ ಯಶಸ್ವಿಯಾದ ಗಳಿಗೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಗಳಿಗೆ ಅತ್ಯುತ್ತಮ. ಏಕಾಂಗಿಗೆ ಏಕಾಂತವಿದ್ದಷ್ಟೂ ಗಳಿಗೆ ಅತ್ಯುತ್ತಮವೇ.
ಸಾಮಾನ್ಯವಾಗಿ ಜೀವನದ ಅತ್ಯುತ್ತಮ ಗಳಿಗೆ ಯಾವುದು ಎಂದರೆ ಆ ವ್ಯಕ್ತಿಗೆ ತನ್ನನ್ನು ತಾನು ಯಾರು ಎಂಬದರ ಅರಿವನ್ನು ಮೂಡಿಸುವ ಗಳಿಗೆಯೇ ಅತ್ಯುತ್ತಮ ಗಳಿಗೆ ಎನ್ನಬಹುದು. ತನ್ನನ್ನ ತಾನು ವಿವಿಧ ಆಯಾಮಗಳ ಹೊರತಾಗಿಯೂ ತನ್ನ ನಿಜ ಸ್ವರೂಪ ಏನು ಎಂಬುದನ್ನು ತಿಳಿವ ಗಳಿಗೆ,ತನ್ನ ನಿಜ ಸಾಮರ್ಥ್ಯವನ್ನು ತಿಳಿವ ಗಳಿಗೆ, ತನ್ನನ್ನು ತಾನು ವಿವಿಧ ಪಾತ್ರಗಳಿಗೆ ಒರೆಹಚ್ಚಿ ನೋಡಿಕೊಂಡು ತಾನು ಯಾರು ಎಂಬುದನ್ನ ಅರಿತುಕೊಳ್ಳಲು ಸಹಕರಿಸುವ ಗಳಿಗೆ, ಹಾಗೆ ಮೌನವಾಗಿ ಯಾವ ಯೋಚನೆಯೂ ಇರದೆ ಒಬ್ಬನೇ ಕುಳಿತಾಗ ನಿನ್ನ ವಿವಿಧ ಆಯಾಮಗಳನ್ನು ನಿನಗೆ ದರ್ಶನ ಮಾಡಿಸುವ ಗಳಿಗೆಯೇ ಅತ್ಯುತ್ತಮ ಗಳಿಗೆ. ಸಿಕ್ಕ ಅವಕಾಶಗಳನ್ನು ಸೆಳೆದು ತನ್ನದಾಗಿಸಿಕೊಳ್ಳುವ ಗಳಿಗೆ ಹೀಗೆ ಹತ್ತು ಹಲವುಗಳ ಮದ್ಯೆ ತನ್ನನ್ನ ತಾನರಿವ ಗಳಿಗೆಗೆ ಅತ್ಯುತ್ತಮ ಗಳಿಗೆಗಳಲ್ಲಿ ಮೊದಲ ಸ್ಥಾನ.
ಯಾವುದೇ ಗಳಿಗೆ ಇರಲಿ ಜೀವನದಲ್ಲಿ ತೃಪ್ತಿತರಲಿ. ಎಲ್ಲರಿಗೂ ಅವರವರ ಜೀವನದ ಅತ್ಯುತ್ತಮ ಗಳಿಗೆ ಸಿಗುವಂತಾಗಲಿ.
Comments
Post a Comment