ಅಸ್ಪಷ್ಟ ನಿಲುವಿನ ಹುಡುಗಿ...
ಅಸ್ಪಷ್ಟ ನಿಲುವಿನ ಹುಡುಗಿ...
ಹುಡುಗಿಯೋರ್ವಳ ಕೀರಲು ದ್ವನಿಯಲ್ಲಿ ದ್ವಂದ್ವ
ಯಾವ ಹಿಂಸೆಯೋ ಏನೋ
ರಕ್ಷಣೆಗಾಗಿನ ಹಪಾಹಪಿ,
ತಾನೇ ತೋಡಿದ ಗುಂಡಿಯೊಳಗೆನ ವಾಸ
ಅರಮನೆಯೋ ಸೆರೆಮನೆಯೋ ತಿಳಿಯದಾಗಿದೆ
ಸ್ವಲ್ಪ ಹಿತವೆನಿಸಿದರೂ ಅಹಿತವೇ ಹೆಚ್ಚಾದಂತಿದೆ
ದೂರದಲ್ಲೆಲ್ಲೋ ಪ್ರಸವ ವೇದನೆ ಅನುಭವಿಸುತ್ತಿರುವ
ಹೆಂಗಸಿನ ಹಾಗೆ ನೋವಿನಲ್ಲಿಯೂ ಸುಖ.
ತಾನೇ ನೇಯ್ದ ಬಲೆಯೊಳಗಿನ ಜೇಡನ ಹಾಗೆ
ಗೊತ್ತಿದ್ದೋ ಗೊತ್ತಿಲ್ಲದೆಯೋ ಆಯ್ದುಕೊಂಡ ದಾರಿ
ಹೂವಾಗ ಬಹುದೆಂಬ ಹಂಬಲ
ಆದರೆ ನಡೆದಷ್ಟಕ್ಕೂ ಸಿಗುತ್ತಿಲ್ಲ ಇನ್ನೆಷ್ಟಿದೆಯೋ
ನಡೆಯಬೇಕಾದದ್ದೆಂಬ ಅದೃಶ್ಯ ಅಸ್ಪಷ್ಟದ ಮುನ್ಸೂಚನೆ
ಸೂಜಿ ಚಿನ್ನದ್ದಾದರೂ ಇಟ್ಟುಕೊಂಡಷ್ಟು ಆಕಸ್ಮಿಕವಾಗಿಯಾದರೂ
ಚುಚ್ಚಿ ಬಿಡಬಹುದೆಂಬ ಎಚ್ಚರಿಕೆಯ ಬದುಕು.
ಮರುಬರುವೆನೆಂದರೆ ಬಹುದೂರ ಸಾಗಿಯಾಗಿದೆ
ಮುಂದುವರೆಯೋಣವೆಂದರೆ ಅಸ್ಪಷ್ಟ ದಾರಿ
ಒಗ್ಗಿದೂರಿನಿಂದ ಬಗ್ಗಿನಡೆಯಬೇಕಾದ ಊರಿಗೆ ಪಯಣ
ತಾನೇನೇ ಆದರೂ ತನ್ನನ್ನೇ ಕಳಕೊಂಡ ತೊಳಲಾಟ
ಸಮರ ಮನದೊಳಗೆ ಸಾವಿರ ಸಾವಿರ
ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ.
ಉತ್ತರಗಳ ಆಯ್ಕೆಯ ಗೊಂದಲದ ದ್ವಂದ್ವ ಹುಡುಗಿಗೆ.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment