ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್. India's Dream man Dr.APJ Abdul Kalam : an article by Kumar B Bagival

ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್.



ಕನಸೊಂದರ ಕಾಲುದಾರಿ ಹೆದ್ದಾರಿಯಾದ ಪರಿ…

"ನೀನು ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಆ ಸೂರ್ಯನಂತೆ ದಹಿಸಬೇಕು"

- ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್

ನಿಷ್ಠೆ, ಪರಿಶ್ರಮ,ತೊಡಗಿಸಿಕೊಳ್ಳುವಿಕೆ,ಏಕಾಗ್ರತೆ, ತನ್ನಲ್ಲಿನ ಆತ್ಮವಿಶ್ವಾಸ, ಕನಸು…. ಇದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಆ ಸಾಧಕನನ್ನ ಸ್ಥಾನ ತಾನಾಗಿಯೇ ಹುಡುಕಿಕೊಂಡು ಬರುತ್ತದೆ,ಹೆಸರು ನೂರ್ಕಾಲ ಜಗಜನಿತವಾಗುತ್ತದೆ. ಹಾಗು ಯಶಸ್ಸು ಸಿಕ್ಕ ನಂತರವೂ ತನ್ನತನವನ್ನು ಬಿಡದಿದ್ದರಂತು ಸಾಧನೆಗೊಂದು ಸಾರ್ಥಕತೆ ಸಿಗುತ್ತದೆ. ಅಂದ ಹಾಗೆ ಹೀಗೆಲ್ಲಾ ಮಾತನಾಡುವುದು ಕೇವಲ ಮಾತಾಗಿರುವುದಿಲ್ಲ ಅದು ಸಾಧಕರನ್ನ ನೆನೆಯುವುದಾಗಿರುತ್ತದೆ ಹಾಗು ಅವರ ಹಾದಿಯನ್ನು ನಾವೂ ಹಿಡಿಯಬಹುದಾದ ಮಾರ್ಗವಾಗಿರುತ್ತದೆ.


ತಮಿಳುನಾಡಿನ ರಾಮೇಶ್ವರಂನ ಕಡಲ ಕಿನಾರೆಯ ಮೇಲೆ ನಡೆದಾಡುತ್ತಿದ್ದ ಹುಡುಗನೊಬ್ಬನ ಪೂರ್ವಜರು ಶ್ರೀಮಂತರಾಗಿದ್ದರೂ ವ್ಯವಹಾರದಲ್ಲಾದ ನಷ್ಟದ ಪರಿಣಾಮ ಬಡತನ ಬಂದೊದಗಿದಾಗ ಜೀವನ ನಿರ್ವಹಣೆಗೆ ತನ್ನ ಪೋಷಕರಿಗೆ ನೆರವಾಗಲೋಸುಗ ದಿನಪತ್ರಿಕೆ ಹಂಚುತ್ತಾ ಕಷ್ಟದ ದಿನಗಳನ್ನು ದೂಡುತ್ತಾ ತನ್ನ ಬಾಲ್ಯದಲ್ಲೇ ಹೆಚ್ಚನ ಜವಾಬ್ದಾರಿಯ ಅರಿವನ್ನು ಹೊಂದಿರುತ್ತಾನೆ. ಆ ದಿನ ಯಾರಿಗೂ ತಿಳಿದಿರಲಿಲ್ಲ ಅದೇ ಬಾಲಕ ಭಾರತದ ಕ್ಷಿಪಣಿ ಲೋಕದ ಜವಾಬ್ದಾರಿ ಹೊರುತ್ತಾನೆಂದು, ಭಾರತದ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ತೋರಿಸುತ್ತಾನೆಂದು, ಅಷ್ಷೇ ಏಕೆ ಭಾರತದ ಪ್ರಥಮಪ್ರಜೆಯಾಗಿ ದೇಶದ ಜವಾಬ್ದಾರಿಯನ್ನೇ ಹೊರುತ್ತಾನೆಂದು.

ಆ ಬಾಲಕನೇ ನಮ್ನ ನಿಮ್ಮೆಲ್ಲರ ಅಚ್ಚುಮೆಚ್ಚಿನ ಮೇಷ್ಟ್ರು, ಮಂದಸ್ಮಿತ, ಮಕ್ಕಳೊಂದಿಗಿನ ಮಗು, ದೇಶವಾಸಿಗಳ ಪ್ರಿಯ ಮುತ್ಸದ್ದಿ, ಮಿಸೈಲ್ ಮ್ಯಾನ್ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್.


ಮಿಸೈಲ್ ಮ್ಯಾನ್ ಆಗಿ ಕಲಾಮ್ ಕಾಣಿಕೆ


ಅವನ ಜೀವನದಲ್ಲಿ ಎಲ್ಲವೂ ಉತ್ಕೃಷ್ಟವಾದವುಗಳೇ. ಮೊದಮೊದಲಿಗೆ ಓದಿನಲ್ಲಿ ಅಷ್ಟೇನೂ ಚುರುಕಿಲ್ಲದಿದ್ದರೂ ಸ್ವಭಾವ, ತಾಳ್ಮೆ, ವಿನಯತೆ, ಆತ್ಮವಿಶ್ವಾಸದಲ್ಲಿ ಮುಂದು ಆ ಬಾಲಕ. ತನ್ನ ಕಠಿಣ ಪರಿಶ್ರಮ, ತನ್ನನ್ನ ತಾನು ಓದಿಗೆ ತೊಡಗಿಸಿಕೊಳ್ಳುತ್ತಿದ್ದ ಪರಿ ಮಾತ್ರ ಎಂದಾದರೊಂದು ದಿನ ಈ ಹುಡುಗ ಸಾಧನೆಯ ಶಿಖರವನ್ನು ಏರಿಯೇ ತೀರುತ್ತಾನೆ ಎನ್ನವಂತಿತ್ತು. ಗಣಿತದಲ್ಲಿನ ಆಸಕ್ತಿ, ಮತ್ತು ಅರ್ಜಿಸಿಕೊಳ್ಳುವಿಕೆಯಲ್ಲಿ ಸದಾ ಮುಂದು. ರಾಮನಾಥ ಪುರಂನಲ್ಲಿ ತನ್ನ ಹೈಸ್ಕೂಲ್ ಶಿಕ್ಷಣವನ್ನು ಪಡೆದ ಹುಡುಗ ಮುಂದೆ ಕಾಲೇಜು ಶಿಕ್ಷಣಕ್ಕಾಗಿ ತಿರುಚನಾಪಳ್ಳಿಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪದವಿಪಡೆಯುತ್ತಾನೆ. ನಂತರ ಏರೋಸ್ಪೇಸ್ ಇಂಜಿನಿಯರಿಂಗ್ ಅನ್ನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಪಡೆದುಕೊಳ್ಳುತ್ತಾನೆ ಎಂದರೆ ಅವನ ಸಾಧನೆಯ ದಾರಿ ಎಲ್ಲರಿಗೂ ಮಾದರಿಯಾಗಬೇಕು. ಅಲ್ಲಿಂದ ಶುರುವಾದ ಬಾಲಕನ ಯಶೋಮಾರ್ಗದ ಪ್ರತೀ ಹೆಜ್ಜೆಯೂ ಅವಿಸ್ಮರಣೀಯ ಹಾಗು ಆಧರಣೀಯ. ಪದವಿಯ ನಂತರ ದೇಶದ ಹೆಮ್ಮೆ ಡಿ.ಆರ್.ಡಿ.ಒ. ನಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ವಿಜ್ಞಾನಿಯಾಗಿ ಭಾರತದ ಸೇವೆಗೆ ಸೇರುತ್ತಾನೆಂದರೆ ಅವನ ಬಗ್ಗೆ ಅವನಿಗಿದ್ದ ಅಛಲವಾದ ನಂಬಿಕೆ ಬಿಟ್ಟರೆ ಬೇರೇನಿರಲಾರದು. ಡಾ|| ವಿಕ್ರಮ್ ಸಾರಾಭಾಯಿ ಅವರ ಮಾರ್ಗದಶನವನ್ನು ಪಡೆದು ಡಿ.ಆರ್.ಡಿ.ಒ. ನಿಂದ ಇಸ್ರೋಗೆ ವರ್ಗಾವಣೆಗೊಂಡು ಮಾಡಿದ ಸಾಧನೆ ಅತ್ಯದ್ಭುತ. ಕಡಲ ತೀರದಲ್ಲಿ ಪೇಪರ್ ಮಾರುತ್ತಾ , ಪೇಪರ್ ರಾಕೆಟ್ ಎಸೆಯುತ್ತಾ ಆಟವಾಡುತ್ತಿದ್ದ ಹುಡುಗನ ನಡೆ ಈಗ ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಳಕ್ಕೆ ಬಂದು ನಿಂತಿದೆ ಇದು ಅಂತಿಂತಾ ಸಾಧನೆಯಲ್ಲ. ಅಷ್ಟೇ ಅಲ್ಲ ಭಾರತದ ನೈಜ ರಾಕೆಟ್ ಶಕ್ತಿಯ ಅನಾವರಣದವರೆಗೂ ಬೆಳೆದು ನಿಂತಿದೆ. ಜುಲೈ 1980 ರಲ್ಲಿ ಭಾರತದ ಪ್ರಥಮ ಉಪಗ್ರಹ ಉಡ್ಡಯನ ವಾಹನ ಎಸ್.ಎಲ್.ವಿ -3 ಸಿದ್ಧಪಡಿಸಿ ರೋಹಿಣಿ ಉಪಗ್ರಹವನ್ನು ಭೂ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಸಿದ ಪರಿ ಅವರ ನೈಪುಣ್ಯತೆಗೆ ಸಾಕ್ಷಿ.

ಅಷ್ಟೇ ಅಲ್ಲದೆ ಭಾರತದ ಸ್ವತಂತ್ರ ಉಡ್ಡಯನ ವಾಹನಗಳಾದ ಪೋಲಾರ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್ ಹಾಗು ಎಸ್. ಎಲ್. ವಿ -3 ಗಳ ಅಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಕೂಡ ಇವರದೇ ಆಗಿದೆ. ಇದರ ಯಶಸ್ಸಿನ ತರುವಾಯ ಪ್ರಾಜೆಕ್ಟ್ ಡೆವಿಲ್ ಹಾಗೂ ಪ್ರಾಜೆಕ್ಟ್ ವೈಲೆಂಟ್ ಕ್ಷಿಪಣಿ ಅಭಿವೃದ್ಧಿಗಾಗಿ ಶ್ರಮಿಸಿದರು.

ನಂತರದಲ್ಲಿ ಭಾರತ ಸರ್ಕಾರ ಇವರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ 1989ರಲ್ಲಿ ಕ್ಷಿಪಣಿ ಕಾರ್ಯಯೋಜನೆಗಳನ್ನು ಡಾ|| ಕಲಾಮ್ ಅವರ ನಿರ್ದೇಶನದಂತೆ ಪ್ರಾರಂಬಿಸಲಾಗಿ ಭಾರತಕ್ಕೊಂದು ಬಲ ಬಂದಂತಾಗುತ್ತದೆ. ಅಂದಿನ ಕೇಂದ್ರ ರಕ್ಷಣಾ ಸಚಿವರಾಗಿದ್ದ ಆರ್ ವೆಂಕಟರಾಮನ್ ಅವರ ಸಹಯೋಗದೊಂದಿಗೆ ಭಾರತದ ಅತ್ಯುತ್ತಮ‌ ಯೋಜನೆಗಳಲ್ಲಿ ಒಂದಾದ ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವೆಲಪ್ಮೆಂಟ್ ಪ್ರೋಗ್ರಾಂನ ಚೀಫ್ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸಾಕಷ್ಟು ಕ್ಷಿಪಣಿಗಳ ಅಭಿವೃದ್ಧಿಗೆ ಕಾರಣಕರ್ತರಾಗುತ್ತಾರೆ. ಅವುಗಳಲ್ಲಿ ಇಂದಿಗೂ ಪರಿಚಿತ ಖಂಡಾಂತರ ಕ್ಷಿಪಣಿಗಳಾದ  'ಅಗ್ನಿ' ಹಾಗು 'ಪೃಥ್ವಿ' ಕೂಡ ಸೇರಿವೆ. ಆ ಕಾರಣದಿಂದಾಗಿ 'ಭಾರತದ ಕ್ಷಿಪಣಿ ಜನಕ', ಮಿಸೈಲ್ ಮ್ಯಾನ್ ಎಂಬ ಅನ್ವರ್ಥ ಸಲ್ಲುತ್ತದೆ ಡಾ|| ಕಲಾಮ್ ಅವರಿಗೆ.  ಭಾರತದ ಪ್ರತಿಷ್ಠಿತ ' ಪೋಕ್ರಾನ್ ಅಣು ಪರೀಕ್ಷೆಯ ಜವಾಬ್ದಾರಿಯುತ ರಾಜಗೋಪಾಲ ಚಿದಂಬರಂ ಅವರೊಡಗೂಡಿ ನಡೆಸಿದ ಕಾರ್ಯ ಇವರಿಗೆ 'ಭಾರತದ ಅತ್ಯುತ್ತಮ ಅಣುವಿಜ್ಞಾನಿ' ಎಂಬ ಹೆಸರನ್ನು ತಂದು ಕೊಡುತ್ತದೆ.


ವೈದ್ಯಕೀಯ ಕ್ಷೇತ್ರದಲ್ಲಿ ಕಲಾಮ್ ಕಮಾಲ್.


ವಿಶೇಷ ಎಂಬಂತೆ 1998 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ಕೊಡುಗೆ ಅಕೊಡಲು ಪ್ರಯತ್ನಿಸಿದ ಕಲಾಮ್ ಅವರು ಹೃದಯ ತಜ್ಞ ಸೋಮರಾಜು ಅವರೊಂದಿಗೆ ಹೃದಯ ರೋಗಿಗಳ ಅನುಕೂಲಕ್ಕಾಗಿ ಕಡಿಮೆ ಬೆಲೆಯ 'ಕಲಾಮ್-ರಾಜು ಸ್ಟೆಂಟ್ ' ಹೆಸರಿನ ಕರೋನರಿ ಸ್ಟಂಟ್ ಅಭಿವೃದ್ಧಿ ಪಡಿಸುತ್ತಾರೆ, ಮತ್ತು   ಅವರು ಮುಟ್ಟದ ಕ್ಷೇತ್ರವಿಲ್ಲ ಎಂಬುದಕ್ಕೆ ಸಾಕ್ಷಿಯಾಗುತ್ತದೆ.ಗ್ರಾಮೀಣ ಆರೋಗ್ಯ ಅಭಿವೃದ್ಧಿಗಾಗಿ 'ಕಲಾಮ್- ರಾಜು‌ ಟ್ಯಾಬ್ಲೆಟ್' ಹೆಸರಿನ ಟ್ಯಾಬ್ಲೆಟ್ ಕೂಡ ಅಭಿವೃದ್ಧಿ ಪಡಿಸುತ್ತಾರೆ.


ಭಾರತದ ಪ್ರಥಮ ಪ್ರಜೆಯಾದ  ಕಲಾಮ್…



ಅಂದು ರಾಮೇಶ್ವರಂ ನಲ್ಲಿ ಕುಟುಂಬದ ನಿರ್ವಹಣೆಗಾಗಿ ದಿನಪತ್ರಿಕೆ ಹಂಚಿ ದುಡಿವ ಜವಾಬ್ದಾರಿ ಹೊತ್ತಿದ್ದ ಕನಸ ಕಣ್ಣಿನ ಹುಡುಗನೀಗ ದೇಶದ ಜವಾಬ್ದಾರಿ ಹೊರುವ ಮಟ್ಟಿಗೆ ಬೆಳೆದು ನಿಂತಿದ್ದಾನೆ.ಜುಲೈ 25,2002, ಭಾರತ ಮರೆಯಲಾಗದ ದಿನವನ್ನಾಗಿಸಿದ್ದು ಅಂದಿನ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು, ಅಂದಿನ ಕೇಂದ್ರ ಸರ್ಕಾರ ಡಾ|| ಕಲಾಮ್ ರನ್ನು ಭಾರತದ ರಾಷ್ಟ್ರಪತಿ ಹುದ್ದೆಗೆ ನಿರ್ದೇಶನ ಮಾಡಿದಾಗ ದೇಶವೇ ಹೆಮ್ಮೆ ಪಡುವ ಸಾಧಕರೊಬ್ಬರು ದೇಶದ ಪ್ರಥಮ ಪ್ರಜೆಯಾಗುತ್ತಾರೆಂಬ ಹೆಮ್ಮೆ ಪ್ರತೀ ಭಾರತೀಯನಿಗೂ ಇದ್ದೇ ಇರುತ್ತದೆ. ಅಂತೆಯೆ ಕಲಾಮ್ ಅವರು ಭಾರತದ  ಅತ್ಯುನ್ನತ ಗೌರವ ಪದವಿ ಭಾರತರತ್ನ ಪಡೆದ ಮೂರನೇ, ಹಾಗು ಮೊದಲನೇ ವಿಜ್ಞಾನಿ, ಮೊದಲನೇ ಅವಿವಾಹಿತನಾಗಿ, ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ಜುಲೈ 25,2002 ರಿಂದ ಜುಲೈ 25 , 2007 ರ ವರೆಗೆ ಜವಾಬ್ದಾರಿ ಹೊರುತ್ತಾರೆ.


ರಾಷ್ಟ್ರಪತಿ ಹುದ್ದೆಯ ನಂತರದಲ್ಲಿ ದೇಶದ ಅನೇಕ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಅಥಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವ ಮೂಲಕ ಇನ್ನು ಹೆಚ್ಚು ದೇಶ ಸೇವೆಗೆ ಅರ್ಪಿಸಿಕೊಳ್ಳುತ್ತಾರೆ. 2012 ರ ' 'ವಾಟ್ ಕ್ಯಾನ್ ಐ ಗೀವ್' ಚಳುವಳಿಯ ಮೂಲಕ ಭಾರತೀಯ ಯುವಪೀಳಿಗೆಗೆ ದೇಶದ ಬಗ್ಗೆ ಇರಬೇಕಾದ ಕಾಳಜಿ ಕಾರ್ಯ ಎರಡನ್ನೂ ಬಡಿದೆಬ್ಬಿಸುವ ಪ್ರಯತ್ನ ಮಾಡುತ್ತಾರೆ.


ಕನಸುಗಾರನಿಗೊಲಿದ ಪ್ರಶಸ್ತಿ ಸನ್ಮಾನಗಳು..


ವಿಶ್ವದ ನಲವತ್ತು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್,

  • 1981 ರಲ್ಲಿ ಭಾರತದ ಉನ್ನತ ಪದ್ಮಭೂಷಣ ಪ್ರಶಸ್ತಿ,

  • 1990 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ,

  • 1997 ರಲ್ಲಿ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ.

  • ನ್ಯಾಷಿನಲ್ ಸ್ಪೇಸ್ ಸೊಸೈಟಿ ಇಂದ ಕೊಡಮಾಡುವ ವಾನ್ ಬ್ರಾನ್ ಅವಾರ್ಡ್.

  • 2015ರಲ್ಲಿ ಅವರ 84ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಂಚೆಚೀಟಿ ಹೊರತಂದು ಗೌರವ.

  • ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ದ ಸಂಶೋದಕರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಹೊಸ ಬ್ಯಾಕ್ಟೀರಿಯಂಗೆ ಕಲಾಮ್ ಅವರ ನೆನಪಿನಾರ್ಥ 'ಸೋಲಿಬ್ಯಾಸಿಲಸ್ ಕಲಾಮಿ' ಎಂದು ನಾಮಕರಣ.

  • ಭಾರತದ ಹಲವಾರು ಟೆಕ್ನಿಕಲ್ ಯೂನಿವರ್ಸಿಟಿಗಳ ಹೆಸರುಗಳು ಕಲಾಮ್ ರವರ ಹೆಸರಿನಲ್ಲಿ ಮರುನಾಮಕರಣ.

  • ಇಂಟರ್ನ್ಯಾಷನಲ್ ವಾನ್ ಕಾರ್ಮನ್ ಅವಾರ್ಡ್ , ಅಮೇರಿಕಾದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ.

  • ಭಾರತ ಸರ್ಕಾರದ ವೀರಸಾವರ್ಕರ್ ಅವಾರ್ಡ್.

 

ಬರಹಗಾರರಾಗಿ ಕಲಾಮ್….


  • ಇಂಡಿಯಾ 2020:ಎ ವಿಷನ್ ಫಾರ್ ದಿ ನ್ಯೂ ಮಿಲೇನಿಯಂ

  • ವಿಂಗ್ಸ್ ಆಫ್ ಫೈರ್ : ಆತ್ಮಕಥೆ

  • ಇಗ್ನೈಟೆಡ್ ಮೈಂಡ್ಸ್



ಬರಹ : ಕುಮಾರ್ ಬಿ ಬಾಗೀವಾಳ್

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES