ಬಹುದಿನದ ಬೇಡಿಕೆ...
ಬಹುದಿನಗಳುರುಳಿವೆ ನೆನಪುಗಳ ಸುಳಿವಿರದೆ
ಬಹುಪಾಲು ಒತ್ತಡಕೆ ಮಣಿದು,
ಕನಸುಗಳ ಹೆಣೆದು ಕಟ್ಟಿದ ಮಾಲೆಯ
ಹೂಗಳು ಕುಸಿದು ಉಸಿರು ಚೆಲ್ಲುತಿವೆ.
ಬರಬಹುದಿತ್ತು ಒಮ್ಮೆಯಾದರೂ,
ಬರ ಬಂದ ಭೂಮಿಗೇ ಭೋರ್ಗರೆಯುವ ವರ್ಷವಿಳಿದಂತೆ
ತಣಿಸಬಹುದಿತ್ತು ಮನದ ದಾಹವ
ಉಣಬಡಿಸಬಹುದಿತ್ತು ಸ್ನೇಹವ.
ಬರುವುದಿದ್ದರೆ ಬಂದುಬಿಡು ಮತ್ತೊಮ್ಮೆ
ಮರುಮಾತನಾಡಲಾರೆ ನಾ ಎಂದಿಗೂ
ಮರುಗಳಿಗೆಯಲೆ ಸಮ್ಮತಿಸುವೆ ಸುಮ್ಮನೆ ತಲೆಬಾಗಿ
ಭುಜಕೆ ಭುಜಕೊಟ್ಟು ನಿಂತುಬಿಡುವೆ.
ಜೋಡಡಿಯನಿಡುವ ಕಾಡಿದ ನೆನ್ನೆಗಳ ಮರೆತು
ಜೋಡಿಹೃದಯಗಳ ಸಂಭ್ರಮವ ಮೆರೆದು.
- ಕುಮಾರ್ ಬಿ ಬಾಗೀವಾಳ್.
Comments
Post a Comment