ಬರೆದ ಸಾಲುಗಳು.... The lines I write
ಬರೆದ ಸಾಲುಗಳು
ಬರೆಯಲೊರಟಾಗ ಬದುಕ ದಾರಿಗಳೇ ,
ಬೆರಳಿಡಿದು ಸಾಗಿದವು ತಲುಪಿಸಲು ಗುರಿಯ
ಕಣ ಕಣವೂ ಚಡಪಡಿಸಿದವು ಸಲಹೆ ಕೊಡಲು
ಕಣ್ಣೆದುರಿಗೆ ನಿಂದವು ಮುಂದೆ ಬಂದು ಕೈಮರವಾಗಿ.
ದಾರಿಯುದ್ದಕೂ ತಂಪೆರೆದ ಮರಗಳೆಷ್ಟೋ,
ದಾಹ ತೀರಿಸಲು ಜೊತೆಗರಿದ ಹೊಳೆಗಳೆಷ್ಟೋ,
ಹಿತಕಾಗಿ ಹರಸಿ ಮೇಳೈಸಿದ ಹಸಿರ್ಸಾಲುಗಳೆಷ್ಟೋ,
ಅಮಿತವಾಗಿ ಕೂಗಿ ಕರೆದ ಬೆಟ್ಟಗುಡ್ಡಗಳ ಧ್ವನಿಗಳೆಷ್ಟೋ.
ಬರೆದ ಸಾಲುಗಳೊಳಗೆ ಸತ್ವವನೊಂದಿಷ್ಟು ಇಟ್ಟು
ಕಟ್ಟಕಡೆಯ ಸಾಲನೊಮ್ಮೆ ಮರುಮೌಲ್ಯಿಸಿದವು
ಕವಲದಾರಿಗಳ ಪ್ರಶ್ನೆಗಳು, ಸರಿದಾರಿಯ ಆಧರಿಸಿ
ಹೊರಟ ಸಾಲುಗಳಿಗಿಲ್ಲಿ ಪೂರ್ಣ ಅಂಕಗಳು.
ಮೌನಿಸಿ, ದಿಟ್ಟಿಸಿ, ಗಟ್ಟಿಸಿಕೊಂಡ ಬೆಟ್ಟುಗಳಿವು
ಬರೆಯಲೊರಟ ಮನಕೆ ಮಾದರಿಯಾದವು
ಬದುಕ ಬರಹವನೆ ಬದಲಿಸಲು ದಾರಿಯಾದವು
ಸಾಧನೆಯ ಶಿಖರದ ಮೇಲಿನ ಶಿರವಾದವು.
ರಚನೆ: ಕುಮಾರ್ ಬಿ ಬಾಗೀವಾಳ್
Comments
Post a Comment