ವಚನಾನುಕರಣೆ Vachana Anukarane
ಅನುಕರಣೆ ೧. ದಿನಾಂಕ: ೨೦/೧೦/೨೦೨೦
ಶಿವ ಶರಣೆ ಅಕ್ಕ ಮಹಾದೇವಿ ರಚಿತ
ಗುರು ತನ್ನ ವಿನೋದಕ್ಕೆ ಗುರುವಾದ
ಗುರು ತನ್ನ ವಿನೋದಕ್ಕೆ ಲಿಂಗವಾದ
ಗುರು ತನ್ನ ವಿನೋದಕ್ಕೆ ಜಂಗಮವಾದ
ಗುರು ತನ್ನ ವಿನೋದಕ್ಕೆ ಪಾದೋದಕವಾದ
ಗುರು ತನ್ನ ವಿನೋದಕ್ಕೆ ಪ್ರಸಾದವಾದ
ಗುರು ತನ್ನ ವಿನೋದಕ್ಕೆ ವಿಭೂತಿಯಾದ
ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ
ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.
ಇಂತೀ ಭೇದವನರಿಯದೆ,
ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ
ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.
ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ
ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.
ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು
ಭವಹೇತುಗಳ ಮಾಡುವನಯ್ಯಾ.
ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು
ಚೆನ್ನಮಲ್ಲಿಕಾರ್ಜುನಾ
ವಿವರ: ಈ ವಚನದಲ್ಲಿ ಅಕ್ಕಮಹಾದೇವಿಯವರು ಗುರುವಿನ ಮಹತ್ತರವಾದ ಸ್ಥಾನವನ್ನು ನೆನಪಿಸುತ್ತಾ ಅನುಸರಿಸಬೇಕಾದದ್ದರ ಕುರಿತು ನುಡಿಯುತ್ತಾರೆ. ತನ್ನ ಅರಿವಿಗೆ ಗುರು, ಗುರು,ಲಿಂಗ, ಜಂಗಮ,ಪಾದೋದಕ,ಪ್ರಸಾದ,ವಿಭೂತಿ,ರುದ್ರಾಕ್ಷಿ, ಹಾಗೂ ಓಂ ನಮಃ ಶಿವಾಯವೆಂಬ ಮಹಾಮಂತ್ರಗಳ ಮಹತ್ವದ ಅವಶ್ಯಕತೆ ಬಗೆಗೆ ನುಡಿದಿದ್ದಾರೆ. ಪ್ರತಿಯೊಬ್ಬ ಭಕ್ತ, ಶಿಷ್ಯ, ತನ್ನ ಜೀವನದ ಪ್ರತೀ ಹಂತದಲ್ಲಿಯೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕಿರುವ ಅಂಶವನ್ನು ಪ್ರಸ್ತಾಪಿಸಲಾಗಿದೆ. ಗುರು ಭೌತಿಕವಾಗಿರಲಿ, ಭೌದ್ಧಿಕವಾಗಿರಲಿ, ಗುರುವಿನ ಅನುಕರಣೆ, ಅನುಸರಣೆ ಬಹಳ ಮುಖ್ಯ. ಕಲಿಕೆ, ಕಾರ್ಯ, ಕಾಯಕ
ಮೊದಲಾದವುಗಳಲ್ಲಿ ಗುರುವಿನ ಪಾತ್ರ ಪ್ರಮುಖವಾದದ್ದು , ಈ ಮೇಲಿನ ಗುರುವಿನ ಪ್ರತೀ ರೂಪ ಜೀವನದ ಪ್ರತೀ ಹಂತದಲ್ಲಿರುವ ಗುರುವಿನ ಬಲವನ್ನ, ಬಲದ ಪ್ರತಿಫಲವನ್ನ ಸೂಚಿಸುವಂತಿದೆ. ನಿಜಭಕ್ತ ನಿತ್ಯ ಇಷ್ಟಲಿಂಗ ಪೂಜೆಯಲಿ ಗುರು, ಲಿಂಗ,ಜಂಗಮ ,ಪಾದೋದಕ, ಪ್ರಸಾದ , ವಿಭೂತಿ, ರುದ್ರಾಕ್ಷಿ, ಓಂ ನಮಃ ಶಿವಾಯವೆಂಬ ಮಹಾ ಮಂತ್ರಗಳನ್ನು ಪಕ್ಕಕ್ಕಿರಿಸಿ ಲಿಂಗಪೂಜೆಯ ಮಾಡಿದೊಡೆ ಇಷ್ಟಲಿಂಗವೇ ಜಾರಿಬಿದ್ದೀತು ಜೋಕೆ, ಫಲ ಕೂಡ ಫಲಿಸದು ಎಂದು ಅಕ್ಕನವರು ಎಚ್ಚರಿಕೆ ಕೊಟ್ಟಿದ್ದಾರೆ. ಹಾಗೆಯೇ ಕಲಿಕೆ ಫಲಪ್ರದವಾಗಬೇಕಾದಲ್ಲಿ ಕಲಿಕೆ, ನಡಿಗೆ, ಜೀವನದ ಪ್ರತೀ ಹಂತದಲ್ಲಿ ಗುರುವಿನ ನೆನಹು ಇರದಿದ್ದರೆ ಕಲಿಕೆಯ ಫಲ ಫಲಿಸದು ಎಂಬುದನ್ನು ಅರಿಯಬೇಕಿದೆ.
ಸಂಗ್ರಹ ಹಾಗು ಅನ್ವಯ : ಕುಮಾರ್ ಬಿ ಬಾಗೀವಾಳ್.
Comments
Post a Comment