ವಚನಾನುಕರಣೆ. Vachananukarane, By Kumar b bagival
ವಚನಾನುಕರಣೆ.
ಅನುಕರಣೆ ೨ . ದಿನಾಂಕ: ೨೧/೧೦/೨೦೨೦
ಶಿವ ಶರಣೆ ಅಕ್ಕ ಮಹಾದೇವಿ ರಚಿತ
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.
ವಿವರ: ಈ ವಚನ ನಮಗೆ ಗುರುವಿನ ಮಹತ್ಕಾರ್ಯವನ್ನು ತಿಳಿಸುತ್ತದೆ ಹಾಗು ಗುರುವಿಗೆ ವಿನಮ್ರ ಧನ್ಯನಾಗಿರಬೇಕಾಗಿ ತಿಳಿಸುತ್ತದೆ. ಮನುಷ್ಯ ಜನ್ಮ ಪಡೆದ ನಂತರ ಗುರುವಿನ ಕೃಪೆ ಇರದಿದ್ದರೆ ನರನಾಗಿಯೇ ಉಳಿಯುತ್ತಿದ್ದ. ನರನಲ್ಲಿನ ಗುಣಾವಗುಣಗಳನ್ನು ಗುರ್ತಿಸಿ ಶಿಕ್ಷಣವನಿತ್ತು ನರನನ್ನ ಹರನಾಗಿಸುವುದು ಗುರು.
ಹರನಾದ ಬಳಿಕ ಗುರುವನ್ನು ಮರೆಯದೇ ನಮಿಸುವುದು. ಪ್ರತೀ ಯಶಸ್ವಿ ನಡಿಗೆಯಲ್ಲೂ ಗುರುಸ್ಮರಣೆ ಮಾಡುವುದು ನರನ ಕರ್ತವ್ಯ. ಜೀವನದ ಭವಬಂಧನವ ಬಿಡಿಸಿ ಮುಕ್ತಗೊಳಿಸಿ ಸುಖದ ಜೀವನದೆಡೆಗಿನ ದಾರಿ ತೋರುವುದು ಗುರುವೊಬ್ಬರೆ. ಭವಿಯನೊರತು ಭಕ್ತನಾಗಿಸುವುದೂ ಗುರುವೆ. ಅಷ್ಟೇ ಅಲ್ಲ ಜೀವನದ ಅಂತಿಮ ಗುರಿ ತಲುಪಿಸುವುದೂ ಗುರುವಿನಿಂದ ಕಲಿತ ಶಿಕ್ಷಣವೇ. ಇಲ್ಲಿ ಚನ್ನಮಲ್ಲಿಕಾರ್ಜುನ ಅಕ್ಕನವರ ಗುರಿ ,ಅಕ್ಕನವರ ಬದುಕಿನುದ್ದಕ್ಕೂ ,ಅಣ್ಣ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ ನವರಂತಹವರಿಂದ ಪಡೆದ ಸಲಹೆ ಅರಿವು ಸದ್ಗತಿಯ ಕಡೆಗೆ ಅಕ್ಕನವರನ್ನು ಕೊಂಡೊಯ್ಯಲು ಅನುವಾಗುವಂತೆ ಮಾಡುತ್ತವೆ. ಹಾಗಾಗಿ ಅಕ್ಕನವರು ಗುರುವಿಗೆ ಧನ್ಯವಾದ ಸಲ್ಲಿಸುತ್ತಾರೆ, ನಮಸ್ಕರಿಸುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ , ಯಶಸ್ಸಿನಲ್ಲಿ ಗುರುವಿನ ಪಾತ್ರ ಖಂಡಿತವಾಗಿ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಮಗೆ ಕಲಿಸಿದ ಗುರುಗಳನ್ನು ಸ್ಮರಿಸುವುದು ತಮ್ಮ ಕರ್ತವ್ಯ ಎಂಬುದನ್ನು ಮನಗಾಣಬೇಕಿದೆ.:
ಸಂಗ್ರಹ ಹಾಗು ಅನ್ವಯ : ಕುಮಾರ್ ಬಿ ಬಾಗೀವಾಳ್.
Comments
Post a Comment