ವೀರಶೈವ ಮತ್ತು ಇತರೆ ಶೈವ ಪಂಥಗಳಿಗೂ ಅಂತರ ಇದೆಯಾ? (ವೀರಶೈವ ಮತ್ತು ಲಿಂಗಾಯತ ಬೇರೆ ಬೇರೇನಾ?) ಶಿವಶರಣ ಆದಯ್ಯನವರ ಈ ವಚನದಲ್ಲಿದೆ ಉತ್ತರ!

ವೀರಶೈವ ಮತ್ತು ಇತರೆ ಶೈವ ಪಂಥಗಳಿಗೂ ಅಂತರ ಇದೆಯಾ?
( ವೀರಶೈವ ಮತ್ತು ಲಿಂಗಾಯತ ಬೇರೆ ಬೇರೇನಾ?)
ಶಿವಶರಣ ಆದಯ್ಯ ನವರ  ಈ ವಚನದಲ್ಲಿದೆ ಉತ್ತರ !

ದೂರದ ಗುಜರಾತ್ ನ ಶಿವಪುರ ಎಂಬ ಗ್ರಾಮವೊಂದರಲ್ಲಿ ಘೋರದತ್ತ ಮತ್ತು ಪುಣ್ಯಾವತಿ ದಂಪತಿಗಳ ಮಗನಾಗಿ 1160ರಲ್ಲಿ ಜನಿಸಿದ ಶಿವಶರಣ ಆದಯ್ಯನವರು ಸೌರಾಷ್ಟ್ರ ಸೋಮೇಶ್ವರ ಅಂಕಿತದೊಂದಿಗೆ ಸುಮಾರು 403 ವಚನಗಳನ್ನು ತಮ್ಮ ಅನುಭವದ ಪಥದಲ್ಲಿ ಗೋಚರ ಸತ್ಯವೆಂಬಂತೆ ಬಿಂಬಿಸಿದ್ದಾರೆ. ಗುಜರಾತಿನವರಾಗಿದ್ದರೂ ಕನ್ನಡದ ನೆಲದಲ್ಲಿ ಕನ್ನಡದಲ್ಲಿ ವಚನಗಳನ್ನು ರಚಿಸಿ ಅಂಗ , ಲಿಂಗಗಳ ಸಾಮರಸ್ಯವನ್ನು ತಮ್ಮ ಅನಭಾವದಿಂದ ಪಡೆದು ವಚನಗಳ ರೂಪದಲ್ಲಿ ಸಮಾಜಕ್ಕೆ ಅರ್ಪಿಸಿರುವುದು ಶ್ಲಾಘನೀಯ.ಬಸವಣ್ಣ ಮತ್ತು ಅಲ್ಲಮರ ಪ್ರಭಾವ ಇವರಲ್ಲಿ ಕಾಣ ಸಿಗುತ್ತದೆ, ಶರಣ ಚಳುವಳಿಯ ಪ್ರಮುಖರಲ್ಲಿ ಒಬ್ಬರಾದ ಶರಣ ಆದಯ್ಯನವರು ತಮ್ಮದೇ ವಿಚಾರಗಳಿಗನುಗುಣವಾಗಿ ಶೈವ ಪ್ರಭೇದಗಳ ಹೋಲಿಕೆ ವ್ಯತ್ಯಾಸಗಳನ್ನು ವಿಶ್ಲೇಷಣೆ ಮಾಡಿರುವುದು ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ ಎನ್ನುವವರಿಗೆ ಒಂದೇ ಎನ್ನುವಂತೆ ತಿಳಿಸಬಯಸಿದ್ದಾರೆ ಎಂದರೆ ತಪ್ಪಾಗಲಾರದು. ಶೈವ ಪ್ರಭೇಧಗಳನ್ನು  ವೀರಶೈವ ಮತ್ತು ಶುದ್ಧ ಶೈವ( ಇತರೆ ಶೈವ ಪಂಥಗಳು)ಗಳೆಂಬ ಎರಡು ಪಕ್ಷಗಳಾಗಿ ಕಾಣುವ ಶರಣ ಆದಯ್ಯ ಅವುಗಳಂತರಗಳನ್ನು ಹೋಲಿಕೆಗಳನ್ನು ಕೊಡುವುದರ ಮೂಲಕ ಹೇಳಲಿಚ್ಚಿಸುತ್ತಾರೆ.
ಶರಣರ ಹಾದಿಯೇ ಹಾಗೆ ನೇರ ನಡೆ ನುಡಿಯುಳ್ಳದ್ದು. ಆಚಾರ ವಿಚಾರಗಳಿಗೆ, ಅಂಗ,ಲಿಂಗ ಜಂಗಮ, ಗುರು, ಕಾಯಕ ಮೊದಲಾದವುಗಳಿಗೆ ಪ್ರಾಮುಖ್ಯತೆ ಕೊಟ್ಟವರು. ಈ ನಿಟ್ಟಿನಲ್ಲಿ ಧರ್ಮದ ವಿಚಾರ, ಅದರಲ್ಲೂ ವೀರಶೈವ ಹಾಗು ಇತರೆ ಶೈವ ಪಂಥಗಳ  ಸಿದ್ಧಾಂತಗಳ ಬಗ್ಗೆ ಸವಿಸ್ತಾರವಾಗಿ ತನ್ನ ಒಂದು ವಚನದಲ್ಲಿ‌ಹೀಗೆ ಹೇಳಿದ್ದಾರೆ.

ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ
ನಿರ್ಣಯ ನಿಷ್ಪತ್ತಿಯೆಂತೆಂದಡೆ:
ಮಲ ಮಾಯಾ ಮಲಿನವನು
ಶ್ರೀಗುರು ತನ್ನ ಕೃಪಾವಲೋಕನದಿಂದದನಳಿದು,
ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು
ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು,
ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ, ಮಹಾಲಿಂಗವೆಂದು ನಾಮಕರಣಮಂ ಮಾಡಿ,
ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ,
ಕರ್ಣದ್ವಾರದಲ್ಲಿ ಪ್ರಾಣಂಗೆ ಆ ಮಹಾಲಿಂಗವ ಜಪಿಸುವ
ಪ್ರಣವಪಂಚಾಕ್ಷರಿಯನು ಪ್ರವೇಶವಂ ಮಾಡಿ,
ಅಂಗಪೀಠದಲ್ಲಿರಿಸಿ,
ಅಭಿನ್ನಪ್ರಕಾಶವಾದ ಪೂಜೆಯ ಮಾಡಹೇಳಿದನು,
ಇದೀಗ ವೀರಶೈವದ ಲಕ್ಷಣವೆಂದರಿವುದು.
ಇನ್ನು ಶುದ್ಧಶೈವಂಗೆ ಗುರು ತನ್ನ ನಿರೀಕ್ಷಣ ಮಾತ್ರದಲ್ಲಿ
ಅವನ ಶುದ್ಧಾಂಗನ ಮಾಡಿ,
ಆತನ ಕರ್ಣದ್ವಾರದಲ್ಲಿ ಪಂಚಾಕ್ಷರಿಯನುಪದೇಶವಂ ಮಾಡಿ, 
ಸ್ಥಾವರಲಿಂಗಪೂಜಕನಾಗಿರೆಂದು ಲಿಂಗವನು ಕೊಟ್ಟು,
ಭೂಪೀಠದಲ್ಲಿರಿಸಿ ಅರ್ಚನೆ ಪೂಜನೆಯ ಮಾಡೆಂದು ಹೇಳಿದನು.
ಹೇಳಲಿಕ್ಕಾಗಿ ಶುದ್ಧಶೈವನೆ ಪೀಠದಲ್ಲಿರಿಸಿ
ಭಿನ್ನಭಾವಿಯಾಗಿ ಅರ್ಚನೆ ಪೂಜೆನೆಯಂ ಮಾಡುವನು.
ವೀರಶೈವನು ಅಂಗದ ಮೇಲೆ ಧರಿಸಿ ಅಭಿನ್ನಭಾವದಿಂದ
ಅರ್ಚನೆ ಪೂಜನೆಯಂ ಮಾಡುವನು.
ಶುದ್ಧಶೈವಂಗೆ ನೆನಹು, ವೀರಶೈವಂಗೆ ಸಂಗವೆಂತೆಂದಡೆ:
ಅತ್ಯಂತ ಮನೋರಮಣನಪ್ಪಂತಹ ಪುರುಷನ ಒಲುಮೆಯಲ್ಲಿಯ ಸ್ತ್ರೀಗೆ
ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ
ಶುದ್ಧಶೈವದ ನೆನಹಿಂಗೂ
ವೀರಶೈವದಲ್ಲಿಯ ಸಂಗಕ್ಕೂ ಇಷ್ಟಂತರ.
ಆ ಲಿಂಗದಲ್ಲಿ ಶುದ್ಧಶೈವನ ನೆನಹು
ನಿಷ್ಪತ್ತಿಯಾದಡೆ ಸಾರೂಪ್ಯನಹನು.
ಆ ಲಿಂಗದಲ್ಲಿ ವೀರಶೈವನ ನೆನಹು
ನಿಷ್ಪತ್ತಿಯಾದಡೆ ಸಾಯುಜ್ಯನಹನು
ಅದು ಕಾರಣ, ಸ್ಥಾವರಲಿಂಗದ ಧ್ಯಾನಕ್ಕೂ
ಪ್ರಾಣಲಿಂಗದ ಸಂಗಕ್ಕೂ ಇಷ್ಟಂತರ.
ಸ್ಥಾವರಲಿಂಗದ ಧ್ಯಾನದಿಂದ ಸಾರೂಪ್ಯಪದವನೈದಿದ ತೆರನೆಂತೆಂದಡೆ:
ಕೀಟನು ಭ್ರಮರಧ್ಯಾನದಿಂದ ಆ ಭ್ರಮರರೂಪಾದಂತೆ
ಶೈವನು ಶಿವಧ್ಯಾನದಿಂದ ಶಿವನ ಸಾರೂಪ್ಯಪದವನೈದಿ
ಇದಿರಿಟ್ಟು ಭಿನ್ನಪದದಲ್ಲಿರುತ್ತಿಹನು.
ಮತ್ತಂ, ವೀರಶೈವನು ಜಂಗಮಾರ್ಚನೆಯಂ ಮಾಡಿ
ಪ್ರಾಲಿಂಗಸಂಬಂಧದಿಂ ಸಾಯುಜ್ಯಪದವನೆಯ್ದಿದ ತೆರನೆಂತೆಂದಡೆ:
ಅಗ್ನಿಯ ಸಂಗವ ಮಾಡಿದ ಕರ್ಪುರ ನಾಸ್ತಿಯಾದ ಹಾಂಗೆ,
ಈತನು ಶಿವನಲ್ಲಿ ಸಾಯುಜ್ಯಪದವನೈಯ್ದಿ
ರೂಪುನಾಸ್ತಿಯಾಗಿ ಶಿವನೆಯಹನು.
ಇದು ಕಾರಣ ಶುದ್ಧಶೈವ ವೀರಶೈವದಂತರ ಮಹಾಂತರ,ಈ ಪ್ರಕಾರ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.

ಶರಣ ಆದಯ್ಯನವರು ತಮ್ಮ ಈ ವಚನದಲ್ಲಿ ವೀರಶೈವ ಮತ್ತು ಇತರೆ ಶೈವ ಪಂಥಗಳ ನಡುವಿನ ವ್ಯತ್ಯಾಸವನ್ನು ಈ ಕೆಳಕಂಡ ಅಂಶಗಳಿಂದ ತಿಳಿಸಲೊರಟಿರುವುದನ್ನು ಕಾಣಬಹುದು. ಗುರು ಶಿಷ್ಯರ ವಿಚಾರ, ಸ್ಥಾವರಲಿಂಗ ಪ್ರಾಣಲಿಂಗ, ಅಂಗವೇ ಪೀಠ ಒಂದೆಡೆಯಾದರೆ ಭೂಪೀಠ ಮತ್ತೊಂದೆಡೆ, ಅಭಿನ್ನಭಾವ ಭಿನ್ನಭಾವ, ನೆನಹು ಮತ್ತು ಸಂಗ , ಸಾರೂಪ್ಯ ಮತ್ತು ಸಾಯುಜ್ಯಗಳಲ್ಲಿ ಅಂತರಗಳಿವೆ ಎಂದು ಹೇಳುವ ಮೂಲಕ ವೀರಶೈವ ಅನುಕರಣೆಗೆ ಒಳಪಡುತ್ತಾರೆ. ಬಸವಾದಿ ಶರಣರ ಸಾಲಿನಲ್ಲಿ ನಿಲ್ಲುತ್ತಾರೆ. ಅಂತರಗಳನ್ನು ತಿಳಿಸಲು ನಿಷ್ಪತ್ತಿ ಎಂಬ ಅತ್ತುತ್ತಮ‌ಪದ ಪ್ರಯೋಗ ಮಾಡಿರುವ ಶರಣ ಆದಯ್ಯನವರು ವೀರಶೈವ ಗುರುಗಳು ತಮ್ಮ ಶಿಷ್ಯನಲ್ಲಿ ಮಹಾಪರಮ ಕಳೆಯನ್ನು ಸ್ಥಲದಲ್ಲಿ ಕೂಡಿ, ಮಹಾಲಿಂಗವೆಂದು ಅದಕೆ ನಾಮಕರಣ ಮಾಡಿ ಶಿಷ್ಯನ ಅಂಗದ ಮೇಲೆ ಧರಿಸುವಂತೆ ಹೇಳಿ, ಅವನ ಕರಣಗಳಲ್ಲಿ ಪ್ರಣವ ಪಂಚಾಕ್ಷರಿಯನ್ನು ಉಪದೇಶಿಸಿ,ಅಂಗದಲ್ಲಿನ ಪ್ರಾಣಲಿಂಗಕ್ಕೆ ಅಭಿನ್ನಭಾವ ಪೂಜೆಯನ್ನು ಮಾಡುವಂತೆ ಉಪದೇಶಿಸಿದರೆ, ಶುದ್ಧ ಶೈವದಲ್ಲಿನ ಗುರುವು ಶಿಷ್ಯನ ದೇಹವನು ಶುದ್ಧಾಂಗ ಮಾಡಿ , ಕರಣದಲ್ಲಿ ಪಂಚಾಕ್ಷರಿಯನುಪದೇಶವನ್ನು ಮಾಡಿ, ಸ್ಥಾವರ ಲಿಂಗವನು ಪೂಜಿಸೆಂದು ಲಿಂಗವನು ನೀಡಿ , ಭೂ ಪೀಠದಲ್ಲಿರಿಸಿ ಭಿನ್ನಭಾವದಿಂದ ಪೂಜಿಸುವ ಉಪದೇಶ ಮಾಡುವರು. ಶುದ್ಧ ಶೈವರಿಗೆ ನೆನಹಾದರೆ, ವೀರಶೈವರಿಗೆ ಸಂಗದಂತೆ, ನೆನಹಿನ ಸುಖಕ್ಕಿಂತ ಸಂಗದ ಸುಖವೇ ಅಧಿಕ ಎನ್ನುತ್ತಾರೆ ಆದಯ್ಯನವರು. ಶುದ್ಧ ಶೈವನು ನೆನಹಾದರೆ ಅವನು ಸಾರೂಪ್ಯ ( ಭಗವಂತನ ರೂಪ ಮತ್ತು ಲಕ್ಷಣ ) ನಾದರೆ , ವೀರಶೈವನು ಸಾಯುಜ್ಯ (ಭಗವಂತನಲ್ಲಿ ಒಂದಾಗುವುದು), ಹೀಗೆ ಸ್ಥಾವರಲಿಂಗದ ನೆನಹು, ಪ್ರಾಣಲಿಂಗದ ಸಂಗದ ಅಂತರವನ್ನು ತಿಳಿಸುತ್ತಾರೆ. ಕೀಟವೊಂದು ಭ್ರಮರದಿಂದ ಭ್ರಮರಾ ರೂಪವಾದಂತೆ ಶುದ್ಧಶೈವನು ಸ್ಥವರ ಲಿಂಗದ ಶಿವಧ್ಯಾನದಿಂದ ಸಾರೂಪ್ಯನಾದರೆ, ವೀರಶೈವನು ಜಂಗಮಾರ್ಚನೆಯಿಂದ, ಪ್ರಾಣಲಿಂಗ ಸಂಬಂದದಿಂದ ಕರ್ಪೂರವೊಂದು ಅಗ್ನಿಯ ಸಂಗದಿಂದ ತಾನುರಿದು ನಾಸ್ತಿಯಾದಂತೆ ಶಿವನಲ್ಲಿ ಸಾಯುಜ್ಯನಾಗುವನು. ಇವುಗಳು ವೀರಶೈವ ಮತ್ತು ಶುದ್ಧ ಶೈವವೆಂಬೆರಡು ಪಂಥಗಳ ನಡುವಿನ ಅಂತರಗಳು ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆದ್ದರಿಂದ ಷಟ್ಸ್ಥಲಗಳು, ಅಷ್ಟಾವರಣ, ಪ್ರಾಣಲಿಂಗ/ಇಷ್ಟಲಿಂಗ, ಅಂಗದ ಮೇಲಿನ ಲಿಂಗದ ಪೂಜೆ, ಜಂಗಮಾರ್ಚನೆ, ಸಾಯುಜ್ಯ ಮುಂತಾದ ಲಕ್ಷಣಗಳು ವೀರಶೈವ ಧರ್ಮದ ಕುರುಹುಗಳಾಗಿದ್ದು ಅದರ ಶ್ರೇಷ್ಠ ಅನುಸರಣೆ ಶರಣ ಪರಂಪರೆಯಲ್ಲಿ ಹಾಸುಹೊಕ್ಕಾಗಿವೆ. ಬಸವಾದಿ ಶರಣರು ಧರ್ಮದ ಪ್ರಖರ ಬೆಳಕಾಗಿದ್ದಾರೆ ಆದ್ದರಿಂದ ಧರ್ಮದ ವಿಚಾರ ಧಾರೆಗಳಿಗೆ ಸರಿಯಾಗಿ ಸಾಗಬೇಕಿರುವುದು ಪ್ರಚಲಿತ ವಿಷಯವಾಗಿದ್ದು ಇದರ ಅನಿವಾರ್ಯತೆ ಕೂಡ ಇದೆ ಎಂಬುದು ಒಂದು ಅಭಿಪ್ರಾಯ.

ಲೇಖಕರು : ಕುಮಾರ್ ಬಿ ಬಾಗಿವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES