On the world platform.... ಜಗದ ಜಗುಲಿಯ ಮೇಲೆ.... By : Kumar B Bagival
ಜಗದ ಜಗುಲಿಯ ಮೇಲೆ….
ಜಗದ ಜಗಲಿಯ ಮೇಲೆ ನಡೆದಿದೆ
ಬೊಂಬೆನಾಟಕ, ಎಂದಿನಂತಿಲ್ಲ ನಾಟಕ
ಸೂತ್ರದೆಳೆ ಹಿಡಿದೆಳೆವ ಜನ ಬಹಳ
ದಿಕ್ಕುದೆಸೆ ಇಲ್ಲದ ಕುಣಿತ ಆ ಬೊಂಬೆಯದು.
ನಗುವ ತರಲು ಎಳೆದರೆ ಅಳು,
ಅಳು ತರಲು ಎಳೆದರೆ ನಗು.
ಅರಿಯದಾದ ಪ್ರೇಕ್ಷಕರು ಸಾಕಷ್ಟು
ಬರಿಗಣ್ಣ ನೋಟದಲಿ ಬಯಲಾಗುತ್ತಿಲ್ಲ ಮರ್ಮ.
ಗಲಿಬಿಲಿ ಇಲ್ಲಿ ಪ್ರೇಕ್ಷಕನದು
ಗೊಂಬೆ ಅದುದು ನಾನ ಎಂದು
ಗೋಸುಂಬೆ ಜನರು ಆಡಿಸಿದರೆ ಹೀಗೇ
ಲಂಗುಲಗಾಮಿಲ್ಲದ ಓಟ ಜಗದ ಮೈದಾನದಲಿ.
ರಾಜ ಯಾರೋ ರಕ್ಕಸ ಯಾರೋ
ಒಂದೂ ತಿಳಿಯದ ಪಾತ್ರಗಳಿಲ್ಲಿ
ತಾಜಾ ರೂಪದ ಬಣ್ಣ ಬಳಿದ ಮುಖ
ನರರೂಪದ ನೋಟ ವ್ಯಾಘ್ರ ನಖ ಕಿತ್ತು ತಿನ್ನುವ ಸಲುವಾಗೆ.
ಮುಳ್ಳುಗಳ ಮೇಲಿನ ರೇಷಿಮೆಯೊದಿಕೆ
ನುಣಪಾದ ಪಾದದೊಳಗೂ ಗೋರ್ಚುಗಳೇ
ಸವಿಯೊಳಗೊಂದೊಗರು ಪಾಷಾಣ
ಸತ್ತ ಶಿಖರದಲಿ ಕೊತಕೊತ ಜ್ವಾಲಾ ಕುಣಿತ.
ಸಲುಹಬೇಕಿದೆ ಅಲುಗದೆ ನೆರೆದ ಪ್ರೇಕ್ಷಕರ
ಬಲು ಬಯಕೆ ಬದುಕಲು ಬಯಸಿದ ಹಾಗೆ
ನಿಲುವಿನಲಿ ಬಲವಿರಲಿ ಗೆಲುವಿಗೆ ಬಾಡಲಿ ಹಗೆ
ಒಲವಿರಲಿ ಜಗದ ಪಡಸಾಲೆಯಲಿ ಪವಡಿಸಿರುವವರ ಮೇಲೆ.
ರಚನೆ : ಕುಮಾರ್ ಬಿ ಬಾಗೀವಾಳ್
Comments
Post a Comment