ಮನದುತ್ಸವ... ರಚನೆ: ಕುಮಾರ್ ಬಿ ಬಾಗೀವಾಳ್. Manaduthsava... Poem by : Kumar B Bagival.

ಮನದುತ್ಸವ….



ಅದಾಗಲೇ ನಡೆದಿತ್ತು ಮನದುತ್ಸವ
 ಸಹಸ್ರಾರು ನೆನಪುಗಳನ್ನೊತ್ತು ಅಲ್ಲಿ
ತರಚುವ ಕಲ್ಲುಗಳಾದಿಯಲು ಹೂವು
ಪರಚುವ ಗಾಯಗಳಾಚೆಯಲೂ ಸುಖವು
ಕೆಂಡದ ಮೇಲಿನ ಬೆಣ್ಣೆ ಕರಗಲಿ ಬಿಡೆಂಬ ಹುಂಭ
ಬಂಡಾಯವಿಲ್ಲದ ರಾಜಿ ಕಹಿಗಳಿಗೆಗಳಿದ್ದರೂ ತುಂಬಾ.

ಅದಾಗಲೇ ನಡೆದಿತ್ತು ಮನದುತ್ಸವ
ಸಹಸ್ರಾರು ನೆನಪುಗಳನ್ನೊತ್ತು ಅಲ್ಲಿ
ಸಿಹಿಗಳಿಗೆಯಲಿ ಜನಿಸಿರಬೇಕು ಕಹಿಯೂ ಸಿಹಿ
ಜಡಿಮಳೆಗಿಲ್ಲಿ ಹೂಮಳೆಯವತಾರದೊದಿಕೆ
ನಿಗಿಕೆಂಡವೂ ಕೋರೈಸುವ ಹಿಮದುಂಡೆ
ಬರದಲ್ಲೂ ಪಾಚಿಗಟ್ಟಿ ಹಸಿರುಂಡ  ಬಂಡೆ.

ಅದಾಗಲೇ ನಡೆದಿತ್ತು ಮನದುತ್ಸವ
ಸಹಸ್ರಾರು ನೆನಪುಗಳನ್ನೊತ್ತು ಅಲ್ಲಿ
ಮೆಲುಮಾತಿಗಷ್ಟಿಗಿಲ್ಲಿ ಪರವಶನಾಗುವ ಹಂಬಲ
ಮೆದು ಹಾದಿಗಿಷ್ಟಿಲ್ಲಿ ರಂಗೋಲಿ ಹಾಕಿಸಿಕೊಳ್ಳೋ ಹಂಬಲ
ಮೃದು ತೊಗಲಿಗೊಂದಿಷ್ಟು ತಳಿರು ತೋರಣದಂಬಲ
ಗೆಲುವಾಗುವ ತವಕದಲೊಂದಿಷ್ಟು ಉಸಿರ್ಬಸಿಯುವ ಹಂಬಲ.

ಅದಾಗಲೇ  ನಡೆದಿತ್ತು ಮನದುತ್ಸವ
ಸಹಸ್ರಾರು ನೆನಪುಗಳನ್ನೊತ್ತು ಅಲ್ಲಿ
ಭೂಮಿಗಗನವೆಂದೆಣಿಸದೆ ಸಾಗುತಲಿ
ಭಾವಿಸಿದಕ್ಕಿಂತೆಚ್ಚಾಗಿದೆ ಸಾಟಿಯಿಲ್ಲದ ಸಾಲು
ಸಾಲ ಮೇಲಾಟದ ಪಾಲೇ ಅಧಿಕ ಉತ್ಸವದುದ್ದಕೂ
ಸಾರಿ ಹೊರಟ ಸವಾರಿಗಿದು ಮುದದ ಮುದ್ರೆಯಚ್ಚು.

ರಚನೆ : ಕುಮಾರ್ ಬಿ ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES