Poem Vayassayithu aravatthu by KUMAR B Bagival
ವಯಸ್ಸಾಯಿತು ಅರವತ್ತು
ಹೌದು ವಯಸ್ಸೀಗ ಅರವತ್ತು
ಕೆಲಸಕ್ಕೀಗ ನಮಗೆ ಪುರುಸೊತ್ತು
ಮನೆಗೆ ಕಳಿಸಿದರು ನೀಡಿ ನಿವೃತ್ತಿ
ಬಾಯಿಚಪಲ ಮಾತನಾಡುವ ಪ್ರವೃತ್ತಿ
ಸಂಜೆಯ ವೇಳೆಗೆ ಪಾರ್ಕಿಗೆ ವಾಕ್
ಕೈಗವಸುಗಳು ಹಿಡಿದಿವೆ ಸ್ಟಿಕ್
ಪಕ್ಕದೋಟಲಿನ ಸುಗರ್ಲೆಸ್ ಕಾಫಿ
ಸೆಟ್ದೋಸೆ, ಸವಿಯುವ ಹಲ್ಲು ಸೆಟ್ಗಳು
ಗರಿಗರಿ ಇಸ್ತ್ರಿ ಮಾಡಿದ ಪ್ಯಾಂಟ್ ಮೇಲಿನ ಷರ್ಟ್
ಕುತ್ತಿಗೆಯ ಸುತ್ತ ಮಫ್ಲರ್,ಮೈ ತುಂಬಿದ ಸ್ವೆಟರ್
ಕಾಲಿಗೆ ಬೂಟ್, ಕಣ್ಣಿಗೆ ಚಾಳೀಸು
ಧರಿಸಿ ಹೊರಟ ಸಮಾನರ ಸೇನೆ
ಸ್ವಚ್ಛ ಪಾರ್ಕ್ನಲ್ಲಿ ಬಿಚ್ಚು ನಗು
ಥೇಟ್ ಹಲ್ಲು ಬಂದಿರದ ಮಗುವಿನ ಹಾಗೆ
ನಗೆಕ್ಲಬ್ನ ಪ್ರಾಮಾಣಿಕ ಸದಸ್ಯ,
ಅದು ನಮಗೆ ಸ್ವರ್ಗ ಸಾದೃಶ್ಯ.
ಪಾರ್ಕ್ ಬೆಂಚಿನ ಮೇಲೊಂದು ಸುತ್ತು
ದುಂಡು ಮೇಜಿನ ಸಮ್ಮೇಳನ ಕಷ್ಟ ಸುಖ
ರಾಜಕೀಯ,ಕೊನೆಗೆ ಖಾಯಿಲೆಗೆ ಮದ್ದು,
ಮನೆಗೆ ಹಿರಿಯ ಮಗನಿಗೆ ಅರಿಗೋಲು
ಮಡದಿಗೆ ಊರುಗೋಲು
ಜೋಲಿ ಚೇರೇರಿ ಗಹನ ಚಿಂತನೆಗಿಳಿದರೆ
ಅಪ್ಪಟ ದಿವ್ಯಮೌನಿ, ಜ್ಞಾನಿ
ಕೆಲವೊಮ್ಮೆ ಮಾತುಗಳು ಮಿತಿಮೀರಿ
ಅವುಗಳದ್ದೇ ಮನೆಮಂದಿಗೆ ಕಿರಿಕಿರಿ
ಸುಮ್ಮನಿರದ ಕೆಲಸ ಮಾಡುವ ಛಾಳಿ
ನಾವ್ ದುಡಿದು ಬದುಕಿದವರು ಬಾಳಿ
ತಣ್ಣಗಿನ ದೇಹದಲ್ಲೂ ಹೆಚ್ಚಿನ ಬಿ ಪಿ
ಖಾನಿ ತುಂಬಿವೆ ಮಾತ್ರೆ ಟಾನೀಕು ಸೂಜಿ
ಬದುಕಲೆಷ್ಟು ಬೇಕು ಗುಕ್ಕು ಮುದ್ದೆ
ಕಣ್ಣ ತುಂಬಾ ಸೊಂಪಾದ ನಿದ್ದೆ
ಅವೂ ಬರಲೊಲ್ಲವು ಇತ್ತೀಚೆಗೆ
ಆದರೂ ವಿರಮಿಸುವೆವು ಒರಗಿ ಮಂಚದಂಚಿಗೆ.
ರಚನೆ: ಕುಮಾರ್ ಬಿ ಬಾಗೀವಾಳ್.
Comments
Post a Comment