Excellent motivational article " Baduku dussaravadaga..." By Kumar B Bagival.
ಬದುಕು ದುಸ್ಸರವಾದಾಗ…. ಪುಟಿಯುವ ನಾವು ಹೀಗೆ...
ಬದುಕು ದುಸ್ಸರವಾದಾಗ , ಪುಟಿದೇಳುವ ಮನಸಿಗೊಂದು ನಿದರ್ಶನ ಇದು. ಬದುಕು ಇನ್ನೇನು ಮುಗಿಯಿತು ಎಂದುಕೊಳ್ಳುವ ಹೊತ್ತಿಗೆ ಬದುಕ ದಾರಿಯ ಮುಂದೆ ಕತ್ತಲಾದಂತಹಾ ಭ್ರಮೆ ಆವರಿಸಿದಾಗ,ಮುಂದಿನ ದಾರಿ ಅನಾವರಣಗೊಳ್ಳದಿದ್ದಾಗ, ಆಕಾಶವೇ ಕಳಚಿ ತಲೆಯಮೇಲೆ ಬಿಂದಂತಹ, ತಲೆಯ ಮೇಲೆ ಚಪ್ಪಡಿ ಎಳೆದು ಕೊಂಡವೇನೋ ಎಂಬಂತೆ ಕೈಕಟ್ಟಿ ಕುಳಿತು ಕೊಳ್ಳದೇ, ಭ್ರಮನಿರಸನಗೊಳ್ಳದೆ ಇದ್ದುದನ್ನ ಕಳಚಿ ಇದ್ದುದರಲ್ಲೇ ಹೊಸತನವನ್ನು ಬರಮಾಡಿಕೊಂಡು ಬದುಕನ್ನ ಪುನಶ್ಚೇತನಗೊಳಿಸಿಕೊಳ್ಳುವುದನ್ನು ಕಲಿಯಲು ಒಂದು ಅನುಸರಿಸಬಹುದಾದ ಪಕ್ಷಿ ಯಾವುದಾದರೂ ಇದ್ದರೆ ಅದು ಹದ್ದು ಮಾತ್ರ.
.
ಅದು ತನ್ನ ಜೀವಿತಾವಧಿಯಲ್ಲಿ ಎರಡು ಮಜಲುಗಳನ್ನು ಕಾಣುತ್ತದೆ. ಮೊದಲ ಮಜಲಿನಲ್ಲಿ ಅದು ಇತರೆ ಎಲ್ಲಾ ಪಕ್ಷಿಗಳ ಹಾಗೆಯೇ ಹುಟ್ಟಿ ಹಾರಲು ಕಲಿತು, ತನ್ನ ಪೋಷಕರಿಂದ ಭೇಟೆಯಾಡುವುದನ್ನ ಕಲಿಯುತ್ತದೆ, ಭೇಟೆಯನ್ನ ಹರಸಿ ಹಾರಿ ಬಹುದೂರ ಹೋಗುವುದನ್ನೂ, ಅತೀ ಎತ್ತರದಲ್ಲಿ ಹಾರುತ್ತಾ ಸಾಮಾನ್ಯ ಮಾನವನಿಗಿಂತ ಮೂರರಿಂದ ಮೂರೂವರೆ ಪಟ್ಟು ಕಣ್ಣಿನ ತೀಕ್ಷ್ಣತೆ ಹೊಂದಿರುವ ಅದು ಆಕಾಶದೆತ್ತರಕೆ ಹಾರಿ ಸುತ್ತುತ್ತಾ ಸುತ್ತುತ್ತಾ ತದೇಕಚಿತ್ತದಿಂದ ತನ್ನ ಗುರಿಯೆಡೆಗೆ ಮಾತ್ರ ಗಮನಹರಿಸಿ, ಕೇಂದ್ರೀಕೃತ , ಹಾಗೂ ಸುರುಳಿ ಮಾದರಿಯಲ್ಲಿ ತನ್ನ ಭೇಟೆಯನ್ನ ಹರಸುತ್ತಾ ಸಾಗುತ್ತಾ, ತನ್ನ ಗುರಿ ಸಿಕ್ಕೊಡನೆ ತಡಮಾಡದೆ ತನ್ನ ಗುರಿಯತ್ತ ಸಾಗುವ ಹದ್ದು ತನ್ನ ಭೇಟೆಯನ್ನು ಕ್ಷಣಮಾತ್ರದಲ್ಲಿ ಹೊತ್ತೊಯ್ಯುತ್ತದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಬೇಡ ಅನ್ನೋದು ಗಾದೆ ಮಾತು ಈ ಗಾದೆ ಮಾತನ್ನ ಇಂಚಿಂಚೂ ಪಾಲಿಸುತ್ತದೆ ಈ ಪಕ್ಷಿ. ತದೇಕಚಿತ್ತತೆಗೆ, ಏಕಾಗ್ರತೆಗೆ,ಗುರಿಗೆ ಗುರಿಯಿಡುವಿಕೆಗೆ, ಒಂದು ಬಿಂದುವಿನಿಂದ ಸುರುಳಿಯಾಕಾರದ ದೃಷ್ಟಿಯ ಸಮಗ್ರತೆಗೆ, ಹೀಗೆ ಹಲವುಗಳಿಗೆ ತಕ್ಕ ಉದಾಹರಣೆಗಳಿಗೆ ಹದ್ದನ್ನು ಬಿಟ್ಟು ಬೇರೆ ಉದಾಹರಣೆ ನೀಡುವುದು ವಿಫಲ ಪ್ರಯತ್ನವಾದೀತು. ಗುರಿಯ ಬೆನ್ನಟ್ಟುವ ನಿಟ್ಟಿನಲ್ಲಿ ಹದ್ದಿನ್ನು ಮಾದರಯಾಗಿಸಿಕೊಂಡಲ್ಲಿ ಸಾಧನೆಯನ್ನು ಉತ್ತಮವಾಗಿ ಯಶಸ್ವಿಯಾಗಿ ಸಾಧಿಸುವುದರಲ್ಲಿ ಸಂಶಯವಿಲ್ಲ. ಹಾಗೆ ಹದ್ದಿನ ಜೀವನದಲ್ಲಿನ ಮತ್ತೊಂದು ಮಜಲು ಬಹುತೇಕ ಪರಿಚಯವಿರಲಿಕ್ಕಿಲ್ಲ. ಅದರ ಪರಿಚಯ ಇಲ್ಲಿದೆ ನೋಡಿ, ಹದ್ದಿನ ಮತ್ತೊಂದು ಮಜಲು. ಹದ್ದಿಗೆ ವಯಸ್ಸಾದಂತೆ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅದರ ರೆಕ್ಕೆಗಳು ಅತಿಯಾಗಿ ಬಲಿತು ಭಾರವಾಗತೊಡಗುತ್ತವೆ. ಹಾರುವುದಿರಲಿ ರೆಕ್ಕೆಗಳನ್ನು ಒಮ್ಮಲೆ ಎತ್ತಲೂ ಕೂಡ ಕಷ್ಟವಾಗುತ್ತಾ ಹೋಗುತ್ತದೆ, ಹಾಗೆಯೇ ಅದರ ಕೊಕ್ಕು ಪೂರ್ಣವಾಗಿ ಬಾಗಿ ತನ್ನ ಬೇಟೆಯನ್ನು ಕುಕ್ಕಿ ತಿನ್ನಲೂ ಸಾದ್ಯವಾಗದಷ್ಟು, ಕಾಲಿನ ಉಗುರುಗಳೂ ಹಾಗೆ ತುಂಬಾ ಬಾಗಿ ಬೇಟೆಯನ್ನು ಹಿಡಿಯದಷ್ಟು, ಓ… ಏನಾಯಿತು ನನಗೆ ನನ್ನ ಜೀವನ ಮುಗಿಯಿತು ಇನ್ನು ಬೇಟೆಯನ್ನು ನಾನು ಆಡಲಾರೆ, ತಿನ್ನಲು ಸಾದ್ಯವಾಗುತ್ತಿಲ್ಲ, ಇನ್ನು ಹಸಿವಿನಿಂದಲೇ ನರಳಿ ಸಾಯುತ್ತೇನೇನೋ ಎನ್ನುವಷ್ಟರ ಮಟ್ಟಿಗೆ ಅದರ ದೇಹ ಭಾರ. ಇಂತಹಾ ದುಸ್ತಿತಿಗೆ ತಲುಪಿದ ಹದ್ದಿನ ಜಾಗದಲ್ಲಿ ಮಾನವರಾದಿಯಾಗಿ ಬೇರೆ ಯಾವುದೇ ಜೀವಿಯಾಗಿದ್ದರೂ ಕೊರಗಿ ಕೊರಗಿ ಸಾಯುತ್ತಿದ್ದವು ಎಂಬುದು ನೂರಕ್ಕೆ ನೂರು ಸತ್ಯವಾಗಿರುವ ಮಾತಾದೀತು. ಆದರೆ ಹದ್ದು ಧೃತಿಗೆಡದೆ ಹೇಗಾದರೂ ಮಾಡಿ ತನ್ನ ಜೀವಿತ ಅವಧಿ ಇಷ್ಟಕ್ಕಂತೂ ಮುಗಿಯೋದಿಲ್ಲ… ಇನ್ನೂ ಸಾಕಷ್ಟಿದೆ… ಬದುಕಲೇ ಬೇಕು…. ಬದುಕಲಿಕ್ಕಾಗಿ ಹೋರಾಟ ಅತ್ಯಗತ್ಯ ಎಂದು ತಿಳಿದು, ನನಗೆ ಕಷ್ಟವಾದರೂ ಸರಿಯೆ ನನ್ಬ ಜೀವಿತದ ಈ ಅವಧಿಯಲ್ಲಿ ಅಡ್ಡ ಬಂದಿರುವ ಈ ತೊಡಕನ್ನು ಸರಿಸಲೇಬೇಕು ಎಂದು ತೀರ್ಮಾನಿಸಿ ಒಂದು ನಿರ್ಧಾರಕ್ಕೆ ಬರುತ್ತದೆ. ಅದು ಒಂದು ಎತ್ತರದ ಬಂಡೆಯ ಮೇಲೇರಿ ಆ ಬಂಡೆಗೆ ತನ್ನ ಕೊಕ್ಕನ್ನು ಬಡಿದು ಬಡಿದು ನಿರಂತರವಾಗಿ ಮುರಿಯುವವರೆಗೂ ಬಡಿದು ತನ್ನ ಬಾಗಿದ ಕೊಕ್ಕನ್ನು ಮುರಿದು ಹಾಕುತ್ತದೆ. ತನ್ನ ಕಾಲಿನ ಬಾಗಿದ ಉಗುರುಗಳನ್ನೂ ಅಷ್ಟೇ ಬಂಡೆಗೆ ಬಡಿದು ಮುರಿಯುತ್ತದೆ… ಮುರಿದ ನಂತರ.. ಹೊಸ ಕೊಕ್ಕು , ಉಗುರುಗಳು ಬೆಳೆಯುವವರೆಗೂ ಧೃಡನಿಷ್ಚಯದಿಂದ ಬದುಕುತ್ತದೆ, ಕೊಕ್ಕು , ಉಗುರು ಬೆಳೆದ ನಂತರ, ಕೊಕ್ಕಿನಿಂದ ತನ್ನ ಭಾರವಾದ ಗರಿಗಳನ್ನೂ ಕಿತ್ತು ಹಾಕಿ ಹೊಸ ಗರಿಗಳು ಬರುವ ಹಾಗೆ ಮಾಡುತ್ತದೆ. ಹೊಸ ಕೊಕ್ಕು, ಉಗುರು ರೆಕ್ಕೆಗಳೊಂದಿಗೆ ಹದ್ದಿನ ಹೊಸಾ ಜೀವನದ ಮಜಲು ಪ್ರಾರಂಭವಾಗುತ್ತದೆ. ಹೊಸ ಸಂಘರ್ಷಕ್ಕೆ ತೆರೆದುಕೊಂಡ ಹದ್ದು, ಪುನರ್ಜೀವನವನ್ನು ನಡೆಸಲಾರಂಬಿಸುತ್ತದೆ.
ಹೀಗೆ ಹೊಸ ಜೀವನವನ್ನು ಪ್ರಾರಂಭಿಸುವ ಹದ್ದು ನಮ್ಮ ಜೀವನಕ್ಕೆ ಒಂದು ಒಳ್ಳೆಯ ಪಾಠವನ್ನು ಕಲಿತುಕೋ ಎಂದು ಹೇಳುವಷ್ಟರಟ್ಟಿಗೆ ಗಗನದಲ್ಲಿ ಹಾರುತ್ತಾ ಸಂದೇಶಿಸುತ್ತದೆ. ಹಾಗೆ ಹದ್ದಿನ ಜೀವನದ ಎರಡನೇ ಮಜಲಿನಿಂದ ಮಾನವರಾದ ನಾವುಗಳು ಕಲಿಯುವುದು ಸಾಕಷ್ಟಿದೆ.ಕಷ್ಟಗಳೆದುರಾದಾಗ ನನ್ನಿಂದ ಆಗದು ಎಂದು ಕೈಕಟ್ಟಿ ಕುಳಿತುಕೊಳ್ಳುವ ನಾವು, ಜೀವನದ ಸಂಘರ್ಷಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುವ ನಾವು, ನಾವೂ ಧೈರ್ಯಗೆಟ್ಟು ನಮ್ಮನ್ನು ನಂಬಿದವರನ್ನೂ ಧೈರ್ಯಗೆಡಿಸುವ ನಾವು, ಹದ್ದಿನ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ಸ್ವಲ್ಪಮಟ್ಟಿಗೆ ನೋವಾದರೂ ಪರವಾಗಿಲ್ಲ ಮುಂದಿನ ಸ್ಥಿತಿ ಸುಧಾರಿಸುತ್ತದೆ ಎಂಬ ಛಲದಿಂದ, ನಮ್ಮ ಬೆಳವಣಿಗೆಗೆ ಅಡ್ಡಿಯಾಗುವ ಯಾವುದೇ ತೊಂದರೆಗಳನ್ನು ಕಷ್ಟವಾದರೂ ಪರವಾಗಿಲ್ಲ ಕಿತ್ತೊಗೆಯಬೇಕಾಗುತ್ತದೆ. ಹಾಗಾಗಿ ಜೀವನ ದೊಡ್ಡದು, ಅದಕ್ಕೆದುರಾಗುವ ಕಷ್ಟಗಳಿಗಿಂತ ಎಂಬ ತಾಳ್ಮೆ,ಧೃಡತೆ, ಕ್ಷಮತೆ, ಧೈರ್ಯ, ಸಂಕಲ್ಪಮ ಮಾಡಿದರೆ ಖಂಡಿತವಾಗಿಯೂ ಉತ್ತಮ ಜೀವನ ಸಾಧ್ಯ ಎಂಬ ಅಂಶವನ್ನು ಮನಗಂಡು ಬದುಕಬೇಕು. ಅದೇ ಆಶಯದೊಂದಿಗೆ ಈ ಲೇಖನವನ್ನ ಮುಗಿಸುತ್ತಿದ್ದೇನೆ.
ಲೇಖಕರು : ಕುಮಾರ್ ಬಿ ಬಾಗೀವಾಳ್.
Comments
Post a Comment