ಮಾತೆಂದರೆ ಅದು ನಿನದೇ ಆಗಿರಬೇಕು.... ರಚನೆ : ಕುಮಾರ್ ಬಿ ಬಾಗೀವಾಳ್
ಮಾತೆಂದರೆ ಅದು ನಿನದೇ ಆಗಿರಬೇಕು….
ಮಾತೆಂದರೆ ಅದು ನಿನದೇ ಆಗಿರಬೇಕು
ಪಿಸುಗುಟ್ಟರೂ ಗುಡುಗಿ ನಡುಗಿದ ಹಾಗೆ
ಹೊರಟು ತೊಗಟೆಯೊಳಗಿನ ಹಲಸಿನ ಹಾಗೆ
ಹೊಲದೊಳಗಿನ ಹೂತಿಟ್ಟ ಮೊಳೆತ ಬೀಜದ ಹಾಗೆ
ಮಾತೆಂದರೆ ಅದು ನಿನದೇ ಆಗಿರಬೇಕು
ಮೊದಲ ಮಳೆಗೆ ಮೈಯ್ಯೊಡ್ಡಿ ತೋಯ್ದ ಅನುಭವದ ಹಾಗೆ
ಚೈತ್ರದಾಗಮನಕೆ ಉದುರಿದೆಲೆ ಮತ್ತೆ ಚಿಗರಿರುವ ಹಾಗೆ
ನಸುಕಿನಲಿ ಭಾನ ಬಯಲಿನಲಿ ಆಡಲು ಬಂದ ಬೆಳ್ಳಿಯ ಹಾಗೆ.
ಮಾತೆಂದರೆ ಅದು ನಿನದೇ ಆಗಿರಬೇಕು
ಹೂವ ಗುಡಿಯೊಳಗಿನ ಘಮಿಸೊ ಘಮದ ಹಾಗೆ
ಮಳೆ ಚುಂಬಿಸಿದ ಬಿಸಿಲ ಬೆಳಕ ಬಣ್ಣ ತೆರೆದ ಹಾಗೆ
ಕಡೆದ ಮಜ್ಜಿಗೆಯ ಮೇಲೆ ತೇಲುವ ಬೆಣ್ಣೆಯ ಹಾಗೆ
ಮಾತೆಂದರೆ ಅದು ನಿನದೇ ಆಗಿರಬೇಕು
ತಾನು ಸುಟ್ಟರೂ ಜಗಕೆ ಬೆಳಕನೀವ ದೀಪದ ಹಾಗೆ
ತಾನೊಡೆದರೂ ಹಾಲು ಹೆಪ್ಪಾಗಿ ಸೊಂಪಾಗುವ ತುಪ್ಪದ ಹಾಗೆ
ತನ್ನೊಡಲು ನೊಂದರೂ ನವಮಾಸ ಕೂಸನೊರುವ ಅಮ್ಮನ ಹಾಗೆ
ಆ ಮಾತಿಂದಲೆ ಮನ ಮನೆಗೆ ಬೆಲೆ
ಹೊಂಗಿರಣ ಒಮ್ಮೆಲೇ ತೊಳೆದ ಕತ್ತಲೆ
ಹಾಗಿರದಿದ್ದರೆ ಬಾಳುವ ಬದುಕ ಬೆತ್ತಲೆ
ಒಮ್ಮೆ ನಿನಗೋಗೊಡುವೆ ನಾ… ಅದು ನಿಜ ಸೆಲೆ.
ರಚನೆ : ಕುಮಾರ್ ಬಿ ಬಾಗೀವಾಳ್.
ಮಾತೆಂದರೆ ಮಾತು ನಿಮ್ಮ ಬರಹದ ಬರಹದ ಹಾಗೆ ಸುಂದರ ಅತಿ ಸುಂದರ
ReplyDeleteಥ್ಯಾಂಕ್ಯು... ಉತ್ತಮ ಕಾಮೆಂಟ್... ನಿಮ್ಮ ಪ್ರತೀ ಕಾಮೆಂಟ್ ಕಾವ್ಯಾತ್ಮಕ... ಉತ್ಸಾಹದಾಯಕ... ಆದರೆ ತಮ್ಮ ಪರಿಚಯ ಮಾಡಿಕೊಡಿ
DeleteThank you.
ReplyDelete