STORY TIME . BY www.bbksir.org

ಕಥೆ. ೨

ಜೀವನದ ಉತ್ತಮತೆಗೆ ಯಾರ ಸಲಹೆ ಉತ್ತಮ?

 ಸಂಭಾವಿತ , ಸರಳ, ಸಜ್ಜನಿಕೆಯ ನೇರ ನಡೆನುಡಿಯ ಕುಟುಂಬವದು. ತಂದೆಯೇ ಮಗನಿಗೆ ಆದರ್ಶ, ಮಗನಾದರೋ ಮರದಂತೆ ನೊಗ ಎಂಬಂತೆ. ಸರಳ ನಡೆ ,ನೇರ ನಡೆ,ನುಡಿ. ಉತ್ತಮ ಯೋಚನೆ,ಯೋಜನೆ ಮಾಡುವ ಸಾಮರ್ಥ್ಯ ಹೊಂದಿರುವವ. ಆದರೆ ಮಾಡುವ ಕೆಲಸಗಳು ,ನಿರ್ಧಾರಗಳಲ್ಲಿ  ಸ್ವಲ್ಪ ಗೊಂದಲ ಅವನಿಗೆ. ಕೆಲವೊಮ್ಮೆ ಅವನ ಸಾಮರ್ಥ್ಯ ಕೆಲ ಸ್ನೇಹಿತರು, ಸುತ್ತಮುತ್ತಲಿನ ಜನರಿಗೆ ಸಹಿಸಲಾಗದ ವಿಷಯವಾಗಿತ್ತು. ಏನಾದರೂ ಒಳ್ಳೆಯ ಕೆಲಸ ಮಾಡುವ ಎಂದು ಯೋಚಿಸಿದರೆ ಅದಕ್ಕೆ ಕಲ್ಲು ಹಾಕುವವರೇ ಹೆಚ್ಚು, ದಾರಿ ತಪ್ಪಿಸುವವರನೇಕ. ಕೆಲವರು ಅವನ ಕೆಲಸವನ್ನು ಒಪ್ಪಿ ಬೆನ್ನು ತಟ್ಟಿದರೆ, ಕಾಲೆಳೆದವರೇ ಹೆಚ್ಚು, " ನೀನು ಮಾಡುತ್ತಿರುವ ಕೆಲಸ ಕೆಟ್ಟದ್ದು ನೀನು ಕೆಟ್ಟವ " ಎಂದು ಹೀಯಾಳಿಸಿ ಮನ ನೋಯುವಂತೆ ನಡೆದುಕೊಳ್ಳುತ್ತಿದ್ದರು, ಇದು ಅವನಿಗೆ ಇರಿಸುಮುರಿಸಾಗುತ್ತಿತ್ತು . ಒಂದು ಎರಡು ಬಾರಿಯಲ್ಲ ಸಾಕಷ್ಟು ಬಾರಿ ಹೀಗೆಯೇ ಮಾಡಿ ಅವನನ್ನು ತುಳಿದೇಬಿಟ್ಟರು ಅವನೇ ನಂಬಿದ್ದ ಜನರೆಲ್ಲಾ. ಈ ಘಟನೆಗಳು ಅವನನ್ನ ಹಿಂಸಿಸತೊಡಗಿದವು, ಜೀವನದಲ್ಲಿ ಕುಗ್ಗಿಹೋದ, ಖಿನ್ನತೆಗೆ ಒಳಗಾದವನಂತೆ ಇರತೊಡಗಿದ, ಯಾವುದರಲ್ಲೂ ಆಸಕ್ತಿ ಇಲ್ಲದಂತಾದ ಮನೆ ಬಿಟ್ಟು ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟ.
ಹೀಗೆ ಸ್ವಲ್ಪ ದಿನಗಳವರೆಗೆ ದಿನಗಳುರುಳಿದವು. 

ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸುತ್ತಲೇ ಬಂದಿದ್ದ ಅಪ್ಪ ಅದೊಂದು ದಿನ ಮಗನನ್ನು ಸಂಜೆ ತನ್ನ ಕೊಠಡಿಗೆ ಬರಲು ಹೇಳಿ ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೊರಟರು. ಹೀಗೆ ಹೋದ ಅಪ್ಪ ಸಂಜೆ ಒಂದಿಷ್ಟು ಸಾಮಗ್ರಿಗಳೊಂದಿಗೆ ಮನೆಗೆ ಬಂದರು. ಶುಚಿಯಾಗಿ ನಂತರ ಕೊಠಡಿ ಹೊಕ್ಕ ಅಪ್ಪ ತಾವು ತಂದಿದ್ದ ಸಾಮಗ್ರಿಗಳನ್ನು ಜೋಡಿಸಿ ಮಗನನ್ನು ಕೊಠಡಿಗೆ ಬರಲು ಹೇಳಿದರು. ಕೊಠಡಿ ಪ್ರವೇಶಿಸಿದ ಮಗನನ್ನು ಕುರಿತು ತಾವು ಜೋಡಿಸಿರುವ ಸಾಮಗ್ರಿಗಳನ್ನು ವೀಕ್ಷಿಸಲು ಹೇಳಿದರು. ಮಗ ಅಸಹಾಯಕನಾಗಿ ನಿಂತ. ಅಷ್ಟಕ್ಕೂ ಅಪ್ಪ ಜೋಡಿಸಿದ್ದ ಸಾಮಗ್ರಿಗಳು ಯಾವುವೆಂದರೆ ಒಂದು ಸಮತಟ್ಟಾದ ಮೇಲ್ಮೈವುಳ್ಳ ಕನ್ನಡಿ, ಮತ್ತೊಂದು ಉಬ್ಬು ತಗ್ಗು ಮೇಲ್ಮೈವುಳ್ಳ ಕನ್ನಡಿ. ಕನ್ನಡಿ ಮುಂದೆ ನಿಂತ ಮಗನಿಗೆ ಕನ್ನಡಿಯನ್ನು ಗಮನಿಸುವಂತೆ ತಿಳಿಸಿದಾಗ ಮಗ ಅವುಗಳ ಮೇಲ್ಮೈಗಳಲ್ಲಿನ ವ್ಯತ್ಯಾಸವನ್ನು ಗುರುತಿಸಿ ಹೇಳಿದ. ನಂತರ ಅಪ್ಪ ತಾನು ತಂದಿದ್ದ ಕೋಲುಗಳನ್ನು ತೆಗೆದು ತೋರಿಸುತ್ತಾ ಅವುಗಳ ವ್ಯತ್ಯಾಸವನ್ನು ಗುರುತಿಸಲು ತಿಳಿಸಿದರು, ಅವುಗಳ ವ್ಯತ್ಯಾಸವನ್ನೂ ಮಗ ಗುರುತಿಸಿ ಹೇಳಿದ. ನಂತರ ಅಪ್ಪ ನೇರವಾದ ಕೋಲನ್ನು ಸಮತಟ್ಟಾದ ಕನ್ನಡಿಯ ಮುಂದೆ ನೇರವಾಗಿ ಹಿಡಿದು ವೀಕ್ಷಿಸಲು ತಿಳಿಸಿದರು ಕೋಲಿನ ಬಿಂಬ ನೇರವಾಗೇ ಇತ್ತು. ಅದೇ ಕೋಲನ್ನು ಉಬ್ಬುತಗ್ಗು ಮೇಲ್ಮೈ ಇರುವ ಕನ್ನಡಿ ಮುಂದೆಯೂ ನೇರವಾಗಿ ಹಿಡಿದು ವೀಕ್ಷಿಸಲು ತಿಳಿಸಿದರು, ಅದೇ ಕೋಲಿನ ಬಿಂಬ ಇಲ್ಲಿ ಅಂಕುಡೊಂಕಾಗಿ ಕಾಣುತ್ತಿತ್ತು ಇದನ್ನು ಮಗ ಕೂಡ ಗಮನಿಸುತ್ತಿದ್ದ. ನಂತರ ಅಪ್ಪ ಅಂಕುಡೊಂಕಾದ ಕೋಲನ್ನು ಸಮತಟ್ಟಾದ ಮೇಲ್ಮೈ ಇರುವ ಕನ್ನಡಿ ಮುಂದೆ ಹಿಡಿದರು, ಬಿಂಬ ಕೂಡಾ ಡೊಂಕಾಗಿಯೇ ಇತ್ತು, ಅದೇ ಡೊಂಕಾದ ಕೋಲನ್ನು ಉಬ್ಬು ತಗ್ಗಿನ ಮೇಲ್ಮೈ ಇರುವ ಕನ್ನಡಿಯ ಮುಂದೆ ಹಿಡಿದರು , ಕೋಲಿನ ಬಿಂಬ ಡೊಂಕಾಗೇ ಇತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಮಗನಿಗೆ ಅಪ್ಪ ಇದರ ಅರ್ಥವನ್ನು ವಿವರಿಸುತ್ತಾ ಹೀಗೆ ಹೇಳಿದರು, " ಮಗನೆ ಮೊದಲನೆ ಅಂದರೆ ಸಮತಟ್ಟಾದ ಮೇಲ್ಮೈವುಳ್ಳ ಕನ್ನಡಿ ಆ ಎರಡೂ ಕೋಲುಗಳ ಬಿಂಬವನ್ನು ಅವು ಮೂಲತಹ ಹೇಗಿದೆಯೋ ಹಾಗೇ ನೀಡಿತು, ಆದರೆ ಉಬ್ಬು ತಗ್ಗು ಮೇಲ್ಮೈವುಳ್ಳ ಕನ್ನಡಿ ನೇರ ಕೋಲಿನ ಸತ್ಯವನ್ನು ಮರೆಮಾಚಿ ಆ ಕೋಲು ಡೊಂಕು ಎಂಬ ಬಿಂಬವನ್ನು ನೀಡಿತು, ಡೊಂಕು ಕೋಲಿನ ಬಿಂಬವನ್ನು ಡೊಂಕು ಎಂದೇ ನೀಡಿತು ಅಲ್ಲವೇ" ಎಂದರು . ಮಗ "ಹೌದು " ಎಂದ. ಮಾತು ಮುಂದುವರಿಸಿದ ಅಪ್ಪ " ಮಗನೇ ಸಮಾಜದಲ್ಲೂ ಹೀಗೆ ಎರಡೂ ರೀತಿಯ ಜನರಿರುತ್ತಾರೆ, ಕೆಲವರು ಸಮತಟ್ಟಾದ ಕನ್ನಡಿಯ ಹಾಗೆ ಸರಿಯಾದದ್ದನ್ನು ಸರಿ ಎಂದೂ, ತಪ್ಪನ್ನು ತಪ್ಪು ಎಂದೂ ನೇರವಾಗಿ ಹೇಳುತ್ತಾರೆ, ಇನ್ನು ಕೆಲವರು ಅವರೇ ಸರಿಯಿಲ್ಲದಿದ್ದರೂ ಪ್ರಪಂಚವೆಲ್ಲವೀ ನಮ್ಮಂತೆಯೇ ಎಂದು ನೇರ ಇರುವವರನ್ನೂ ಕೂಡ ಡೊಂಕೆಂದು, ಒಳ್ಳೆಯದನ್ನೂ ಕೆಟ್ಟದ್ದೆಂದು ಬಿಂಬಿಸುತ್ತಾರೆ, ಈ ಮೂಲಕ ತಮ್ಮ ಚಪಲವನ್ನು ತೀರಿಸಿಕೊಳ್ಳುತ್ತಾರೆ. ಹಾಗಾಗಿ ನಾವು ನಮ್ಮ ನಡೆ,ಕೆಲಸಗಳ ಮಾಪನವಾಗಿ ಮೊದಲನೇ ವರ್ಗದ ಜನರಿಂದ ಸಲಹೆ ಸೂಚನೆಗಳನ್ನು ತಿಳಿದು ಮುನ್ನಡೆಯಬೇಕೇ ಹೊರತು ಎರಡನೇ ವರ್ಗದವರಿಂದಲ್ಲ. ನಿನ್ನ ಇತ್ತೀಚಿನ ಬೆಳವಣಿಗೆಗಳನ್ನು ನಾನು ಸ್ವತಃ ಗಮನಿಸುತ್ತಾ ಬಂದಿದ್ದೆ, ಅವರೆಲ್ಲರೂ ನಿನ್ನನ್ನ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದದ್ದನ್ನು ಗಮನಿಸಿದ್ದೆ ಹಾಗಾಗಿ ನಿನಗೆ ಸೂಕ್ತ ಉದಾಹರಣೆ ಸಹಿತ ಸಲಹೆ ನೀಡಬೇಕೆಂದು ಈ ವ್ಯವಸ್ಥೆ ಮಾಡಿದೆ" ಎಂದರು. ಅಪ್ಪನ ಸಲಹೆ ಮಗನಿಗೆ ಮೆಚ್ಚುಗೆ ಆಯಿತು ,ಜೊತೆಗೆ ಪ್ರೇರಣೆ ಕೂಡ. ಮಗ ಅಪ್ಪನಿಗೆ ಇನ್ನು ಮುಂದೆ ತಾವು ತಿಳಿಸಿದ ಹಾಗೆಯೇ ಎಚ್ಚರಿಕೆಯಿಂದ ಸಾಗುವೆ ಎನ್ನುತ್ತಾ ಅಪ್ಪನ ಆಶೀರ್ವಾದ ಪಡೆದು ಕೊಠಡಿಯಿಂದ ತೆರಳಿದ. ಮುಂದಿನ ದಿನಗಳಲ್ಲಿ ಮಗನ ಕೆಲಸಗಳು ಉತ್ತಮವಾಗಿದ್ದನ್ನು ಗಮನಿಸಿದ ಅಪ್ಪ‌ಮಗನ ಕಾರ್ಯದಲ್ಲಿ ಖುಷಿಯಾಗಿ ತೊಡಗಿಕೊಂಡು ಮಗನ ಉತ್ತಮ ಜೀವನದ ಭಾಗವಾಗಿ ಮುಂದುವರೆದರು.

ರಚನೆ : ಕುಮಾರ್.ಬಿ.ಬಾಗೀವಾಳ್
           ಶಿಕ್ಷಕರು.

Comments

Post a Comment

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES