Basaveshwara article


ಓಂ ಶ್ರೀ ಗುರು ಬಸವ ಲಿಂಗಾಯ ನಮಃ.


ವಿಶ್ವಗುರು  ಬಸವಣ್ಣನವರು ನಡೆದ ಹಾದಿ, ಮಾಡಿದ ಕಾಯಕ, ಮುಡಿದ ಭಕ್ತಿ, ನುಡಿದ ವಚನಗಳು ಸರ್ವಕಾಲಿಕ ಸತ್ಯವೆಂಬುದಕ್ಕೆ ಸಾಕ್ಷಿಯಾಗಿವೆ ಇಂದು ಅಂದು ನುಡಿದ ಮಾತುಗಳು. ಈದಿನ ಬಸವಣ್ಣನವರ ಹಲವಾರು ವಚನಗಳನ್ನು ಅಳವಡಿಸಿಕೊಂಡು ನಡೆಯಬೇಕಿದೆ. ಅದರಲ್ಲೂ ಇಡೀ ವಿಶ್ವವೇ ಕೈಕಟ್ಟಿ ಕೂತಿದೆ ಕೊರೋನಮಹಾಮಾರಿಯಿಂದಾಗಿ‌.ಮಹಾನಗರಗಳೇ ಬರಿದಾಗಿವೆ, ಮೆರೆದ ದೇಶಗಳೇ ಮರೆಯಾಗುವ ಹಂಚಿಗೆ ಬಂದು ನಿಂತಿವೆ, ಸಾಗರದಷ್ಟು ಸಂಶೋದಿಸಿದರೂ ಪರಿಹಾರ ಶೂನ್ಯ ಎನ್ನುವಂತಿದೆ. ದೇವಾನುದೇವತೆಗಳಿಗಾಗಿ ಸಾಲುಗಟ್ಟಿ ಸಮಯ ಮೀರಿ ನಿಂತ ದೇವಾಲಯಗಳ ಬಾಗಿಲುಗಳು ಮುಚ್ಚಿವೆ,ಸೂರ್ಯೋದಯಕ್ಕೆ ಮೊದಲೇ ಕಿವಿಗಡಿಚಿಕ್ಕುವ ನಮಾಜುಗಳ ಕೇಂದ್ರಗಳಾದ ಮಸೀದಿಗಳ ಬಾಗಿಲುಗಳಲ್ಲೂ ಬೀಗಗಳು ಜೋತುಬಿದ್ದಿವೆ,ಭಾನುವಾರದ ಬಂಧು ಭಗಿನಿಯರ ಸಾಮೂಹಿಕ ಪ್ರಾರ್ಥನೆಗಳೂ ಇಲ್ಲ,ಮೊಂಬತ್ತಿಯ ಬೆಳಕೂ ಇಲ್ಲದ ಚರ್ಚ್ಗಳು ಕತ್ತಲ ಕೋಣೆಯಾಗಿವೆ. ಹೀಗೆ ಹಲವು ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ದರ್ಶನ ನಿಂತಿವೆ. ಪೂಜೆ ಪುರಸ್ಕಾರಗಳು ಎಂದರೆ ದೇವಾಲಯದ ನಾಲ್ಕು ಗೋಡೆಗಳೊಳಗೇ ನಡೆಯಬೇಕು ,ಪ್ರಾರ್ಥನೆಗಾಗಿ ಅಲ್ಲಿಯೇ ಸೇರಬೇಕು ಎಂಬ ಮಾತು ಈಗ ಹೆಸರಿಲ್ಲದಂತಾಗಿದೆ. ಈ ಸಮಯದಲ್ಲಿ ಬಸವಣ್ಣನವರ ಒಂದು ವಚನ ಹೇಳಿ ಮಾಡಿಸಿದಂತಿದೆ. 

"ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ.
ಕೂಡಲ ಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ."

ಈ ಸಂಧರ್ಭಕ್ಕೆ ಸತ್ಯವಾದ ಸೂಕ್ತವಾದ ವಚನ ಇದು. ನಿಜ ಶಿವಶರಣ ಬಸವಣ್ಣ ಲಿಂಗವನ್ನು ಅಂಗಕ್ಕೇರಿಸಿದ್ದಾರೆ, ಅಂಗವನ್ನೇ ದೇವಾಲಯವನ್ನಾಗಿಸಿದ್ದಾರೆ,ಶಿರವನ್ನ ಕಲಶವಾಗಿಸಿದ್ದಾರೆ. ದೇಹವನ್ನ ಜಂಗಮವಾಗಿಸಿದ್ದಾರೆ. ಎಂತಹಾ ಅದ್ಭುತ ಎಂದೆನಿಸುತ್ತದೆ ಸತ್ಯ "ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ." 
ಮಂದಿರ,ಮಸೀದಿ,ಚರ್ಚ್ಗಳು ಭಕ್ತರಿಗಾಗಿ ಬಾಗಿಲು ತೆರೆಯದೇ ಇರುವಾಗ, ಜಂಗಮವಾದ ಅಂಗದ ಮೇಲಿನ ಲಿಂಗ ಮಾತ್ರ ಈ ಪ್ರಪಂಚದಲ್ಲಿ ಸರ್ವ ಭಕ್ತರು ಪೂಜುತ್ತಿರುವ ಏಕೈಕ ದೇವನಾಗಿದೆ. ಸ್ಥಾವರ ದೇವಾಲಯ ಅಳಿದರೂ ಕೊನೆಗೆ ಉಳಿವುದೊಂದೇ ಜಂಗಮ ದೇವಾಲಯ. ಭೌತಿಕ ಸ್ಥಿತಿಗಿಂತ ಭೌದ್ಧಿಕ ಸ್ಥಿತಿಗೆ ಮಹತ್ವ ಕೊಡಬೇಕಾದ ಗಮನದ ಮಹತ್ವದ ಅರಿವನ್ನುಂಟುಮಾಡಿದ ಪರಿ ಅದ್ಭುತವಾದ ಕಾರ್ಯವಾಗಿದೆ. ಕಾಯ, ಕಾಯಕದ ಸಹಯೋಗದೊಂದಿಗೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮಂತ್ರವಾಗಿಸಿ ವೇದ,ಮಂತ್ರ ತಂತ್ರಗಳನ್ನು ಗಡಿಯಾಚೆಗಟ್ಟಿದ ಮಹಾನ್ ಕಾಯಕ ಯೋಗಿಯ ಮಂತ್ರವೇ " ಕಾಯಕವೇ ಕೈಲಾಸ ","ದಾಸೋಹವೇ ದೇವಧಾಮ". ಅರ್ಥಶಾಸ್ತ್ರಕ್ಕೂ ಈ ಸಿದ್ಧಸೂತ್ರವನಿತ್ತ ಮಾಹಾನ್ ಅರ್ಥಶಾಸ್ತ್ರಜ್ಞ ಬಸವಣ್ಣ,ವಿಶ್ವದ ಇಂದಿನ ಆರ್ಥಿಕತೆಯ ಶೋಚನೀಯ ಸ್ಥಿತಿಗೆ, ಹಸಿವಿನ ಆಹಾಕಾರಕ್ಕೆ ಕಾಯಕ,ದಾಸೋಹದ ಸೂತ್ರವೇ ಪರಿಹಾರ ಎಂಬುದು ಒಪ್ಪಿ ಅನುಸರಿಸಲೇ ಬೇಕಾದ ಆರ್ಥಿಕ ನೀತಿ. 
ಜಗತ್ತಿಗೆ ಸಂಸತ್ತಿನ ಅರ್ಥ ತಿಳಿಯುವ ಮೊದಲೇ ಸಂಸತ್ ರಚಿಸಿ ಪ್ರಾಯೋಗಿಕವಾಗಿ ಮಾದರಿ ಸಂಸತ್ನ ಕಾರ್ಯಕಲಾಪಗಳನ್ನು ಹೇಗೆ ನಡೆಯಬೇಕೆನ್ನುವ,ಶೋಷಣೆಯ ಜಗತ್ತನ್ನ ಸಹಿಸಿ ಸಾಗುತ್ತಿದ್ದ ಜಗಕೆ, ಸ್ವ ಘೋಷಣೆಯ ರೂಪವಾಗಿ ವಚನಗಳ ಅಕ್ಷರ ಮಂತ್ರಪಠಿಸಿ ಉತ್ತರಿಸಿದ ಮಹಾಮಹಿಮ.ಅನುಭವದ ಮಾತುಗಳಿಗೆ ಅನುಭವಮಂಟಪವನ್ನು ರಚಿಸಿ ಜಾತ್ಯಾತೀತ, ವರ್ಣಾತೀತ,ವಯೋತೀತ,ಲಿಂಗಾತೀತ ಅವಕಾಶ ಕಲ್ಪಿಸಿ ಮಾದರಿ ಸಂಸತ್ ರಚಿಸಿದ ಸ್ಮರಣಾನುಭವಿ ಶ್ರೀ ಬಸವಣ್ಣ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವಿನ್ನೂ ಕಣ್ಬಿಡದ ಕೂಸಾಗಿದ್ದಾಗಲೆ,ಕಲಚುರಿ ರಾಜ ಬಿಜ್ಜಳನ ಮಂತ್ರಿ ಮಂಡಲದ ಮಹಾಮಂತ್ರಿಯಾಗಿದ್ದರೂ ತುಡಿತ,ಹೃದಯ ಬಡಿತ, ನಾಡಿಮಿಡಿತವೆಲ್ಲವೂ ಸರ್ವಸ್ವಾತಂತ್ರದ ಮೇಲೆಯೆ ಇತ್ತೆನ್ನುವುದಕ್ಕೆ ಪೂರಕವಾಗಿ ಬಸವಣ್ಣನವರು"ಕೂಡಲಸಂಗನ ಶರಣರು ಸ್ವತಂತ್ರ ಧೀರರು." ಎಂದು ಹೇಳುತ್ತಾ ರಾಜತಂತ್ರಿಕತೆಗೆ  ಭಾಷ್ಯ ಬರೆದು ಈಗಿನ ರಾಜನೀತಿಗೆ ಒಂದು ಎಚ್ಚರಿಕೆಯನ್ನು ಹೀಗೆ ನೀಡಿದ ರಾಜ್ಯಶಾಸ್ತ್ರಜ್ಞ.

ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು, ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ ! ಸತ್ಯದ ನಿಲವನರಿಯದೆ ಹೋದಿರಲ್ಲಾ, ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ! ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ !

ಇದನರಿತು ಆಳುವವರು ಬಾಳಿದರೆ ರಾಜ್ಯ, ಕಲ್ಯಾಣರಾಜ್ಯ ಕಟ್ಟುವುದರಲ್ಲಿ ಸಂದೇಹವಿಲ್ಲವೆಂಬುದು ಸರ್ವ ವೇಧ್ಯ. ನಡೆ ಯಾವುದಾದರೂ ನುಡಿ ಸಮ್ಮಿಳಿತವಾಗಲಿ, ಸತ್ಯದ ನಿಲುವಿರಲಿ,ಸದ್ಗುಣ ಸಂಪನ್ನತೆ ಇರಲಿ ನಡೆದ ದಾರಿಯದುವೆ ಸದ್ಗುರಿಯ ಮುಟ್ಟುವುದು ಸದ್ಫಲವ ನೀಡುವುದು ನಿಶ್ಚಿತವೆಂಬುದು ಸ್ಪಷ್ಟ.

ದಲಿತೋದ್ಧಾರಕ್ಕಾಗಿ 750ವರ್ಷಗಳ ಮೊದಲೇ ದಲಿತರ ಸಮಾನತೆಗಾಗಿ ಸಾಕಷ್ಟು ಶ್ರಮವಹಿಸಿ ದುಡಿದವರು, ದಲಿತ ಕೇರಿಗಳಲ್ಲಿ ಸಂಚರಿಸಿ ಅಂತರ್ಜಾತಿ ವಿವಾಹಕ್ಕೆ ಮುಹೂರ್ತವಿಟ್ಟ ಮಹಾನುಭಾವಿ ಸಮಾಜೋದ್ಧಾರಕ , ಇದಕ್ಕಾಗಿ ಪದವಿಯನ್ನೇ ಪಣಕ್ಕಿಟ್ಟ ತ್ಯಾಗಮಯಿ.ಸಮಾಜದ ಬಹು ಸ್ಥರದ ಎಲ್ಲಾ ಜಾತಿಗಳನ್ನು ಶರಣಮಯವಾಗಿಸಿ,ಯಾವ ಕೆಲಸವೂ ಕೀಳಲ್ಲವಂದು ಹೇಳಿ ಶ್ರಮವಿಭಜನೆ, ಸ್ಥರವಿನ್ಯಾಸದ ಮಹತ್ವವನ್ನು ಮಹತ್ವಪೂರ್ಣವಾಗಿ ಮಂಡಿಸಿ ಸಮಾಜಶಾಸ್ತ್ರದ ಪಿತಾಮಹ.

ಬಸವ ಜಯಂತಿಯ ಆಚರಣೆ ಕೃತಿಯಂದಾದರೆ ಶಿವಶರಣರ ನಡೆ ಅನುಕರಣೀಯ ಎಂಬುದನ್ನು ಬೆಳೆಸಿಕೊಳ್ಳೋಣ, ಬಸವಾದಿ ಶರಣರು ನಡೆದ ಹಾದಿಯಲಿ ಸಾಗೋಣ. 

ಲೇಖಕರು : ಕುಮಾರ್. ಬಿ. ಬಾಗೀವಾಳ್.
               ಶಿಕ್ಷಕರು,
               ಸರ್ಕಾರಿ ಪ್ರೌಢಶಾಲೆ ಮೇಟಗಳ್ಳಿ.
               ಮೈಸೂರು.








Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES