Poem DHEESHAKTHI AMBEDKAR BY : Kumar B Bagival.
ಧೀಶಕ್ತಿ ಅಂಬೇಡ್ಕರ
ನಿಂತಿಲ್ಲವೋ ಅವು ನಡೆದಿವೆ ಅಡಿಗಡಿಗೂ
ಬಿರಿದು ಕಾಡುತ್ತಿವೆ,ಹಾದಿಬೀದಿಯಲಿ
ಬೊಳ್ಳು ಹಾಕುತ್ತಿವೆ ಗುಳ್ಳೆನರಿಗಳು
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಮೊಡ್ಡಾಗಿವೆ ಮೊನಚು ಸೂಜಿಗಳು
ಹೊಲೆಯಲಾಗದೆ ಬದುಕ ಚಾದರವ
ಮೈಯ್ಯೊಡ್ಡಿ ನಿಂತಿವೆ ಬಿಸಿಲ್ಮಳೆಚಳಿಗೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಸಿಹಿಯಾಗಲೊರಟ ಊಟದಲೂ
ನಂಜನುಣ್ಣುತಿವೆ ಬದುಕಲೋಸುಗ
ಮಸಕಾಗಿವೆ ಹೊಸಕಿ ಹಾಕದೆ ಹುಳುವ
ನೀನಿಲ್ಲದೆ ನಮ್ಮೊಳಗೆ ,ಅವತರಿಸು ಮತ್ತೊಮ್ಮೆ.
ಸಾಕಿಡಿಸಿದ ಹಸಿ ಹುಸಿಭರವಸೆಗಳು
ಮಾರುತ್ತಿವೆ ಹಸಿಮಾಂಸದ ಮುದ್ದೆಗಳ
ಕಾಳಸಂತೆಯ ಕದ್ದ ಮಾಲುಗಳಂತೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಅರೆಬೆಂದ ಹಸಿ ಉರುವಲ ಉರಿ
ಉಗುಳುತ್ತಿದೆ ಕಾರೊಗೆಯ ಬೂದಿ
ಸುರಿದಂತೆ ಬಾನಿಂದ ಆಮ್ಲಮಳೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ನೀನಿದ್ದರೆ ನಮ್ಮೊಳಗೆ ಹೆದ್ದಾರಿಯೇ
ಆಗುವೆ ಕಾಲುದಾರಿಯ ಬದಲಾಗಿ
ಕೊಂಡೊಯ್ಯುವೆ ನಮ್ಮವರ ಗುರಿ ಮುಟ್ಟುವರೆಗೆ
ನೀನಿಲ್ಲಿಯೆ ಅವತರಿಸು ,ಮತ್ತೊಮ್ಮೆ ನಮ್ಮೊಳಗೆ.
ನೀನಿದ್ದರೆ ನಮ್ಮೊಳಗೆ ಜಗಕೆ ಕಣ್ಣೇ
ಆಗುವೆ ಹುಣ್ಣಾಗುವ ಬದಲಾಗಿ
ಕರೆದೊಯ್ಯುವೆ ನಮ್ಮವರ ಬೆಳಕಿನೆಡೆಗೆ
ನೀನಿಲ್ಲಿಯೆ ಅವತರಿಸು, ಮತ್ತೊಮ್ಮೆ ನಮ್ಮೊಳಗೆ.
ವಿಷ್ಣುವಿನಿಗ್ಷಟೇ ಏಕೆ ದಶಾವತಾರ
ನೀನೂ ತಳೆ ಮತ್ತೊಂದು ಅವತಾರ
ಕೊಡು ನಿನ್ನವರಿಗೆ ಯಶೋಹತಾರ
ಓ ನನ್ನವರ ಧೀಶಕ್ತಿ ಶ್ರೀ ಅಂಬೇಡ್ಕರ.
ರಚನೆ: ಕುಮಾರ್. ಬಿ.ಬಾಗೀವಾಳ್.
Comments
Post a Comment