Poem on Vishwa Guru Basavanna
ಬಸವ ಸೂಕ್ತಿ
ಅಂದಚ್ಚಿದ ಜ್ಯೋತಿಯೊಂದಲುಗದೇ
ಉರಿಯುತಿದೆ ಇಂದಿಗೂ ಜಾತಿಗೂಮಿಗಿಲಾಗಿ
ಮಾತಿಗೂ ಕೃತಿಯಾಗಿ ಕಾಯಕೂ ಕಾಯಕವಾಗಿ
ಭಾನಗಲಕೂ ಬೆಳಕಾಗಿ,ಸರ್ವರಿಗೂ ಸಮನಾಗಿ.
ಅಂದುಲಿದ ವಚನಗಳಾಗಿವೆ ಅಮೃತವು
ಆವರಿಸಿವೆ ಭುವಿಯ ಭವಿಷ್ಯದೊಳಿತಾಗಿ
ಮತಿಗೂ ಮದ್ದಾಗಿ ಮಿತಿಗೂ ಮತಿಯಾಗಿ
ಸಾರಿದ ಸಾರವದು ಪಿರಿದಾಗಿದೆ ಬದುಕಾಗಿ.
ಅಂದಂಗೈಯೇರಿದ ಸಿರಿಯು ಗಿರಿಯಾಗಿ
ಹಣೆಮೇಲನ ವಿಭೂತಿಯದುವೆ ಬಂಧವಾಗಿ
ಸಂಘಟಿಸಿದೆ ಸಂದವರನೆ ವಂಧ್ಯವಾಗಿ
ಸಮ್ಮಿಳಿತವದು ಷಟ್ಸ್ಥಲವು ಷಡ್ವರ್ಗಗಳ ಗೆಲುವಿಗಾಗಿ.
ಜಂಗಮವೊಂದುಳಿದಿದೆ ಜಗದಗಲದಲಳಿಯದೆ
ಸ್ಥಾವರವಳಿದಿದೆ ಉಳಿವಿಗಿಲ್ಲದ ನಾಮಕಾಗಿ
ಧ್ಯಾನಕೂ ದಾರಿಯಾಗಿ ಮೌನಕೂ ಮಾತಾಗಿ
ತೋರಿದಾ ದಿಕ್ಕಿನಲೇ ಸಾಗಿ ಸೇರಿದೆ ಗುರಿಯಾಗಿ.
ಒಂದಗುಳಂಚಿದಾ ಅನುಭವವು ಅವಿರತ
ಬಂದು ಬಡಿಸಿದೆ ಹಸಿದೊಡಲಿಗೆ ಮತವೆಣಿಸದಾಗಿ
ಕಂದುಕರಿವ ನಂದಾದೀಪಕ್ಕೊನಿತು ತೈಲಕಾಗಿ
ಕಂದಿರದ ಮಹಾದಾಸೋಹದ ಥೈಲಿ ತುಂಬಿದೆ ಸಾಂಗವಾಗಿ.
ನಡೆದ ಪಥವೇ ಮತವಾಗಿದೆ ನಿನ್ನ ವೇದ್ಯವಾಗಿ
ವೇದ ಮಂತ್ರ ತಂತ್ರಗಳ ಬದಿಗೊತ್ತಿ ದಿವ್ಯವಾಗಿ
ಭಕ್ತಿ ಇಂದಲೇ ಮುಕ್ತಿಗಾಗಿ ಅದ್ವೈತಕೂ ಶಕ್ತಿಯಾಗಿ
ಬಸವ ಬಸವ ಬಸವಾನೆನುವ ಸೂಕ್ತಿಯಾಗಿ.
ರಚನೆ : ಕುಮಾರ್ ಬಿ ಬಾಗೀವಾಳ್.
ಶಿಕ್ಷಕರು.
ಸರ್ಕಾರಿ ಪ್ರೌಢಶಾಲೆ ಮೇಟಗಳ್ಳಿ
ಮೈಸೂರು.
Comments
Post a Comment