. Poem Nannishtadanthe na bareda saalu , By Kumar B Bagival

ನನ್ನಿಷ್ಟದಂತೆ ನಾ ಬರೆದ ಸಾಲು

ನನ್ನಿಷ್ಟದಂತೆ ನಾ ಬರೆದ ಸಾಲು
ಬಾಗಿಲ ಬಳಿ ನಿಂತು ಕಾಯುವ 
ಸೈನಿಕನ ತ್ಯಾಗಮಯಿ ಮಡದಿಯಂತೆ 
ಭಯಕ್ಕಿಂತ ಅವನನ್ನೊಮ್ಮೆ ನೋಡುವ ಕಾತರ,
ಎಂಟೆದೆಯ ಭಂಟ ಯುಧ್ಧ ಗೆದ್ದು
ಬಂದೇ ಬರುವನಂಬ ಹುಚ್ಚು ಹಂಬಲದಂತೆ.

ನನ್ನಿಷ್ಟದಂತೆ ನಾ ಬರೆದ ಸಾಲು
ನೆಲಕೆ ಬೀಜವ ಬಿತ್ತಿ ನೆತ್ತಿ ಎತ್ತಿ
ಮುಗಿಲ ಕಡೆಗೊಮ್ಮೆ ನೋಡುವ
 ರೈತನ ಬಲವಾದ ನಂಬಿಕೆಯಂತೆ
ನಷ್ಟಕ್ಕಿಂತ ಬೆಳೆದ ಬೆಳೆಯ ನೋಡುವ ಕಾತರ,
ಕಷ್ಟ ಕಾಲವ ನೀಗೇನೀಗುವೆನೆಂಬ ಹಂಬಲದಂತೆ.

ನನ್ನಿಷ್ಟದಂತೆ ನಾ ಬರೆದ ಸಾಲು
ಅಮ್ಮನೊಡಲಿಂದ ಜನಿಸಿದ 
ಇದೀಗ ತಾನೆ ಹುಟ್ಟಿ ಮಗುವಿನಂತೆ 
 ಅಳುವು ಹೆದರಿಕೆಗಿಂತ ಅಮ್ಮನಾಲಿಂಗನದ ಕಾತರ,
ನನ್ನೇಳುಬೀಳುಗಳಿಗೆ ಅಮ್ಮನಿರುವಳೆಂಬ  
ಅಮ್ಮನೆದೆಯನಪ್ಪಿ ಬಿಸಿಯಾಗುವ ಹಂಬಲದಂತೆ

ನನ್ನಿಷ್ಟದಂತೆ ನಾ ಬರೆದ ಸಾಲು
ನವಜೀವನಕೆ ಕಾಲನಿಡುವ 
ನವವಧುವಿನ ಕಣ್ಣೀರ ಧಾರೆಯಂತೆ
ಕಷ್ಟಕ್ಕಿಂತ ಬಯಸುವ ಜೀವನದ ಕಾತರ
ಜೀವನದ ಕೊನೆ ತಿರುವಿನವರೆಗೂ ಬೆರಳಿಡಿವ      
 ಇನಿಯನಿರುವೆನೆಂಬ ಹುಚ್ಚು ಹಂಬಲದಂತೆ.

ನನ್ನಿಷ್ಟದಂತೆ ನಾ ಬರೆದ ಸಾಲು
ಮೊದಲ ಹೆಜ್ಜೆಯನಿಡುವ ಮಗುವಿನಂತೆ
ಬೀಳುವ ಭಯಕ್ಕಿಂತ, ನಡೆದೇ ತೀರುವ ಕಾತರ
ಬಿದ್ದರೂ ಎದ್ದು ನಿಲ್ಲುವ ಹಠವಿರುವುದಿಲ್ಲಿ
ಎಡೆಬಿಡದ ಹಾಗೆ ಎತ್ನಿಸುವ ಸಾಹಸಿಗನು
ಗೆದ್ದೇ ಬೀಗುವೆನಂಬ ಹುಚ್ಚು ಹಂಬಲದಂತೆ.

ನನ್ನಿಷ್ಟದಂತೆ ನಾ ಬರೆದ ಸಾಲು
ಬರೆದ ಸಾಲಿಗೆ ಭಾವಜೀವನೀವ
ಎದೆತುಂಬಿ ಹಾಡುವ ಗಾಯಕನಂತೆ
ಕೇಳುಗರ ಲೆಕ್ಕಕ್ಕಿಂತ ಸಾಲಿಗೆ ಜೀವತುಂಬೊ ಕಾತರ
ಸಭಿಕರ ತೃಪ್ತಿಯಲ್ಲೇ ತೃಪ್ತನಾಗಬಯಸುವ
ಬಹುಮಾನಕ್ಕಲ್ಲದೆ ಹಾಡುವ ಹುಚ್ಚು ಹಂಬಲದಂತೆ.

ನನ್ನಿಷ್ಟದಂತೆ ನಾ ಬರೆದ ಸಾಲು
ಅಂತರಾಳದ ಮೌನ ಮುರಿದ ಮಾತುಗಳಿಗೆ
ಪದಗಳ ಹೊದಿಕೆಯೊದಿಸುವ ಕವಿಯಂತೆ
ಹೋಲಿಸುವುದಕ್ಕಿಂತ ಓದಿಸುವ ಕಾತರ
ಸೋಲುವ ಪದಗಳನು ಗೆಲುವಿನಾದಿಗೆ ಎಳೆವ
ಸಾಲನೇರಿ ಸಂಭ್ರಮಿಸೋ ಹುಚ್ಚು ಹಂಬಲ.

ರಚನೆ : ಕುಮಾರ್. ಬಿ.ಬಾಗೀವಾಳ್.














Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES