NAYIKODE poem, by Kumar B Bagival
ನಾಯಿಕೊಡೆ
ನಾಯಿಕೊಡೆಗಳಾಗಿವೆ ಬದುಕು,
ಹುಟ್ಟಿದೆಲ್ಲವೂ ಬದುಕುಳಿಯಲಿಲ್ಲ,
ಸುಟ್ಟಿವೆ ನೆಟ್ಟ ಸಸಿಗಳೆಲ್ಲವು,
ಬಟಾಬಯಲಾಗಿವೆ ವನಮನಗಳು,
ಗಿಡವಾಗಲಿಲ್ಲ, ಮರಮುಟ್ಟಾಗಲಿಲ್ಲ,
ಹೂ ,ಕಾಯಿ, ಹಣ್ಣು ,ಮೊದಲೇ ಇಲ್ಲ
ಹುಟ್ಟಿದ್ದೇ ದೊಡ್ಡದಲ್ಲ ಈ ಧರೆಯೊಳಗೆ
ಕರಗಿ ಕೊರಗಿ ಕೊನೆಯುಸಿರೆಳೆದವರ
ಕಳೆಬರದ ಮೇಲಿನ ಬದುಕು.
ಸಾಮೂಹಿಕ ಚರ್ಚೆಯಿದು, ಬಲಿವ
ಮುನ್ನವೇ ಸೂತಕದ ವಾಸನೆ,
ಯಾವುದೋ ಸಾಂಕ್ರಾಮಿಕ ರೋಗ
ಬಂದು ಮುಗಿಯಿತೇ ಎನ್ನುವಂತೂ ಇಲ್ಲ.
ಮರುಗಟ್ಟುವ ಮರುಕ ಮೊದಲಿಲ್ಲ.
ಯಾತಕ್ಕಾಗಿ ಹುಟ್ಟಿದವೋ? ಗೊತ್ತುಗುರಿಯಿಲ್ಲ.
ಹೊತ್ತುರಿವ ಬಯಕೆಗಳಿಗೆ ದಹ್ಯವೂ ಅಲ್ಲ.
ಧಮನವಾಗಲೆಂದೇ ಬಂದಂತಿದೆ ಭುವಿಗೆ,
ಪುನರ್ ಹುಟ್ಟಿಗೂ ಕಳೆಬರದ ನಂಟು
ಅಂಟಿದ ಕಳಂಕ, ಪೀಳಿಗೆಯ ಊಳಿಗದ
ಹಸನಾದ ಹಸುಗೂಸು ಎನ್ನುವಂತಿಲ್ಲ.
ಇರುಳ ಕನಸು ಇರುಳಲೇ ಕರಗಿದಂತೆ
ಮರುದಿನದ ಬದುಕು ಅರಳಲೇ ಇಲ್ಲ.
ಕೊನೆಯುಸಿರೂ ಅದೇ ಕಳೆಬರದ ಮೇಲೆ.
ನಾಯಿಕೊಡೆಗಳಗಿವೆ ಬದುಕು
ಹುಟ್ಟದೆಲ್ಲವೂ ಬದುಕುಳಿಯಲಿಲ್ಲ.
ರಚನೆ: ಕುಮಾರ್. ಬಿ.ಬಾಗೀವಾಳ್.
Comments
Post a Comment