STORY HOSA CHIGURAGONA By Kumar B Bagival.

ಕಥೆ ಹೇಳುವೆ...



ಹೊಸ ಚಿಗುರಾಗೋಣ.



ವಸಂತಕಾಲದ ಆರಂಭದಲ್ಲೊಂದು ದಿನ ಬೇಗ ಕೆಲಸ ಮುಗಿಸಿ ಮನೆಗೆ 
ಬಂದ ಅಪ್ಪ ಮಕ್ಕಳೊಂದಿಗೆ ಮನೆಯ ಪಕ್ಕದಲ್ಲೇ ಇರುವ ಉದ್ಯಾನ ವನಕ್ಕೆ ಸಣ್ಣದೊಂದು ವಾಕ್ ಹೊರಟರು.ಮಕ್ಕಳೆಂದರೆ ಕೇಳಬೇಕೆ ಅವು ಕುತೂಹಲದ ಕಣಜ, ದಾರಿಯುದ್ದಕ್ಕೂ ಪ್ರಶ್ನೆಗಳೇ,ಮಕ್ಕಳ ಪ್ರಶ್ನೆಗಳಿಗೆ, ಮಕ್ಕಳ ಮಟ್ಟಕ್ಕೇ ಇಳಿದು ಉತ್ತರಿಸುತ್ತಾ ಕುತೂಹಲ ತಣಿಸುತ್ತಿದ್ದರು ಅಪ್ಪ. ಉದ್ಯಾನವನದಲ್ಲಿ ಒಂದು ಸುತ್ತು ಸುತ್ತಿ ಪಕ್ಕದಲ್ಲೇ ಇದ್ದ ಸಿಮೆಂಟ್ ಕುರ್ಚಿಯ ಮೇಲೆ ಕುಳಿತರು. ಉದ್ಯಾನವನ ಮರಗಿಡಗಳಿಂದ ತುಂಬಿತ್ತು ತಂಪಾದ ತಂಬೆಲರು, ವಾಕ್ ಮಾಡುವ ಜನರ ಅವಸರದ ನಡಿಗೆ ಅಲ್ಲಿನ ಸಾಮಾನ್ಯ ದೃಶ್ಯ. ಅಲ್ಲೆ ಆಟವಾಡುತ್ತಿದ್ದ ಮಗು ಏನೋ ನೆನಪಿಸಿಕೊಂಡಂತೆ ಓಡಿಬಂದು ಒಂದು ಮರವನ್ನು ತೋರಿಸುತ್ತ ಅಪ್ಪನಿಗೆ ಪ್ರಶ್ನಿಸಿತು.“ಅಪ್ಪ ಅಪ್ಪ ಈ ವಾರದ ಹಿಂದೆ ಅಮ್ಮನೊಂದಿಗೆ ಬಂದಾಗ ಆ ಮರದ ತುಂಬ ಎಲೆಗಳಿದ್ದವು ಈಗ ನೋಡಿದರೆ ಒಂದೂ ಎಲೆಗಳೇ ಇಲ್ಲ ಯಾಕಪ್ಪ ಆ ಮರಕ್ಕೆ ಏನಾದರು ಕಾಯಿಲೆಯೇ?”ಎಂದು ಪ್ರಶ್ನಿಸಿತು. ಉತ್ತರಿಸಲು ಒಂದು ವಾರದ ಸಮಯ ಕೊಡುವಂತೆ ಮಗುವಿನಲ್ಲಿ ಕೇಳಿಕೊಂಡ ಅಪ್ಪ ಮನೆಗೆ ಮಕ್ಕಳೊಂದಿಗೆ ಬಂದರು. ವಾರ ಕಳೆಯಿತು ಮಕ್ಕಳನ್ನು ಅದೇ ಉದ್ಯಾನವನಕ್ಕೆ ಕರೆದುಕೊಂಡು ಬಂದರು. ಮಗುವಿಗೆ ಆ ಮರವನ್ನು ತೋರಿಸುವಂತೆ ಹೇಳುವರು.ಮಗು ಆ ಮರವನ್ನು ಗುರುತಿಸಿ “ ಮರಕ್ಕೆ ಹೊಸ ಎಲೆಗಳು ಬಂದಿವೆ” ಎಂದಿತು.
ಈಗ ಅಪ್ಪ ಮಗುವಿನ ಪ್ರಶ್ನೆಗೆ ಉತ್ತರಿಸುತ್ತಾ “ಮಗು ಮರಗಳು ಫಾಲ್ಗುಣ ಮಾಸದ ಕೊನೆಯಲ್ಲಿ ತನ್ನ ಅನುಪಯುಕ್ತ ಎಲೆಗಳನ್ನು ಉದುರಿಸುವ ಗುಣ ಹೊಂದಿವೆ, ಅವು ಬೇಡದ,ತನ್ನ ಬೆಳವಣಿಗೆಗೆ ತೊಡಕಾಗಬಹುದಾದ ಎಲೆಗಳನ್ನು ತ್ಯಜಿಸಿ,ಅವನ್ನು ಕಳೆದುಕೊಂಡೆನಲ್ಲಾ ಎಂದು ಯೋಚಿಸದೆ,ವಸಂತದಲ್ಲಿ ನವಚೈತನ್ಯ,ನವೋಲ್ಲಾಸದ ,ಹೊಸ ಹುರುಪಿನ ಚಿಗುರೆಲೆಗಳನ್ನು ಹೊಂದಿ ಹೊಸ ವರ್ಷದ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗುತ್ತವೆ ಹಾಗಾಗಿ ನೀನು ಅಮ್ಮನೊಂದಿಗೆ ಬಂದಾಗ ಅದರಲ್ಲಿ ಎಲೆಗಳು ಉದುರಿದ್ದು” ಎನ್ನುತ್ತಾರೆ. ಅಷ್ಟರಲ್ಲೇ ಮಗು ಮತ್ತೆ ಅಪ್ಪನ್ನು “ನಮಗ್ಯಾಕೆ ಹಾಗಿಲ್ಲ ಅಪ್ಪ.”ಎಂದು ಪ್ರಶ್ನಿಸುತ್ತದೆ. ಮಗುವಿನ ಪ್ರಶ್ನೆಯ ಗಾಂಭೀರ್ಯತೆ ಅರಿತ ಅಪ್ಪ ಮಗುವಿಗೆ “ಮಗು ಮನುಷ್ಯರಿಗೂ ಈ ವರ ಇದೆ ಆದರೆ ರೂಢಿಸಿಕೊಳ್ಳಬೇಕಷ್ಟೆ, ನಮಗೂ ಬೆಳವಣಿಗೆಯ ಪ್ರತಿ ಹಂತದಲ್ಲೂ ತೊಡಕಾಗಬಹುದಾದ,ಕೆಟ್ಟಗುಣಗಳುಚಕೆಟ್ಟ ಆಲೋಚನೆಗಳು, ಅನುಪಯುಕ್ತ ಯೋಜನೆಗಳು,ನಕಾರಾತ್ಮಕ ಚಿಂತನೆಗಳು, ಇತ್ಯಾದಿಗಳನ್ನು ಮರಗಳು ಎಲೆಗಳನ್ನು ತ್ಯಜಿಸುವಂತೆ ತ್ಯಜಿಸಬೇಕು. 
ತೊಡಕಾಗಬಹುದಾದ ಕೈ ಮೀರಿ ಕಳೆದು ಹೋದ ಅವಕಾಶಗಳನ್ನು ನೆನೆದು ಕಳೆದು ಹೋಯಿತು ಎಂದು ಯೋಚಿಸದೆ, ನವ ಚಿಗುರಿನಂತೆ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಬಂದದ್ದೇ ಆದಲ್ಲಿ ನಮ್ಮ ಜೀವನದಲ್ಲಿ ಬರುವ ನವದಿನಗಳಲ್ಲಿ ಯಶಸ್ಸು ಖಂಡಿತವಾಗಿ ನಮ್ಮದಾಗುತ್ತದೆ.” ಎನ್ನುತ್ತಾರೆ. ಮಗು ಅಪ್ಪನ ಉತ್ತರಕ್ಕೆ ಉತ್ತಮವಾದದ್ದನದನ್ನು ಪಡೆಯಲು ಕೆಲವನ್ನು ತ್ಯಜಿಸಬೇಕಾಗುತ್ತದೆ ಎಂಬುದನದನ್ನು ಅರಿಯುತ್ತದೆ.ಅಪ್ಪ ಮಕ್ಕಳ ದಾರಿ ಮನೆಯ ಕಡೆ ಸಾಗುತ್ತದೆ.
ನಮ್ಮ ಜೀವನದ ದಾರಿಯಲ್ಲಿ ಸಾಕಷ್ಟು ಅಡೆತಡೆಗಳನ್ನು , ಅಧೈರ್ಯವನ್ನು ,ನಕಾರಾತ್ಮಕ ಯೋಚನೆಯನ್ನು, ಇತ್ಯಾದಿಗಳನ್ನು ತ್ಯಜಿಸಿದಾಗ ಮಾತ್ರವೇ ನೆಮ್ಮದಿಯ ಶಾಂತಿಯುತ ಜೀವನ ಸಾಧ್ಯವಾಗುತ್ತದೆ.


ರಚನೆ: ಕುಮಾರ್. ಬಿ.ಬಾಗೀವಾಳ್.
         ಶಿಕ್ಷಕರು, ಹವ್ಯಾಸಿ ಬರಹಗಾರರು.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES