ಕೊರೋನಾದಿಂದಾಗಿ ರಾಜ್ಯ,ರಾಷ್ಟ್ರದ ಶೈಕ್ಷಣಿಕ ಮಜಲು ಬದಲಾಗಬಹುದೇ?
ಕರೋನಾ ಕರೋನಾ…. ಇಡೀ ಪ್ರಪಂಚವನ್ನೇ ಮುದುಡಿ ಕೂರವ ಹಾಗೆ ಮಾಡಿದ ಮಹಾ ಮಾಯರೋಗ. ವಿಶ್ವದ ಪ್ರತೀ ರಾಷ್ಟ್ರವೂ ತನ್ನ ಎಲ್ಲಾ ರಂಗದಲ್ಲಿಯೂ ಹಿನ್ನಡೆಯನ್ನು ಅನುಭವಿಸುತ್ತಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ,...ಹೀಗೆ ಹಲವು ಕ್ಷೇತ್ರಗಳಲ್ಲಿ ಕಂಗಾಲಾಗಿವೆ. ಸರ್ಕಾರಗಳು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿವೆ ಆದರೂ ತಹಬದಿಗೆ ತರುವುದು ತ್ರಾಸವಾಗುತ್ತಿದೆ. ಶೈಕ್ಷಣಿಕ ಕೇಂದ್ರಗಳ ಬಾಗಿಲುಗಳಿಗೆ ಬೀಗ ಬಿದ್ದು ತಿಂಗಳುಗಳೇ ಕಳೆದಿವೆ, ಇನ್ನು ಭಾರತದಲ್ಲಿ ಇವು ಬಹುತೇಕ ಶೈಕ್ಷಣಿಕ ಫಸಲನ್ನು ತೆಗೆಯುವ ದಿನಗಳು. ಕಳೆದ ಶೈಕ್ಷಣಿಕ ವರ್ಷದ ಕೊನೆಯವರೆಗೂ ಸಾಕಷ್ಟು ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಬೋಧಿಸಿ, ಪರೀಕ್ಷೆಗೆ ತಯಾರು ಮಾಡುತ್ತಿದ್ದ ಕಾಲವದು ಇನ್ನೇನು ಪರೀಕ್ಷೆಗಳನ್ನು ನಡೆಸಬೇಕೆಂದು ಎಲ್ಲಾ ತಯಾರಿ ನಡೆಸಿ ಕೆಲವೊಂದು ತರಗತಿಗಳಿಗೆ ಪರೀಕ್ಷೆನ್ನೂ ನಡೆಸಿಯಾಗಿತ್ತು, ಆದರೆ ಅದು ಕೇವಲ ಒಂದಂಕಿಯ ಪ್ರತಿಶತವಷ್ಟೆ. ಅವನ್ನೂ ಪೂರ್ಣ ಪ್ರಮಾಣದಲ್ಲಿ ಮಾಡಲಾಗದ ಸ್ಥಿತಿಯನ್ನು ತಲುಪಿ ಬಿಟ್ಟಿವೆ. ಪ್ರಾಥಮಿಕದಿಂದ ಹಿಡಿದು ಪದವಿ, ಸ್ನಾತಕೋತ್ತರ ಪದವಿಗಳವರೆವಿಗೂ ಪರೀಕ್ಷೆಗಳನ್ನು ನಡೆಸುವ ಮುನ್ನವೇ ಕರೋನಾದಿಂದಾಗಿ ಸರ್ಕಾರದ ವಿಧಿಯಿಲ್ಲದ ಪ್ರಯತ್ನ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ಗೆ ಒಳಪಟ್ಟು ಶಾಲಾ ಕಾಲೇಜುಗಳು ಅನಿರ್ದಿಷ್ಟ ಅವದಿಗೆ ಮುಚ್ಚಿಬಿಟ್ಟಿವೆ. ಈ ಅವಧಿಯಲ್ಲಿ ಶಿಕ್ಷಕರಿಗೆ ವಿಧ್ಯಾರ್ಥಿಗಳ ಓದು ಬರಹ, ಅಭ್ಯಾಸ, ಕಲಿಕೆಯ ನಿರಂತರದ್ದೇ ಕಳವಳ. ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕರೋನಾ ಬೋನಸ್ ಪರೀಕ್ಷೆಗಳಿಲ್ಲದೇ ಪಾಸ್! (ಹಿಂದಿನ ಹಂತದ ರೂಪಣಾತ್ಮಕ ಪರೀಕ್ಷೆಗಳ ಆಧಾರದ ಮೇಲೆ). ಆದರೆ ನಿರ್ಣಾಯಕ ಹಂತದ ಪರೀಕ್ಷೆಗಳನ್ನು ನಿಭಾಯಿಸುವ ತಳಮಳ ಸರ್ಕಾರದ ಮಟ್ಟದ್ದು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಓದು, ಕಲಿಕೆ , ಅಭ್ಯಾಸಗಳನ್ನು ಮುಂದುವರಿಸಲು ಶಾಲಾ, ಕಾಲೇಜು,ಸರ್ಕಾರ, ಖಾಸಗಿ ಕೋಚಿಂಗ್ ಸೆಂಟರ್ಗಳು ಜಪಿಸಿದ ಮಂತ್ರ ಆನ್ ಲೈನ್ ಶಿಕ್ಷಣ. ಒಬ್ಬೊಬ್ಬರದು ಒಂದೊಂದು ವಿಧ , ಈ ನಿಟ್ಟಿನ ಮೊದಲ ಪ್ರಯತ್ನ ಮಾಡಿದ ಹೆಮ್ಮೆ ಸರ್ಕಾರಿ ಶಾಲೆಗಳದ್ದು ಎನ್ನುವುದಕ್ಕೆ ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕನಾಗಿ ನನಗೆ ಹೆಮ್ಮೆ ಅನಿಸುತ್ತದೆ. ಶಾಲೆಗಳಿಗೆ ಲಾಕ್ ಡೌನ್ ರಜೆ ನೀಡಿದಾಗ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಶಿಕ್ಷಕರು ಇ-ಸಂಪನ್ಮೂಲ ರಚಿಸಬೇಕು, ಸಾದ್ಯವಾದರೆ ಆನ್ ಲೈನ್ ತರಗತಿ ಆಯೋಜಿ ವಿದ್ಯಾರ್ಥಿಗಳ ಅಭ್ಯಾಸ ಅವಲೋಕಿಸಬೇಕು ಎಂದಿತು. ಆದರೆ ಒಂದು ಹೆಮ್ಮೆಯ ವಿಷಯವೆಂದರೆ ಕರ್ನಾಟಕದ ಬಹುತೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇದಾಗಲೇ ಈ ಯೋಜನೆಯನ್ನು ಸದ್ದಿಲ್ಲದೆ ಜಾರಿಗೆ ತರಲಾಗಿತ್ತು ಎಂಬುದರಲ್ಲಿ ಆಶ್ಚರ್ಯವಿಲ್ಲ.
ಈ ವ್ಯವಸ್ಥೆಯನ್ನು ಬಹುತೇಕ ಶಾಲೆಗಳು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ರೂಢಿಸಿಕೊಂಡು ಬಂದಿದ್ದವು ಆದರೆ ಮುನ್ನಲೆಗೆ ಬರಲು ಕರೋನಾ ಲಾಕ್ ಡೌನ್ ಕಾರಣವಾಯಿತು ಎಂಬುದು ವಿಪರ್ಯಾಸ. ಬಹುತೇಕ ಶಾಲೆಗಳು ಬೇರೆಬೇರೆ ವಿಧಾನಗಳಲ್ಲಿ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದವು, ಅದರಲ್ಲೂ ವಾಟ್ಸಪ್ ಗ್ರೂಪ್ ರಚಿಸಿ( ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡ) ಶಾಲಾ ಸಮಯದಾಚೆಗೂ ವಿದ್ಯಾರ್ಥಿಗಳಿಗೆ ವಿಷಯ ಸಂಪನ್ಮೂಲಗಳನ್ನು, ಗಮನಿಸಬೇಕಾದ ವಿಷಯಗಳನ್ನು, ಪ್ರಶ್ನೆ ಪತ್ರಿಕೆಗಳನ್ನು,ಮಾದರಿ ಉತ್ತರ ಪತ್ರಿಕೆಗಳನ್ನು ನೀಡುತ್ತಾ ಕಲಿಕಾ ನಿರಂತರತೆ ಕಾಯ್ದುಕೊಂಡು ಯಶಸ್ವಿಯಾಗಿದ್ದಾರೆ. ಯೂಟ್ಯೂಬ್ ನಲ್ಲಿ ತಮ್ಮ ಬೋಧನೆಯ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಲಿಂಕ್ಗಳನ್ನು ಗ್ರೂಪ್ ನಲ್ಲಿ ಹಂಚಿಕೊಂಡು ರಜೆ ಸಮಯದ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಲಾಕ್ ಡೌನ್ ಸಮಯದಲ್ಲಿ ಈ ಆನ್ ಲೈನ್ ತರಗತಿ ಶಬ್ಧ ತುಂಬ ಪ್ರಚಲಿತವಿರುವ ಶಬ್ಧ, ಪ್ರೌಢಶಾಲಾ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಗಳು ಈಗ ಈ ಜಪ ಮಾಡುತ್ತಿರುವುದು ವಿಪರ್ಯಾಸ. ಖಾಸಗಿ ಸಂಸ್ಥೆಗಳು, ವಿವಿಧ ಕೋಚಿಂಗ್ ಸೆಂಟರ್ ಗಳು ಈ ವಿಚಾರವನ್ನೇ ಬಂಡವಾಳವನ್ನಾಗಿಸಿ ಪೋಷಕರನ್ನು ಮೆಚ್ಚಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಹೀಗಿರುವಾಗ ಸ್ವಪ್ರೇರಣೆಯಿಂದ ಆನ್ ಲೈನ್ ಶಿಕ್ಷಣ ದತ್ತ ಮುಖಮಾಡಿರುವ ಸರ್ಕಾರಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಕಾರ್ಯ ಅಭಿನಂದನೀಯ.
ಆದರೆ ಇದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪಡೆದಿದೆಯಯಾ ? ಉತ್ತರ ಇಲ್ಲ ಎಂದೇ ಹೇಳಬಹುದು ಕಾರಣ ಇಷ್ಟೇ ಪೂರ್ವ ತಯಾರಿ ಇಲ್ಲದ್ದು, ಹಾಗು ಶಿಕ್ಷಣ ಪೂರೈಕೆಯ ಮತ್ತೊಂದು ಮಜಲಾದ ಆನ್ ಲೈನ್ ಶಿಕ್ಷಣ ವ್ಯವಸ್ಥೆಯ ತರಭೇತಿ, ಅನುಭವದ ಕೊರತೆ. ಪರೀಕ್ಷಾ ಹಂತಕ್ಕೆ ತಲುಪಿರುವ ನಮಗೆ, ಆನ್ ಲೈನ್ ಮೂಲಕ ವಿದ್ಯಾರ್ಥಿಗಳನ್ನ ತಲುಪುತ್ತಿರುವ ನಮಗೆ , ಆನ್ ಲೈನ್ ಮೂಲಕ ಪರೀಕ್ಷೆಗಳನ್ನು , ಆ ಪರೀಕ್ಷೆಗಳ ಮೌಲ್ಯಮಾಪನವನ್ನು ಹೇಗೆ ನಡೆಸುವುದೆಂಬುದೇ ಸರ್ಕಾರದ ಮಟ್ಟದಲ್ಲಿನ ಚಿಂತೆ.
ತಾಂತ್ರಿಕವಾಗಿ ಸಾಕಷ್ಟು ಬೆಳೆದಿರುವ ನಾವು ಈ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಂತೆ ಕಾಣುತ್ತಿದೆ. ಶೈಕ್ಷಣಿಕ ಅವಧಿಯಲ್ಲಿ ಸರ್ಕಾರದ ಶಿಕ್ಷಣ ಇಲಾಖೆ ಪ್ರತೀ ಶಿಕ್ಷಕರಿಗೂ TALP ತರಭೇತಿ ಮುಲೂಕ e-ಸಂಪನ್ಮೂಲವನ್ನು ಸೃಜಿಸುವ, ಬಳಸಿ ಬೋಧನಾ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವ , ಈ ಮೂಲಕ Soft,Smart ತರಗತಿಗಳನ್ನು ತರಗತಿ ಕೋಣೆಯೊಳಗೆ ನಡೆಸುವ ಕುರಿತಾಗಿ ತರಬೇತಿ ನೀಡಿರುವುದು ಈ ಸಂದರ್ಭದಲ್ಲಿ ಶ್ಲಾಘನೀಯ ವಿಚಾರ. ಅದರ ಬಳಕೆ ಕೂಡ ಉತ್ತಮವಾಗಿದೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಒಂದು ಅಭಿಪ್ರಾಯವಾದರೂ ಹೀಗಿದೆ , Soft,Smart ತರಗತಿಗಳನ್ನು ನಡೆಸಿದ ಶಿಕ್ಷಕರು , ಈ ತರಗತಿಗಳ ಮೂಲಕ ಕಲಿತ ವಿದ್ಯಾರ್ಥಿಗಳು ಇವರಿಬ್ಬರಿಗೂ ಪರೀಕ್ಷಾ ವಿಚಾರದಲ್ಲಿ ,ಮೌಲ್ಯಮಾಪನ ವಿಚಾರದಲ್ಲಿ , ವಿಧಿಯಿಲ್ಲದ ಹಳೇ ಪದ್ದತಿಯೇ ಇರುವುದು ಮಾತ್ರ ಆನ್ಲೈನ್ ಪರೀಕ್ಷೆ, ಮೌಲ್ಯಮಾಪನ ಮಾಡುವುದಕ್ಕಿರುವ ಹಿನ್ನಡೆ ಅನಿಸುತ್ತದೆ.
Soft ,Smart ತರಗತಿ ನಡೆಸುವ ಶಿಕ್ಷಕರಿಗೆ, ಕಲಿಯುತ್ತಿರುವ ಮಕ್ಕಳಿಗೆ ಪರೀಕ್ಷಾ ವಿಧಾನ ಮಾತ್ರ ಹಳೆಯ ಮಾದರಿ ಏಕೆ? ಒಮ್ಮೆಲೆ ಈ Smart evaluation ಜಾರಿಗೆ ತರುವುದು ಕಷ್ಟದ ಸಂಗತಿಯೇ ಸರಿ ಆದರೆ ಲಾಕ್ ಡೌನ್ ನಮ್ಮೆಲ್ಲರಿಗೂ ಪಾಠ ಕಲಿಸಿದೆ, ಸಾಕಷ್ಟು ಶಿಕ್ಷಕರು ಈ ಸಂದರ್ಭದಲ್ಲಿ e- content ರಚನೆ , ಮೌಲ್ಯಮಾಪನದಲ್ಲಿ ತಮ್ಮಷ್ಟಕ್ಕೇ ತಾವೇ ಸಣ್ಣ ಪ್ರಯತ್ನ ನಡೆಸುತ್ತಿದ್ದಾರೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ online ಬೋದನಾ-ಕಲಿಕಾ ಮಾದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇದು ಸೂಕ್ತ ಸಮಯವಲ್ಲವೇ ರಾಜ್ಯ,ರಾಷ್ಟ್ರದ ಶೈಕ್ಷಣಿಕ ದಿಕ್ಕನ್ನ ಬದಲಿಸಲು, ಬೋಧನೆ, ಕಲಿಕೆ ,ಮೌಲ್ಯಮಾಪನಕ್ಕೆ e- ಸ್ಪರ್ಷ ಕೊಡಲು, ಭಾರತದ ಶೈಕ್ಷಣಿಕ ವ್ಯವಸ್ಥೆಯ ಮಜಲನ್ನು ಬದಲಿಸಲು. ಹೌದು ಇದು ಸುಸಮಯ ಹಂತಹಂತವಾಗಿ ಈ ವ್ಯವಸ್ಥೆಗೆ ಹೊಂದಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ, ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯಾರ್ಥಿಯೋರ್ವ ಕಲಿಕಾ ತರಗತಿಗಳಿಂದ ವಂಚಿತನಾದರೂ ತನ್ನದೇ ಗುರುವಿನ ಬೋಧನೆಯನ್ನು ತಿಳಿಯಲು ಸೂಕ್ತ ವೇದಿಕೆಯಾಗಲಿದೆ, ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿ ಪರೀಕ್ಷೆ ಎದುರಿಸಲಾಗದಿದ್ದಾಗ ಈ ವಿಧಾನ ಅವನ ನೆರವಿಗೆ ಬರುವುದರಲ್ಲಿ ಸಂಶಯವಿಲ್ಲ.
ಮೇ ಕೊನೆಯ ವಾರದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಆರಬಿಸಬೇಕಿತ್ತು ಆದರೆ ಲಾಕ್ ಡೌನ್ ಅವಧಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ, ಮುಗಿದರೂ ಶಾಲಾ ಕಾಲೇಜುಗಳು ಆರಂಭವಾಗುವುದು ತಡವಾಗಬಹುದು . ಇತ್ತೀಚೆಗೆ ಯು.ಜಿ.ಸಿ. ಸಮಿತಿ ನೀಡಿದ ವರದಿಯಲ್ಲಿ ಶಾಲಾ- ಕಾಲೇಜುಗಳ ಆರಂಭ ಸೆಪ್ಟೆಂಬರ್ ನಲ್ಲಿ ಆರಭಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಯು.ಜಿ.ಸಿ.ಪರಿಗಣಿಸಿ ಕಾಲೇಜುಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಅದರ ಪ್ರಕಾರ ಸೆಪ್ಟೆಂಬರ್ ನಲ್ಲಿ ಹೊಸ ವಿದ್ಯಾರ್ಥಿಗಳ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಶಾಲಾ ಹಂತದಲ್ಲಿ ಇನ್ನೂ ನಿರ್ಧಾರವಾಗಿಲ್ಲ ಒಂದುವೇಳೆ ತರಗತಿಗಳು ಸೆಪ್ಟೆಂಬರ್ ನಲ್ಲಿ ಪ್ರಾರಂಭವಾದರೆ ದಾಖಲಾತಿ, ಸಿಲಬಸ್ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ e- ಆಡಳಿತದಲ್ಲಿ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ e- admission ಗೆ ಅನುವು ಮಾಡಿಕೊಡುವುದು ಸೂಕ್ತ ಎನಿಸುತ್ತದೆ ಮತ್ತು Online ಮೂಲಕ ಶೈಕ್ಷಣಿಕ ವರ್ಷ ಪ್ರಾರಂಭಿಸುವುದಕ್ಕೆ ಸೂಕ್ತ ಸಮಯ ಇದು ಈ ನಿಟ್ಟಿನಲ್ಲಿ ಚಿಂತನೆ ಆಗಬೇಕಿದೆ. ಘನ ಸರ್ಕಾರಗಳು ಯೋಚಿಸಿ ಯೋಜನೆಯನ್ನು ರೂಪಿಸಿ ಜಾರಿಮಾಡಲು ಸೂಕ್ತ ವಿಧಾನಗಳನ್ನು, ಸೂಕ್ತ ಸಲಹೆಗಾರರಿಂದ ಪಡೆದು, ಸೂಕ್ತ ತರಬೇತಿಯೊಂದಿಗೆ ಕಾರ್ಯ ರೂಪಕ್ಕೆ ತರುವುದು IT ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಕಷ್ಟವಾಗಲಾರದು…
ಈ ಎಲ್ಲಾ ಪ್ರಯತ್ನ ನಡೆದಿದ್ದೇ ಆದರೆ ಖಂಡಿತವಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಂತಾಗುತ್ತದೆ. ಎಲ್ಲವೂ ಆನ್ ಲೈನ್ ಆಗಿರುವ ಸಂದರ್ಭದಲ್ಲಿ ಈ ವ್ಯವಸ್ಥೆಯ ಪರಿಣಾಮಕಾರಿ ಜಾರಿ ಅವಶ್ಯ ಎಂಬುದನ್ನು ಮನಗಾಣಬೇಕಿದೆ. ಈಗಾಗಲೆ ಈ ದಾರಿಯಲ್ಲಿ ಸಾಗುತ್ತಿರುವ ನಮಗೆ ಇದು ಸಾದ್ಯವಾಗುವ ಕಾಲ ಹತ್ತಿರ ಬಂದಿದೆ, ರಾಜ್ಯ, ರಾಷ್ಟ್ರದ ಶೈಕ್ಷಣಿಕ ವ್ಯವಸ್ಥೆಯ ಮತ್ತೊಂದು ಮಜಲು ಕೊರೋನ ಕಾರಣದಿಂದ ಗೋಚರಿಸುತ್ತಿದೆ.. ಯಶ ಪಡೆಯುವ ನಿರೀಕ್ಷೆಯೊಂದು ಆಶಾಭಾವನೆಯೊಂದಿಗೆ ಸಾಗಿದೆ.
ಲೇಖಕರು : ಕುಮಾರ್. ಬಿ.ಬಾಗೀವಾಳ್.
ಸಮಯೋಚಿತ ಲೇಖನ, ಉತ್ತಮವಾಗಿ ಬರೆದಿದ್ದೀರಿ.
ReplyDeleteಧನ್ಯವಾದಗಳು ಸರ್
ReplyDelete